ಬೆಂಗಳೂರು: ಕೊಡಗಿನಲ್ಲಿ ಮಳೆ ಹಾಗೂ ಪ್ರವಾಹದಿಂದ ತೊಂದರೆಗೊಳಗಾಗಿರುವ ಸಂತ್ರಸ್ತರ ನೆರವಿಗೆ ಬಂದಿರುವ ನಾದಬ್ರಹ್ಮ ಹಂಸಲೇಖ, ತನಗೆ ಬಂದಿರುವ ಪ್ರಶಸ್ತಿ ಮೊತ್ತವನ್ನು ಪ್ರವಾಹ ಸಂತ್ರಸ್ತರಿಗಾಗಿ ನೀಡುವ ಮೂಲಕ ಮಾದರಿಯಾಗಿದ್ದಾರೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಡಾ.ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ನೀಡಿದ ಪ್ರಶಸ್ತಿ ಸ್ವೀಕರಿಸಿದ ಅವರು ನಂತರ ಆ ಪ್ರಶಸ್ತಿಯ ಮೊತ್ತವನ್ನು ಕೊಡಗಿನ ಸಂತ್ರಸ್ಥರಿಗೆ ನೀಡುವಂತೆ ಪ್ರತಿಷ್ಠಾನಕ್ಕೆ ಮರಳಿಸಿದರು.
ವೃತ್ತಿಯಲ್ಲಿ ಪೊಲೀಸ್ ಆದರೂ ಪ್ರವೃತಿಯಲ್ಲಿ ಕಲಾವಿದರಾಗಿರುವ ಡಾ.ವೇಮಗಲ್ ನಾರಾಯಣಸ್ವಾಮಿ ಅವರು ತಮ್ಮ ಪ್ರತಿಷ್ಠಾನದ ಮೂಲಕ ನೀಡಿರುವ ಪ್ರಶಸ್ತಿಗೆ ನಾನು ಋಣಿ. ಆದರೆ, ಈ ಪ್ರಶಸ್ತಿಯಿಂದ ಸಂದ ಹಣ 25 ಸಾವಿರ ರೂ. ನಾಡಿನಲ್ಲಿ ಮಳೆಯಿಂದಾಗಿ ತೊಂದರೆಕ್ಕೊಳಗಾದ ಕೊಡಗಿನವರಿಗೆ ನೀಡಲು ಮನ ಬಯಸುತ್ತಿದೆ. ಹೀಗಾಗಿ ಈ ಹಣವನ್ನು ಪ್ರತಿಷ್ಠಾನಕ್ಕೆ ಮರಳಿಸುತ್ತಿದ್ದೇನೆ. ಹಣದ ಚೆಕ್ ಅನ್ನು ಮುಖ್ಯಮಂತ್ರಿ ಅವರಿಗೆ ತಲುಪಿಸಿ ಎಂದು ಪ್ರತಿಷ್ಠಾನದವರಿಗೆ ಸೂಚಿಸಿದ ಅವರು, ನಮ್ಮ ಕಡೆಯಿಂದ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದರು.
ಮಳೆ ನೈಸರ್ಗಿಕವಾಗಿ ಬರುತ್ತದೆ. ಆದರೆ, ಪ್ರಕೃತಿಗೆ ನಾವೂ ಮಾಡಿರುವ ದ್ರೋಹದಿಂದಾಗಿಯೇ, ಇಂದು ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ನಾವೂ ಈ ವಾತಾವರಣ ನಿಭಾಯಿಸಲು ಸಿದ್ದವಾಗಬೇಕು ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಮತ್ತೋರ್ವ ಸಾಧಕಿ ಬಿ.ಕೆ.ಸುಮಿತ್ರಾ ಮಾತನಾಡಿ, ಕಳೆದ ಎರಡು ದಿನಗಳಿಂದ ಕೊಡಗಿನ ಸಂತ್ರಸ್ಥರಿಗೆ ನನ್ನ ಕೈಲಾಸ ಸಹಾಯ ಮಾಡಿರುವೆ. ಹೊಸ ಬಟ್ಟೆಗಳನ್ನು ಹಾಗೂ ದಿನಸಿ ಸಾಮಾನುಗಳನ್ನು ಕಳುಹಿಸಿಕೊಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಹಾಗೂ ನಿವೃತ್ತ ನ್ಯಾ. ವಿ.ಗೋಪಾಲ್‌ಗೌಡ ಮತ್ತಿತರಿದ್ದರು.