Advertisement
ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹಂಪಿ ಭಾಗದ 13 ಗ್ರಾಮಗಳು ಆನೆಗೊಂದಿ ಭಾಗದ 15 ಗ್ರಾಮಗಳು ಬರುತ್ತಿದ್ದು ಆನೆಗೊಂದಿ ಭಾಗದಲ್ಲಿ ಪ್ರಾಧಿಕಾರದ ಪರವಾನಿಗೆ ಪಡೆದಿರುವ ನಾಲ್ಕು ರೆಸಾರ್ಟ್ ಗಳನ್ನು ಹೊರತುಪಡಿಸಿ ಕೋರ್ಟ್ ನಲ್ಲಿ ಸ್ಟೇ ಪಡೆದಿರುವ ಕೆಲವು ರೆಸಾರ್ಟ್, ಹೋಟೆಲ್ ಗಳನ್ನು ಸೀಜ್ ಮಾಡುವುದು ಹಾಗೂ ಇನ್ನುಳಿದ ರೆಸಾರ್ಟ್, ಹೊಟೇಲ್‌ಗಳ ವಿದ್ಯುತ್ ಸಂಪರ್ಕ ಕಡಿತ ಮಾಡಿ ಜೆಸಿಬಿ ಮೂಲಕ ತೆರವು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎನ್ನಲಾಗುತ್ತಿದೆ.
ಹಂಪಿ ಸುತ್ತಮುತ್ತಲು ಪ್ರಾಧಿಕಾರದ ನಿಯಮ ಉಲ್ಲಂಘಿಸಿ ಅನಧಿಕೃತ ರೆಸಾರ್ಟ್,ಹೋಟೆಲ್ ತಲೆ ಎತ್ತಿರುವ ಕುರಿತು ಕೊಟ್ಟೂರು ಸ್ವಾಮಿ ಕಲ್ಯಾಣ ಕೇಂದ್ರದ ಮಠಾಧೀಶರು ಬೆಂಗಳೂರಿನ ಹೈಕೋರ್ಟಿನಲ್ಲಿ ದಾವೆ ಹೂಡಿದ್ದರು. ಜತೆ 2017 ರಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಕೂಡ ಸಲ್ಲಿಕೆಯಾಗಿದ್ದು ಈ ಪ್ರಕರಣದ ವಿಚಾರಣೆ ಕೂಡ ಜೂ. 26 ರಂದು ನಡೆಯಲಿದೆ. ಎಚ್ಚೆತ್ತುಕೊಂಡ ಪ್ರಾಧಿಕಾರದ ಅಧಿಕಾರಿಗಳು ಸ್ಟೇ ಇರುವ ರಸಾರ್ಟ್, ಹೊಟೇಲ್ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸೀಜ್ ಮಾಡಿಸುತ್ತಿದ್ದಾರೆ. ಉಳಿದವನ್ನು ತೆರವು ಮಾಡಲು ನಿರ್ಧರಿಸಿದ್ದಾರೆ.
Related Articles
ಎಎಸ್‌ಐ ವ್ಯಾಪ್ತಿಯಲ್ಲಿ ಆನೆಗೊಂದಿ, ವಿರೂಪಾಪೂರಗಡ್ಡಿ ಹೊರತುಪಡಿಸಿ ಸ್ಮಾರಕಗಳಿಲ್ಲದ ಉಳಿದ ಗ್ರಾಮಗಳನ್ನು ಸೇರ್ಪಡೆ ಮಾಡಲಾಗಿದ್ದು ಶಾಸಕರು, ಸಂಸದರು ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪ ಸ್ಥಳೀಯರದ್ದಾಗಿದೆ.
Advertisement
ಪ್ರತಿ ಹತ್ತು ವರ್ಷಗಳಿಗೊಮ್ಮೆ ಸ್ಥಳೀಯರ ಅಭಿಪ್ರಾಯ ಪಡೆದು ಮಹಾಯೋಜನೆ(ಮಾಸ್ಟರ್ ಪ್ಲಾನ್ ) ರೂಪಿಸಬೇಕೆನ್ನುವ ನಿಯಮವಿದೆ. ಪ್ರಾಧಿಕಾರ ರಚನೆಯಾದಾಗಿನಿಂದ 2011 ರಲ್ಲಿ ಸ್ಥಳೀಯರನ್ನು ನಿರ್ಲಕ್ಷ್ಯ ಮಾಡಿ ಮಾಸ್ಟರ್ ಪ್ಲಾನ್ ತಯಾರಿಸಲಾಗಿದೆ ಎಂಬ ಆರೋಪವಿದೆ. ಈ ಮಧ್ಯೆ ಅಂದಿನ ಶಾಸಕ ಪರಣ್ಣ ಮುನವಳ್ಳಿ ಒತ್ತಡದ ಪರಿಣಾಮ2021 ರಲ್ಲಿ ಸ್ಥಳೀಯರ (ಸ್ಟೇಕ್ ಹೋಲ್ರ‍್ಸ್)ಅಭಿಪ್ರಾಯ ಪಡೆದು ಮಾಸ್ಟರ್ ಪ್ಲಾನ್ ರೂಪಿಸಿ ವಲಯವಾರು ನಿಯಮಗಳಲ್ಲಿ ಕೊಂಚ ಸಡಿಲಿಕೆ ಮಾಡಿ ರೈತರ ಗದ್ದೆಗಳಲ್ಲಿ ಶೇ,5 ರಷ್ಟು ಭೂಮಿಯನ್ನು ಪ್ರವಾಸೋದ್ಯಮ ಉತ್ತೇಜಿಸಲು ಅವಕಾಶ ಕಲ್ಪಿಸಲಾಗಿದೆ. ನೂತನ ನಿಯಮಗಳ ಅನುಷ್ಠಾನಕ್ಕೆ ಕಳೆದ ವರ್ಷ ರಾಜ್ಯ ಸರಕಾರ ಸ್ಥಳೀಯರಿಂದ ಗೆಜೆಟ್ ಮೂಲಕ ಆಕ್ಷೇಪ ಕರೆದಿತ್ತು. ಪ್ರಾಧಿಕಾರ ಹಂಪಿ ಪ್ರದೇಶದ ಸ್ಮಾರಕಗಳ ಸಂರಕ್ಷಣೆಯ ನೋಡೆಲ್ ಉಸ್ತುವಾರಿ ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ) ಅಭಿಪ್ರಾಯ ಪಡೆದು ರಾಜ್ಯ ಪ್ರಾಧಿಕಾರದ ವಲಯವಾರು ನಿಯಮ ಬದಲಾವಣೆ ಮಾಡಲು ನಗರಾಭಿವೃದ್ಧಿ ಇಲಾಖೆಗೆ ರವಾನಿಸಿ ವರ್ಷ ಕಳೆದರೂ ಪ್ರಾಧಿಕಾರದ ವಲಯವಾರು ನಿಯಮಗಳ ಬದಲಾವಣೆಗಳನ್ನು ಸರಕಾರ ಗೆಜೆಟ್ ಮೂಲಕ ಅನುಷ್ಠಾನ ಮಾಡದೇ ಇರುವುದಿಂದ ಸ್ಥಳೀಯರು ಅನಧಿಕೃತವಾಗಿ ವ್ಯಾಪಾರ ವಹಿವಾಟು ನಡೆಸುವಂತಾಗಿದೆ.
ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಕೋರ್ ಝೋನ್‌ನಲ್ಲಿದ್ದ ಕಮಲಾಪೂರವನ್ನು ಶೇ.100 ರಿಂದ 40ಕ್ಕೆ ಇಳಿಸಿ ಆನೆಗೊಂದಿಯನ್ನು ಶೇ.40 ರಿಂದ ಶೇ.100 ರಷ್ಟು ಕೋರ್ ಝೋನ್ ಮಾಡಲಾಗಿದೆ. ಪ್ರಾಧಿಕಾರದ ವ್ಯಾಪ್ತಿಯಲ್ಲಿದ್ದ ಕಾರಿಗನೂರನ್ನು ಸಾರ್ವಜನಿಕರ ಆಕ್ಷೇಪವನ್ನು ಕರೆಯದೇ ಕೈ ಬಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಿಷ್ಕಿಂಧಾ ಅಂಜನಾದ್ರಿ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಸರಕಾರ ಉತ್ತೇಜನ ನೀಡುತ್ತಲೇ ಸ್ಥಳೀಯರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ.
ಹಂಪಿ ಅಭಿವೃದ್ಧಿ ಪ್ರಾಧಿಕಾರದ ಸೂಚನೆಯಂತೆ ಅನಧಿಕೃತ ರೆಸಾರ್ಟ್ ಗಳು ಹಾಗೂ ವಾಣಿಜ್ಯ ಕಟ್ಟಡಗಳನ್ನು ಶೀಘ್ರವೇ ತೆರವುಗೊಳಿಸಲಾಗುತ್ತದೆ. ಮಾನ್ಯ ಆಯುಕ್ತರ ಸೂಚನೆಯಂತೆ ತಾಲೂಕು ಆಡಳಿತ ಜೆಸಿಬಿ , ಅಗತ್ಯ ಪೊಲೀಸ್ ಭದ್ರತೆ, ಕಂದಾಯ, ಜೆಸ್ಕಾಂ, ಅರಣ್ಯ ಇಲಾಖೆ ಸಂಬಂಧ ಪಟ್ಟ ಗ್ರಾ.ಪಂ. ಅಧಿಕಾರಿಗಳ ಜತೆ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಜೂ.19 ರಂದು ಗಂಗಾವತಿ ತಾಲೂಕು ಗ್ರಾ.ಪಂ.ಅಧ್ಯಕ್ಷ-ಉಪಾಧ್ಯಕ್ಷರ ಮೀಸಲು ಆಯ್ಕೆಯ ಸಭೆ ನಂತರ ಯಾವಾಗಬೇಕಾದರೂ ತೆರವು ಕಾರ್ಯಾಚರಣೆ ನಡೆಯಬಹುದಾಗಿದೆ.-ಮಂಜುನಾಥ ಸ್ವಾಮಿ ಹಿರೇಮಠ ತಹಶೀಲ್ದಾರ್ -ಕೆ.ನಿಂಗಜ್ಜ