ಮತದಾರರಲ್ಲಿ ಸಂಸದ ಶಿವಕುಮಾರ ಉದಾಸಿ ಮನವಿ
ಹಾನಗಲ್ಲ: ಸುಳ್ಳು ಹೇಳ್ಳೋದು, ಗುಡ್ಡ ಕಡ್ಡಿ ಮಾಡೋದು ಕಾಂಗ್ರೆಸ್ಸಿನ ಕೆಲಸವಾಗಿದೆ. ಉದಾಸಿ ಅವರು ಅಭಿವೃದ್ಧಿಗೋಸ್ಕರ ರಾಜಕಾರಣ ಮಾಡಿದ್ದರು. ಉದಾಸಿ ಅವರ ಕೆಲಸಗಳ ಬಗ್ಗೆ ಜನರಿಗೆ ಗೊತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈ ಬಲಪಡಿಸಲು ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರಿಗೆ ಮತ ನೀಡಬೇಕೆಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ತಾಲೂಕಿನ ಜಾನಗುಂಡಿಕೊಪ್ಪ, ಬಾದಮಗಟ್ಟಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಮತಯಾಚಿಸಿ ಮಾತನಾಡಿದ ಅವರು, ದಿ|ಸಿ. ಎಂ.ಉದಾಸಿ ಅವರು ಕಳೆದ ಮೂರು ವರ್ಷಗಳಲ್ಲಿ 1,530 ಕೋಟಿಗೂ ಹೆಚ್ಚು ಹಣವನ್ನು ತಾಲೂಕಿಗೆ ತಂದಿದ್ದಾರೆ. 600 ಕೋಟಿಗೂ ಹೆಚ್ಚು ಹಣವನ್ನು ಏತ ನೀರಾವರಿ ಯೋಜನೆಗೆ ತಂದಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳ ಕಲ್ಯಾಣ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಬೇಕಾದರೆ ನಮ್ಮ ಪಕ್ಷದ ಶಾಸಕರು ಬೇಕಾಗುತ್ತದೆ. ಹೀಗಾಗಿ ನಮ್ಮವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈಬಲಪಡಿಸಲು ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರಿಗೆ ಮತ ನೀಡುವಂತೆ ಮನವಿ ಮಾಡಿದರು.
ನಮ್ಮ ಕ್ಷೇತ್ರದ ಮತದಾರರು ಬುದ್ಧಿವಂತರಿದ್ದಾರೆ. ಶಿವರಾಜ ಸಜ್ಜನರ ಅವರನ್ನು ಆರಿಸಿ ತರುತ್ತಾರೆಂಬ ವಿಶ್ವಾಸವಿದೆ. ನಾನು, ಸಜ್ಜನರ ಸೇರಿ ಕ್ಷೇತ್ರದ ಅಭಿವೃದ್ಧಿ ಮುಂದುವರಿಸುತ್ತೇವೆ. ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತೇವೆ. ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಸ್ಥಾನಮಾನ ಸಿಗಬೇಕಾದರೆ ಸಜ್ಜನರ ಅವರನ್ನು ಗೆಲ್ಲಿಸಬೇಕಿದೆ ಎಂದರು.
ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಮಾತನಾಡಿ, ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ನನ್ನ ಗೆಲುವಿನ ಮೂಲಕ ಉತ್ತರ ಕೊಡುತ್ತೇನೆ. ನಿಮ್ಮ ಹಗರಣ ರಾಜ್ಯದ ಜನತೆಗೆ ಈಗಾಗಲೇ ತಿಳಿದಿದೆ. ನೀವು ಎಚ್ಚರದಿಂದ ಆರೋಪ ಮಾಡಿ. ಸುಳ್ಳು ಮಾಹಿತಿ ಕೊಟ್ಟು ಜನರಲ್ಲಿ ಗೊಂದಲವುಂಟು ಮಾಡಲು ಯತ್ನಿಸಿದರೆ ಕ್ಷೇತ್ರದ ಜನತೆ ಅದನ್ನು ನಂಬಲ್ಲ. ಸಿ.ಎಂ.ಉದಾಸಿ ಅವರು ಇಡೀ ರಾಜ್ಯದಲ್ಲೇ ಈ ಕ್ಷೇತ್ರದ ರೈತರಿಗೆ ಅತಿ ಹೆಚ್ಚು ಬೆಳೆ ವಿಮೆ ದೊರಕಿಸಿ ಕೊಟ್ಟಿದ್ದರು. ಅವರು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳು ನನ್ನ ಗೆಲುವಿಗೆ ಸಹಕಾರಿಯಾಗಲಿವೆ. ಮುಂದೆಯೂ ನಾನು, ಸಂಸದ ಶಿವಕುಮಾರ ಉದಾಸಿ ಅವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.
ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಬಿಜೆಪಿ ಸರ್ಕಾರ ಎಲ್ಲ ಜನಾಂಗದ ಅಭಿವೃದ್ಧಿಗೆ ಬದ್ಧವಾಗಿದೆ. ಲಂಬಾಣಿಗರು ಅತೀ ಹಿಂದುಳಿದ ಜನಾಂಗವಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಮ್ಮ ಜನಾಂಗಕ್ಕೆ ಹಲವಾರು ಯೋಜನೆ ರೂಪಿಸುವ ಮೂಲಕ ಅಭಿವೃದ್ಧಿ ಪಡಿಸಿದ್ದಾರೆ. ಆಡಳಿತ ಬಿಜೆಪಿ ಪಕ್ಷಕ್ಕೆ ಬಲ ನೀಡಬೇಕು. ಈ ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವ ಮೂಲಕ ಬಿಜೆಪಿ ಗೆಲ್ಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ತಾಂಡಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಸವರಾಜ ನಾಯಕ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಪದ್ಮನಾಭ ಕುಂದಾಪೂರ, ಲಂಬಾಣಿ ಸಮಾಜದ ತಿಪ್ಪೇಶ್ವರ ಸ್ವಾಮೀಜಿ, ಪ್ರಶಾಂತ ಪೂಜಾರ, ಮಾಲತೇಶ ಜಾಧವ, ಕೊಟ್ರಪ್ಪ ನಾಯಕ, ರವಿ ಪೂಜಾರ, ಮಹೇಶ ನಾಯಕ, ಕುನ್ನಪ್ಪ ದೊಡ್ಡಮನಿ, ಫಕ್ಕೀರಪ್ಪ ನಾಯಕ, ರವಿ ಕಾರಬಾರಿ, ಚಂದ್ರಪ್ಪ ಹರಿಜನ, ಶಿವಪ್ಪ ದೊಡ್ಡಮನಿ, ಜಾನಪ್ಪ ಕಡೆಮನಿ, ದಾವಲೆಪ್ಪ ಹುಣಸಿಕಟ್ಟಿ ಇತರರು ಇದ್ದರು.