Advertisement

Hampankatta: ಕೆ.ಎಸ್‌.ರಾವ್‌ ರಸ್ತೆ; ಅಪಾಯಕಾರಿ ಕೇಬಲ್‌ ಛೇಂಬರ್‌

03:17 PM Oct 16, 2024 | Team Udayavani |

ಹಂಪನಕಟ್ಟೆ: ಕೆ.ಎಸ್‌.ರಾವ್‌ರಸ್ತೆಯ ಜೋಸ್‌ ಅಲುಕ್ಕಾಸ್‌ ಬಳಿ ರಸ್ತೆ ಮಧ್ಯದಲ್ಲಿರುವ ಕೇಬಲ್‌ ಛೇಂಬರ್‌ ವಾಹನ ಸವಾರರಿಗೆ ಅದರಲ್ಲೂ ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

Advertisement

ರಸ್ತೆ ಮಟ್ಟಕ್ಕಿಂತ ಕೆಳಕ್ಕೆ ಹೋಗಿರುವ ಈ ಛೇಂಬರ್‌ನ ಅಂಚಿಗೆ ಸಿಲುಕಿ ಈಗಾಗಲೇ ಹಲವು ಮಂದಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಇತ್ತೀಚೆಗೆ ಗರ್ಭಿಣಿಯೊಬ್ಬರು ಬಿದ್ದಿದ್ದು, ಸ್ಥಳೀಯರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದಿನಕ್ಕೆ ಒಬ್ಬರಾದರೂ ಇಲ್ಲಿ ಬಿದ್ದು ಗಾಯಗೊಳ್ಳುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಕೇಬಲ್‌ ಛೇಂಬರ್‌ನಲ್ಲಿ ಕಬ್ಬಿಣದ ಫ್ರೇಮ್‌ಗಳನ್ನು ಅಳವಡಿಸಿದ ಕಾಂಕ್ರೀಟ್‌ ಸ್ಲ್ಯಾಬ್‌ಗಳಿರುತ್ತವೆ. ಇಲ್ಲಿರುವ ಛೇಂಬರ್‌ನಲ್ಲಿ ಒಂದು ಸ್ಲ್ಯಾಬ್‌ನ ಕಾಂಕ್ರೀಟ್‌ ಎದ್ದು ಹೋಗಿ ಒಳಗಿನ ಕಬ್ಬಿಣದ ರಾಡ್‌ ಕಾಣಿಸುತ್ತಿದೆ. ಇದಕ್ಕೆ ದ್ವಿಚಕ್ರ ವಾಹನದ ಚಕ್ರ ಸಿಲುಕಿ ಸ್ಕಿಡ್‌ ಆಗಿ ಬೀಳುವ ಸಾಧ್ಯತೆಯಿದೆ. ರಸ್ತೆ ಖಾಲಿಯಿದ್ದಾಗ ಹಂಪನಕಟ್ಟೆಯಿಂದ ವೇಗವಾಗಿ ಬರುವ ವಾಹನಗಳ ಚಕ್ರ ಛೇಂಬರ್‌ನಲ್ಲಿ ಸಿಲುಕಿ ಅಪಘಾತಕ್ಕೆ ಕಾರಣವಾಗುತ್ತಿದೆ ಎನ್ನುವುದು ಸ್ಥಳೀಯ ಮಳಿಗೆ ಸಿಬಂದಿಯವರ ಮಾತು.

ಸಿಟಿ ಸೆಂಟರ್‌ ಕಡೆಯಿಂದ ಬರುವ ವಾಹನಗಳು ಯು-ಟರ್ನ್ ಕೂಡ ಇಲ್ಲಿಯೇ ತೆಗೆದುಕೊಳ್ಳುತ್ತದೆ. ಇದರಿಂದಾಗಿಯೂ ದ್ವಿಚಕ್ರ ವಾಹನಗಳ ಚಕ್ರಗಳ ಚಕ್ರ ಸ್ಲ್ಯಾಬ್‌ ನ ಅಂಚಿಗೆ ಸಿಲುಕಿ ಅಡ್ಡ ಬೀಳುವ ಸಾಧ್ಯತೆಯಿದೆ.

ನಗರದ ವಿವಿಧೆಡೆ ಇಂತಹ ಛೇಂಬರ್‌ಗಳಿದ್ದು, ಇವುಗಳಲ್ಲಿ ಬಹುತೇಕ ಛೇಂಬರ್‌ಗಳು ಇಂತಹುದೇ ಪರಿಸ್ಥಿತಿಯಲ್ಲಿವೆ. ವಾಹನಗಳು ಹಾದು ಹೋಗುವ ವೇಳೆ ಕುಸಿದು ಬೀಳುವಂತಹ ಶಬ್ಧಗಳು ಉಂಟಾಗುತ್ತವೆ. ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಛೇಂಬರ್‌ ದುರಸ್ತಿ ಮಾಡಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next