ವರದಿ: ವೀರೇಶ ಮಡ್ಲೂರ
ಹಾವೇರಿ: ಹಾನಗಲ್ಲ ಉಪಚುನಾವಣೆ ಟಿಕೆಟ್ ಪಡೆಯಲು ಕಾಂಗ್ರೆಸ್‌ನಲ್ಲಿ ಶುರುವಾಗಿದ್ದ ಹಗ್ಗಜಗ್ಗಾಟಕ್ಕೆ ಮಂಗಳವಾರ ಹೈಕಮಾಂಡ್ ತೆರೆ ಎಳೆದಿದ್ದು, ಅಂತಿಮವಾಗಿ ಶ್ರೀನಿವಾಸ ಮಾನೆ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಿದೆ.
ಸಿ.ಎಂ.ಉದಾಸಿ ನಿಧನದಿಂದ ತೆರವಾಗಿರುವ ಹಾನಗಲ್ಲ ಕ್ಷೇತ್ರದಲ್ಲಿ ಅ.30ರಂದು ಚುನಾವಣೆ ನಡೆಯಲಿದೆ. ಹಾನಗಲ್ಲ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಧಿಸೂಚನೆ ಪ್ರಕಟಗೊಂಡ ನಾಲ್ಕು ದಿನ ಕಳೆದರೂ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಯನ್ನು ಅಂತಿಮಗೊಳಿಸಿರಲಿಲ್ಲ. ಎರಡೂ ಪಕ್ಷಗಳ ನಾಯಕರು ಪ್ರಮುಖ ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿ ಅಲ್ಲಿಂದ ಬರುವ ಸಂದೇಶಕ್ಕಾಗಿ ಕಾಯುತ್ತಿದ್ದರು. ಮಂಗಳವಾರ ಸಂಜೆ ಕಾಂಗ್ರೆಸ್ ಹೈಕಮಾಂಡ್ ತಮ್ಮ ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡುವ ಮೂಲಕ ಉಪಚುನಾವಣೆ ಎದುರಿಸಲು ವೇದಿಕೆ ಸಿದ್ಧಪಡಿಸಿದೆ.
ಮಾನೆಗೆ ಟಿಕೆಟ್ ನೀಡಿದ್ದು ಏಕೆ?: ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಆರಂಭಗೊಂಡಿತ್ತು. ಚುನಾವಣೆ ಘೋಷಣೆ ನಂತರ ಅದು ಮತ್ತಷ್ಟು ಭುಗಿಲೆದ್ದು, ರಾಜ್ಯ ನಾಯಕರ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಗಿತ್ತು. ಟಿಕೆಟ್ ಆಕಾಂಕ್ಷಿಗಳಾಗಿದ್ದ ಶ್ರೀನಿವಾಸ ಮಾನೆ, ಮನೋಹರ ತಹಶೀಲ್ದಾರ್, ಪ್ರಕಾಶಗೌಡ ಪಾಟೀಲ ಎಲ್ಲ ರೀತಿಯ ಪ್ರಯತ್ನ ನಡೆಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ ಹಾಗೂ ಸಲೀಂ ಅಹ್ಮದ್ ಆಕಾಂಕ್ಷಿಗಳ ಮನವೊಲಿಸಿ ಹೈಕಮಾಂಡ್ ನಿರ್ಣಯಕ್ಕೆ ಬದ್ಧರಾಗುವಂತೆ ಸೂಚಿಸಿದ್ದರು. 2018ರ ಚುನಾವಣೆಯಲ್ಲಿ ಸೋತ ನಂತರವೂ ಕ್ಷೇತ್ರದೊಂದಿಗೆ ಸತತ ಸಂಪರ್ಕದಲ್ಲಿರುವ ಶ್ರೀನಿವಾಸ ಮಾನೆ ಅವರಿಗೆ ಹೈಮಾಂಡ್ ಮತ್ತೂಮ್ಮೆ ಅವಕಾಶ ನೀಡುವ ಮೂಲಕ ಉಪಚುನಾವಣಾ ಅಖಾಡಕ್ಕೆ ಇಳಿಸಿದೆ.
ತಹಶೀಲ್ದಾರ್ ನಿಲುವು ಏನು?: ರಾಜ್ಯ ನಾಯಕರು ಇವರಿಬ್ಬರ ನಡುವೆ ಸಂಧಾನ ನಡೆಸಿದ್ದರೂ ಆಂತರಿಕವಾಗಿ ಅಸಮಾಧಾನ ಶಮನವಾದಂತೆ ಕಂಡು ಬರುತ್ತಿಲ್ಲ. ಕಳೆದ ಬಾರಿ ಕಾಂಗ್ರೆಸ್ ಟಿಕೆಟ್ ತಪ್ಪಿದ್ದರೂ ಶ್ರೀನಿವಾಸ ಮಾನೆ ಗೆಲುವಿಗೆ ಬೆಂಬಲಿಸಿದ್ದ ಮನೋಹರ್ ತಹಶೀಲ್ದಾರ್ ಈ ಬಾರಿ ಬಹಿರಂಗವಾಗಿಯೇ ಸ್ಥಳೀಯರಿಗೆ ಟಿಕೆಟ್ ನೀಡುವಂತೆ ನಾಯಕರ ಮೇಲೆ ಒತ್ತಡ ಹೇರಿದ್ದರು. ಒಂದು ವೇಳೆ ಸ್ಥಳೀಯರಿಗೆ ಬಿಟ್ಟು ಮಾನೆಗೆ ಟಿಕೆಟ್ ಕೊಟ್ಟರೆ ನಮ್ಮ ಬೆಂಬಲ ಇಲ್ಲ ಎಂಬ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಇದು ಪಕ್ಷದ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಕೊನೆಗೆ ರಾಜ್ಯ ನಾಯಕರು ಇಬ್ಬರ ಜತೆ ಮಾತನಾಡಿ ಯಾರಿಗೇ ಟಿಕೆಟ್ ಸಿಕ್ಕರೂ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿ ಸಂಧಾನ ನಡೆಸಿದ್ದರು. ಆದರೆ, ಈಗ ಶ್ರೀನಿವಾಸ ಮಾನೆ ಅವರಿಗೆ ಕಾಂಗ್ರೆಸ್ ಮಣೆ ಹಾಕಿದ್ದರಿಂದ ಚುನಾವಣೆ ಸಂದರ್ಭದಲ್ಲಿ ತಹಶೀಲ್ದಾರ್ ನಿಲುವು ಏನು ಎಂಬುದು ಕ್ಷೇತ್ರದಲ್ಲಿ ಕುತೂಹಲ ಹೆಚ್ಚಿಸಿದೆ.