Advertisement

Hampankatta: ಪಲ್ಟಿಯಾದ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌!

03:00 PM Sep 18, 2024 | Team Udayavani |

ಹಂಪನಕಟ್ಟ: ‘ನಾನು ಇಲ್ಲಿ ಕೆಲಸಕ್ಕೆ ಸೇರಿ 23 ವರ್ಷವೇ ಕಳೆಯಿತು. ಆಗಿನಿಂದಲೇ, ಹಂಪನಕಟ್ಟ ಹಳೆ ಬಸ್‌ನಿಲ್ದಾಣದಲ್ಲಿ ಅದೇನೋ ಕಟ್ಟಡ ಬರುತ್ತದೆ ಅನ್ನುತ್ತಿದ್ದರು; ಬಳಿಕ ಪಾರ್ಕಿಂಗ್‌ ಕಟ್ಟಡ ಬರುತ್ತದೆ ಎನ್ನುತ್ತಿದ್ದರು. ಈಗ 23 ವರ್ಷ ಕಳೆದಿದ್ದರೂ ಇನ್ನೂ ಇಲ್ಲಿ ಏನೂ ಆಗಿಲ್ಲ; ಆಗಿದ್ದು ಮಾತ್ರ ಅಪಾಯಕಾರಿ ಹೊಂಡ ಮಾತ್ರ!’

Advertisement

ಮಂಗಳೂರಿನ ಹೃದಯಭಾಗ ಹಂಪನಕಟ್ಟದ ಬಹು ಪ್ರತಿಷ್ಠಿತ ಹಳೆ ಬಸ್‌ ನಿಲ್ದಾಣದ ಜಾಗದಲ್ಲಿ ‘ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌’ ಯೋಜನೆ ಮಾಡುವ ಬಗ್ಗೆ 10-20 ವರ್ಷದ ಹಿಂದಿನ ಕನಸನ್ನು ಇನ್ನೂ ಈಡೇರಿಸಲು ಸಾಧ್ಯವಾಗದ ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಅಲ್ಲೇ ಪಕ್ಕದಲ್ಲಿ ವೃತ್ತಿನಿರತರಾಗಿರುವ ವ್ಯಕ್ತಿಯೊಬ್ಬರು ವಿವರಿಸಿದ್ದು ಹೀಗೆ.

ಅವರೇ ಹೇಳುವ ಪ್ರಕಾರ ’20 ವರ್ಷದಿಂದ ಇಲ್ಲಿ ಅದು ಮಾಡುತ್ತೇವೆ-ಇದು ಮಾಡುತ್ತೇವೆ ಎಂದೆಲ್ಲ ಹೇಳಿ ಭೂಮಿ ಪೂಜೆ ಮಾಡಿ ಈಗ ಹೊಂಡ ಮಾಡಿ 3-4 ವರ್ಷ ಆದರೂ ಇನ್ನೂ ಇಲ್ಲಿ ಏನೇನೂ ಆಗಿಲ್ಲ ಎಂದರೆ ಇದನ್ನು ಕೇಳುವವರೇ ಇಲ್ಲವೇ? ಅಥವಾ ಆಡಳಿತ ವ್ಯವಸ್ಥೆ ಇದನ್ನು ನೋಡಿಯೂ ನೋಡದಂತೆ ಮೌನವಾಗಿದೆಯೇ?’ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟರು.

ಸದ್ಯ ವಿಸ್ತಾರವಾಗಿ ಬಾಯ್ದೆರೆದಿರುವ ಹೊಂಡಗಳ ಜಾಗವಾದ ಹಳೆಯ ಬಸ್‌ನಿಲ್ದಾಣವನ್ನು ಈಗ ಯಾರು ಕಂಡರೂ ಇಂತಹುದೇ ಪ್ರಶ್ನೆಯನ್ನು ಅವರೂ ಕೇಳುತ್ತಾರೆ. ಯಾಕೆಂದರೆ, ಇದು ಮುಗಿಯದ-ಮುಗಿಯಬಾರದು ಎಂಬಂತಿರುವ ಯೋಜನೆಯಾಗಿ ಬದಲಾಗಿದೆ!

ಇದರ ಕೂಗಳತೆ ದೂರದಲ್ಲಿ ‘ಸೆಂಟ್ರಲ್‌ ಮಾರುಕಟ್ಟೆ’ ಕಾಮಗಾರಿ ಬಹಳಷ್ಟು ವೇಗದಲ್ಲಿ ನಡೆಯುತ್ತಿದೆ. ಅದರ ಕೆಲಸ ಪ್ರಾರಂಭ ಆಗಿದ್ದು ಕಾರ್‌ ಪಾರ್ಕಿಂಗ್‌ ಕಾಮಗಾರಿ ಆರಂಭ ಮಾಡಿದ ಕಾಲದಲ್ಲಿ.

Advertisement

ಗುತ್ತಿಗೆದಾರರೇ ಹಣ ಹಾಕಿ ಕಟ್ಟಡ ನಿರ್ಮಿಸಿ ಬಳಿಕ ಪಾರ್ಕಿಂಗ್‌ ಶುಲ್ಕದ ಮೂಲಕ ಹಣ ವಾಪಾಸ್‌ ಪಡೆಯುವ ಈ ಯೋಜನೆಗೆ ಮೊದಲು ಯಾರೂ ಬಂದಿರಲಿಲ್ಲ. ಬಂದವರು ಕೆಲವು ಕೋಟಿ ರೂ. ಖರ್ಚು ಮಾಡಿ ಈಗ ಕಾಮಗಾರಿ ನಿಂತಿದೆ. ಮುಂದೆ ಅವರೇ ಮುಂದುವರಿಯುತ್ತಾರಾ? ಅಥವಾ ಬೇರೆಯವರಿಗೆ ಹಸ್ತಾಂತರಿಸಲಾಗುತ್ತದಾ? ಎಂಬ ಪ್ರಶ್ನೆ ಇದೆ. ಈಗ ಇರುವವರೇ ಮಾಡುವುದಾದರೆ ಇನ್ನೆಷ್ಟು ಕಾಲ? ಬದಲಾದರೆ ಇನ್ನೆಷ್ಟು ವರ್ಷ ಕಾಯಬೇಕು? ಎಂಬಿತ್ಯಾದಿ ಪ್ರಶ್ನೆಗೆ ಇಲ್ಲಿ ಉತ್ತರವೇ ಇಲ್ಲ.

ನಾನಾ ಅಡಚಣೆ, ಕಾಮಗಾರಿ ಸ್ಥಳದಲ್ಲಿ ಭೂ ಕುಸಿತ ಸಹಿತ ವಿವಿಧ ಕಾರಣಗಳಿಂದಾಗಿ ಇನ್ನೂ ಕೂಡ ತಳಪಾಯದ ಕಾಮಗಾರಿಯೇ ಇಲ್ಲಿ ಪೂರ್ಣವಾಗಿಲ್ಲ.

ಏನಿದು ಕಾರ್‌ ಪಾರ್ಕಿಂಗ್‌ ಯೋಜನೆ?
ಮಂಗಳೂರು ನಗರದಲ್ಲಿ ಪಾರ್ಕಿಂಗ್‌ ಸಮಸ್ಯೆ ವಿಪರೀತವಾಗಿದೆ. ಹಂಪನಕಟ್ಟೆ ಪ್ರದೇಶದಲ್ಲಿ ಸರಿಯಾದ ಪಾರ್ಕಿಂಗ್‌ ಇಲ್ಲದೆ ಕಿ.ಮೀ.ಗಟ್ಟಲೆ ದೂರದಲ್ಲಿ ಕಾರು ನಿಲ್ಲಿಸಿ ಬರಬೇಕಾದ ಸ್ಥಿತಿ ಇದೆ. ಇದಕ್ಕೆ ಪರಿಹಾರ ಎಂಬಂತೆ ಹಂಪನಕಟ್ಟೆಯಲ್ಲಿ ಬಹು ಅಂತಸ್ತಿನ ಕಾರ್‌ ಪಾರ್ಕಿಂಗ್‌ ಮತ್ತು ವಾಣಿಜ್ಯ ಸಂಕೀರ್ಣ ಯೋಜನೆಯನ್ನು ರೂಪಿಸಲಾಗಿತ್ತು.

ಹಳೆ ಬಸ್‌ ನಿಲ್ದಾಣ ಸ್ಟೇಟ್‌ ಬ್ಯಾಂಕ್‌ಗೆ ಸ್ಥಳಾಂತರವಾದ ದಿನದಿಂದಲೇ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಹೆಸರು ಕೇಳಿಬಂದಿತ್ತು. ಅಂದರೆ ಸುಮಾರು 25 ವರ್ಷದ ಹಿಂದೆ.

1.50 ಎಕರೆ ಸರಕಾರಿ ಮತ್ತು ಉಳಿದ ಖಾಸಗಿ ಜಾಗ ಸೇರಿ ಅಂದಾಜು 2.10 ಎಕರೆ ಪ್ರದೇಶ ದಲ್ಲಿ ಬಹುಮಹಡಿ ವಾಣಿಜ್ಯ/ವಾಹನ ನಿಲುಗಡೆ ಕಾಂಪ್ಲೆಕ್ಸ್‌ ನಿರ್ಮಿಸುವ ಯೋಜನೆ ಇದು.

ಮಹಾನಗರ ಪಾಲಿಕೆಯೇ ಈ ಯೋಜನೆಯನ್ನು ಜಾರಿಗೊಳಿ ಸುವ ಬಗ್ಗೆ ಯೋಚಿಸಲಾಗಿತ್ತು. ಅದು ಕಾರ್ಯಗತವಾಗದ ಕಾರಣದಿಂದ ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ) ವತಿಯಿಂದ ನಡೆಸುವ ಬಗ್ಗೆಯೂ ಚಿಂತಿಸಲಾಯಿತು. ಆದರೆ, ಅದೂ ಈಡೇರಲಿಲ್ಲ.

2021ರಲ್ಲಿ ಸ್ಮಾರ್ಟ್‌ ಸಿಟಿ ಯಿಂದ  ಯೋಜನೆಯನ್ನು ಕೈಗೆತ್ತಿ ಕೊಳ್ಳಲಾಗಿದೆ.  91 ಕೋಟಿ ರೂ. ವೆಚ್ಚದ ಯೋಜನೆಗೆ 2021ರ ನ.  2ರಂದು ಅಡಿಗಲ್ಲು ಹಾಕಲಾಗಿದೆ.

ಗುತ್ತಿಗೆದಾರರು ತಾವೇ ಹಣ ಹಾಕಿ ಕಟ್ಟಡ ನಿರ್ಮಿಸಿ, ಅದರಿಂದ ಬರುವ ಶುಲ್ಕ ಮತ್ತು ಬಾಡಿಗೆಯಿಂದ ತಮ್ಮ ಹಣವನ್ನು ವಾಪಸ್‌ ಪಡೆಯುವ (DBFOT) ಯೋಜನೆ ಇದಾಗಿದೆ.

ಮಂಗಳೂರಿನ ಹಂಪನಕಟ್ಟೆಯ ಹಳೆ ಬಸ್‌ ನಿಲ್ದಾಣವನ್ನು ತೆರವು ಮಾಡಿದ ಖಾಲಿ ಜಾಗದಲ್ಲಿ  ‘ಬಹುಮಹಡಿ ಕಾರು ಪಾರ್ಕಿಂಗ್‌’ ಬರಲಿದೆ ಎಂಬ ಸುದ್ದಿಗೆ ಹೆಚ್ಚು ಕಡಿಮೆ ರಜತ ವರ್ಷ. 2021ರಲ್ಲಿ ಕಾಮಗಾರಿಗೆ ಶಿಲಾನ್ಯಾಸ ನಡೆದರೂ ಅದಕ್ಕೆ ಹತ್ತಾರು ವಿಘ್ನ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಆರಂಭಗೊಂಡ ಕಾಮಗಾರಿಯಲ್ಲಿ ಇದುವರೆಗೆ ಸೃಷ್ಟಿಯಾಗಿದ್ದು ಬೃಹತ್‌ ಹೊಂಡ ಮಾತ್ರ. ಅಕ್ಷರಶಃ ಈ ಯೋಜನೆ ಹಳ್ಳಹಿಡಿದಿದೆ! ಅಂದರೆ ಕಾರ್‌ ಪಾರ್ಕಿಂಗ್‌ ಬದಲು ನೀರು ಪಾರ್ಕಿಂಗ್‌ ಆಗಿದೆ. ನಗರದ ಮಧ್ಯ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಮಹತ್ವಾಕಾಂಕ್ಷಿ ಯೋಜನೆ ಬಗ್ಗೆ ಯಾಕೆ ಈ ಅನಾದರ? ಯಾರು ಇದಕ್ಕೆ ಜವಾಬ್ದಾರರು? ಏನಾಗುತ್ತಿದೆ ಇಲ್ಲಿ ಎನ್ನುವುದನ್ನು ಉದಯವಾಣಿ ಸುದಿನ ಈ ವಿಶೇಷ ಸರಣಿಯಲ್ಲಿ ತೆರೆದಿಡಲಿದೆ.

ಕಾರ್‌ ಪಾರ್ಕಿಂಗ್‌ ಅಲ್ಲ, ನೀರ್‌ ಪಾರ್ಕಿಂಗ್‌!
ಮಲ್ಟಿ ಲೆವೆಲ್‌ ಪಾರ್ಕಿಂಗ್‌ ವಸ್ತುಶಃ ಹಳ್ಳ ಹಿಡಿದಿದೆ. ಮೂರು ವರ್ಷಗಳಿಂದ ನಡೆದ ಕಾಮಗಾರಿಯಲ್ಲಿ ಇದುವರೆಗೆ ಆಗಿರುವುದು ಹೊಂಡ ಮಾತ್ರ. ಪಂಚಾಂಗದ ಕಾಮಗಾರಿಯೂ ಪೂರ್ಣಗೊಂಡಿಲ್ಲ.

ಮಧ್ಯೆ ಬೃಹತ್‌ ಹೊಂಡ ಮಾಡಿ ರಕ್ಷಣೆಗಾಗಿ ತಗಡಿನ ಶೀಟ್‌ ಅನ್ನು ಬದಿಯಲ್ಲಿ ಕಟ್ಟಲಾಗಿದೆ. ಇದರ ಮಧ್ಯೆಯೂ ಕೆಲವರು ಹೊಂಡವನ್ನು ಕುತೂಹಲದಿಂದ ನೋಡುತ್ತಿದ್ದಾರೆ. ಪ್ರೇಕ್ಷಣೀಯ ಸ್ಥಳವಾಗಿಯೂ ಇದು ಬದಲಾಗಿದೆ. ಇಲ್ಲಿ ಕೊಂಚ ಎಡವಿದರೂ ಕೆಳಗೆ ಬೀಳುವ ಅಪಾಯವಿದೆ.

ಇತ್ತೀಚೆಗೆ ಭಾರೀ ಮಳೆ ಸಂದರ್ಭ ಒಂದು ಭಾಗದಲ್ಲಿ ಕುಸಿತ ಉಂಟಾಗಿದೆ. ಸ್ವಲ್ಪ ಹೆಚ್ಚು ಕುಸಿದಿದ್ದರೆ ಪಕ್ಕದ ಕಟ್ಟಡಗಳಿಗೆ ಅಪಾಯವಿತ್ತು. ಸದ್ಯ ಮರಳಿನ ಚೀಲ ಅಳವಡಿಸಿ ತಾತ್ಕಾಲಿಕ ರಕ್ಷಣೆ ಮಾಡಲಾಗಿದೆ.

ಹೊಂಡದಲ್ಲಿ ಮಳೆ ನೀರು ತುಂಬಿ  ಸೊಳ್ಳೆ ಉತ್ಪತ್ತಿ ತಾಣವಾಗಿವೆ ಪಂಪ್‌ ಮೂಲಕ ಇಲ್ಲಿ ತುಂಬಿರುವ ನೀರನ್ನು ಖಾಲಿ ಮಾಡುತ್ತಿದ್ದರೂ, ಬಹುತೇಕ ಭಾಗದಲ್ಲಿ ನಿಂತ ನೀರು ಹಾಗೆಯೇ ಇದೆ.

ವರದಿ: ದಿನೇಶ್‌ ಇರಾ
ಚಿತ್ರ: ಸತೀಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next