ವರದಿ: ವೀರೇಶ ಮಡ್ಲೂರ
ಹಾವೇರಿ: ಜಿಲ್ಲೆಯ ಹಾನಗಲ್ಲ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಟಿಕೆಟ್‌ಗಾಗಿ ಆಕಾಂಕ್ಷಿಗಳು ರಾಜ್ಯ ಮುಖಂಡರ ಮನೆಗಳಿಗೆ ಅಲೆದಾಟ ಆರಂಭಿಸಿದ್ದು, ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ.
2018ರ ಚುನಾವಣೆಯಲ್ಲಿ ಹಾನಗಲ್ಲ ಕ್ಷೇತ್ರದಿಂದ ಗೆದ್ದಿದ್ದ ಸಿ.ಎಂ. ಉದಾಸಿ ಅವರು ಕಳೆದ ಜೂ. 8ರಂದು ನಿಧನರಾದ ಹಿನ್ನೆಲೆಯಲ್ಲಿ ಉಪಚುನಾವಣೆ ಘೋಷಣೆಯಾಗಿದೆ. ಅ. 30ರಂದು ಮತದಾನ ನಡೆಯಲಿದ್ದು, ಚುನಾವಣೆಗೆ ಬರೋಬ್ಬರಿ ಒಂದು ತಿಂಗಳಷ್ಟೇ ಬಾಕಿಯಿದೆ. ಆದ್ದರಿಂದ ಪಕ್ಷದ ಟಿಕೆಟ್ ಪಡೆಯಲು ಆಕಾಂಕ್ಷಿಗಳು ಮುಖಂಡರ ಮನೆಗಳ ಬಾಗಿಲು ತಟ್ಟುತ್ತಿದ್ದು, ಕ್ಷೇತ್ರದಲ್ಲಿ ತಮ್ಮ ಕಾರ್ಯ ಸಾಧನೆಗಳ ಬಗ್ಗೆ ಮುಖಂಡರಿಗೆ ಮನವರಿಕೆ ಮಾಡಲು ಮುಂದಾಗುತ್ತಿದ್ದಾರೆ. ಇತ್ತ ಮುಖಂಡರು ಆಕಾಂಕ್ಷಿಗಳಿಗೆ ಟಿಕೆಟ್ ನೀಡುವ ಭರವಸೆ ಕೊಟ್ಟು ಕಳಿಸುವ ಕೆಲಸ ಮಾಡುತ್ತಿದ್ದು, ಯಾವ ಪಕ್ಷದಿಂದ ಯಾರು ಅಭ್ಯರ್ಥಿಗಳಾಗುತ್ತಾರೆ ಎಂಬ ಕುತೂಹಲ ಮೂಡಿಸಿದೆ.
ಬಿಜೆಪಿಗೆ ಪ್ರತಿಷ್ಠೆಯ ಕಣ: ಹಾನಗಲ್ಲ ವಿಧಾನಸಭಾ ಕ್ಷೇತ್ರದಿಂದ ಸಿ.ಎಂ. ಉದಾಸಿ ಅವರು 6 ಬಾರಿ ಗೆದ್ದು ಇತಿಹಾಸ ನಿರ್ಮಿಸಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ವಿರುದ್ಧ 6,514 ಮತಗಳ ಅಂತರದಿಂದ ಉದಾಸಿ ಗೆಲುವು ಸಾಧಿಸಿದ್ದರು. ಹೀಗಾಗಿ ಹಾನಗಲ್ಲ ಕ್ಷೇತ್ರ ಉದಾಸಿ ಹಾಗೂ ಬಿಜೆಪಿಯ ಭದ್ರ ಕೋಟೆಯೆಂದೇ ಪರಿಗಣಿತವಾಗಿತ್ತು. ಆದರೆ ಈ ಬಾರಿ ಬಿಜೆಪಿ ಉದಾಸಿ ಅವರ ಹೆಸರಿನ ಮೇಲೆ ಚುನಾವಣೆ ಎದುರಿಸುವಂತಾಗಿದೆ. ಅಲ್ಲದೇ ಸಿಎಂ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಚುನಾವಣೆಯಾಗಿದ್ದರಿಂದ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ.
ಸಿ.ಎಂ. ಉದಾಸಿ ಅವರ ಪುತ್ರ ಶಿವಕುಮಾರ ಉದಾಸಿ ಸಂಸದರಾಗಿರುವುದರಿಂದ ಪಕ್ಷದ ಅಭ್ಯರ್ಥಿಯನ್ನು ಹಾಗೂ ಅಪ್ಪ ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಮತ್ತೂಮ್ಮೆ ಬಿಜೆಪಿ ಬಾವುಟ ಹಾರಿಸುವುದು ಅವರಿಗೂ ಅನಿವಾರ್ಯವಾಗಿದೆ. ಆದ್ದರಿಂದ ಸೂಕ್ತ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ತಯಾರಿ ನಡೆಸಿದೆ.
ಅನುಕಂಪದ ಲಾಭ ಪಡೆಯಲು ಉದಾಸಿ ಕುಟುಂಬದವರಿಗೇ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಸಿ.ಎಂ.ಉದಾಸಿ ಅವರ ಸೊಸೆ, ಸಂಸದ ಉದಾಸಿ ಅವರ ಪತ್ನಿ ರೇವತಿ ಉದಾಸಿಯವರನ್ನೇ ಕಣಕ್ಕಿಳಿಸುವ ಸಾಧ್ಯತೆ ಬಗ್ಗೆ ಕೇಳಿ ಬರುತ್ತಿದೆ. ಇದರ ಜೊತೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಕುರಿ ಹಾಗೂ ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಭೋಜರಾಜ ಕರೂದಿ, ಸಿ.ಆರ್. ಬಳ್ಳಾರಿ, ಮಾಲತೇಶ ಸೊಪ್ಪಿನ, ಕಲ್ಯಾಣಕುಮಾರ ಶೆಟ್ಟರ, ಬಸವರಾಜ ಹಾದಿಮನಿ ಸೇರಿದಂತೆ ಅನೇಕರು ಟಿಕೆಟ್ ಗಾಗಿ ಪ್ರಯತ್ನ ನಡೆಸಿದ್ದಾರೆ.