ಹೊಸಪೇಟೆ: ಕಿಡಿಗೇಡಿಗಳ ಉಪಟಳಕ್ಕೆ ವಿಶ್ವವಿಖ್ಯಾತ ಹಂಪಿಯ ಪುರಾತನ ಸ್ಮಾರಕಗಳು ಹಾನಿಗೊಳಗಾಗುತ್ತಿದ್ದು, ರಕ್ಷಣೆ ಇಲ್ಲದಂತಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿರುವುದು ಶುಕ್ರವಾರ ತಡವಾಗಿ ಬೆಳಕಿಗೆ ಬಂದಿದೆ.
ಇತ್ತೀಚಿಗೆ ಹಂಪಿಗೆ ಭೇಟಿ ನೀಡಿದ ಕಿಡಿಗೇಡಿಗಳ ಗುಂಪೊಂದು ಗಜಶಾಲೆ ಹಿಂಭಾಗದ ವಿಷ್ಣು ದೇವಾಲಯ ಆವರಣದ ಬೃಹತ್ ಕಲ್ಲಿನ ಕಂಬಗಳನ್ನು ನೆಲಕ್ಕುರುಳಿಸಿ ಹಾನಿ ಉಂಟು ಮಾಡಿದೆ. ಈ ಕೃತ್ಯದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗರ್ಭಗುಡಿ ಮುಂಭಾಗದ ಬೃಹತ್ ಗಾತ್ರದ ಕಲ್ಲಿನ ಕಂಭಗಳನ್ನು ಹಾಡಹಗಲೇ ಕೈಯಿಂದ ತಳ್ಳಿ ನೆಲಕ್ಕುರುಳಿಸುತ್ತಿರುವ ಕಿಡಿಗೇಡಿಗಳ ಈ ಕೃತ್ಯವನ್ನು ಪ್ರವಾಸಿಗರೊಬ್ಬರು, ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ದೃಶ್ಯ ಎಲ್ಲೆಡೆ ಹರಿದಾಡುತ್ತಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಹಂಪಿ ವಿಶ್ವ ಪರಂಪರೆ ನಿರ್ವಹಣಾ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಹಂಪಿ ಸ್ಮಾರಕಗಳ ರಕ್ಷಣೆಗಾಗಿ ಸೂಕ್ತ ಭದ್ರತೆ ವ್ಯವಸ್ಥೆ ಕಲ್ಪಿಸಿದ್ದರೂ, ಹಂಪಿಯ ಸ್ಮಾರಕಗಳಿಗೆ ಹಾನಿ ಮಾಡುತ್ತಿರುವ ಘಟನೆಗಳು ಮರುಕಳಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹಂಪಿ ಅಭಿವೃದ್ಧಿ ಹಾಗೂ ರಕ್ಷಣೆಗಾಗಿ ನಾಲ್ಕಾರು ಇಲಾಖೆಗಳು ಇದ್ದರೂ, ಇಂತಹ ಕೃತ್ಯಗಳನ್ನು ತಡೆಯುವಲ್ಲಿ ಇಲಾಖೆಗಳು ಸಂಪೂರ್ಣ ವಿಫಲವಾಗಿವೆ. ಈ ಹಿಂದೆ ಅಚ್ಚುತ ಬಜಾರ್ ಕಲ್ಲುಕಂಭ ಹಾಗೂ ಮಾಲ್ಯವಂತ ರಘುನಾಥ ಸ್ವಾಮಿ ದೇವಸ್ಥಾನದ ಮುಂಭಾಗದ ಗಾಳಿ ಗೋಪುರವನ್ನು ದುಷ‌್ಕರ್ಮಿಗಳು ನಾಶ ಮಾಡಿರುವ ಘಟನೆಗಳು ಕಣ್ಮುಂದೆ ಇರುವಾಗ ಸ್ಮಾರಕಗಳು ಪದೇ,ಪದೇ, ಹಾನಿಗೊಳಾಗುತ್ತಿರುವುದು ಇಲಾಖೆಗಳ ನಿರ್ಲಕ್ಷ್ಯ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ. ಇದನ್ನು ಅಲ್ಲೆಗೆಳಿದಿರುವ ಅಧಿಕಾರಿಗಳು ಈ ವಿಡಿಯೋದಲ್ಲಿನ ಕೃತ್ಯ ಹಂಪಿಯದಲ್ಲ ಎಂದು ಹೇಳುವ ಮೂಲಕ ನುಣಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.