Advertisement

ಹಂಪನಾ ಕೃತಿಗಳು ಬುದ್ಧಿ ಭಾವನೆಗಳ ಸಮ್ಮಿಶ್ರಣ

12:05 PM Oct 29, 2018 | |

ಬೆಂಗಳೂರು: ಕುಟುಂಬ, ಉದ್ಯೋಗ ಹಾಗೂ ಪ್ರತಿಭೆ ಮೂರರಲ್ಲೂ ಮಹಿಳೆಗೆ ಯಶಸ್ಸು ದೊರೆಯುವುದು ವಿರಳ. ಆದರೆ ನಾಡೋಜ ಕಮಲಾ ಹಂಪನಾ ಅವರು ಈ ಮೂರೂ ಕ್ಷೇತ್ರಗಳಲ್ಲಿ ಯಶಸ್ವಿಯಾದವರು ಎಂದು ಲೇಖಕಿ ಡಾ.ಎಲ್‌.ಜಿ.ಮೀರಾ ಹೇಳಿದರು.

Advertisement

ಕರ್ನಾಟಕ ಲೇಖಕಿಯರ ಸಂಘವು ಭಾನುವಾರ ಬಸವನಗುಡಿಯ ನ್ಯಾಷನಲ್‌ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ನಾಡೋಜ ಪ್ರೊ.ಕಮಲಾ ಹಂಪನಾ ದತ್ತಿ ಉಪನ್ಯಾಸ ಹಾಗೂ ಕಮಲಾ ಹಂಪನಾ-84 ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಮಲಾ ಹಂಪನಾ ಅವರ ಕಲಿಕೆಯ ಹಸಿವು 14ರ ಬಾಲೆಯಂತೆ ಇದೆ. ಬಹುಮುಖ ಪ್ರತಿಭೆಯ ಕಮಲಾ ಹಂಪನಾ ಅವರನ್ನು ಅರ್ಥಮಾಡಿಕೊಳ್ಳಲು ಅನೇಕ ಮಾರ್ಗಗಳಿವೆ. ಎಲ್ಲರನ್ನೂ ಪ್ರೋತ್ಸಾಹಿಸುವ ಗುಣದಿಂದಲೇ ಅವರು ಅನೇಕ ಶಿಷ್ಯರನ್ನು ಸಂಪಾದಿಸಿದ್ದಾರೆ.

ಕಾದಂಬರಿ ಹೊರತುಪಡಿಸಿ ಎಲ್ಲ ಪ್ರಕಾರಗಳ ಸಾಹಿತ್ಯವನ್ನು ಕಮಲಾ ಹಂಪನಾ ರಚಿಸಿದ್ದಾರೆ. ಅವರ ಲೇಖನಿಯಿಂದ ವೈಚಾರಿಕ ಸಾಹಿತ್ಯವೂ ಹೊರಹೊಮ್ಮಿದೆ. ಅದೇ ರೀತಿ ಸೃಜನಶೀಲ ಸಾಹಿತ್ಯವೂ ಮೂಡಿದೆ. ಕಮಲಾ ಹಂಪನಾ ಅವರ ಕೃತಿಗಳು ಬುದ್ಧಿ ಭಾವನೆಗಳ ಸಮ್ಮಿಶ್ರಣವಾಗಿದೆ ಎಂದು ಹೇಳಿದರು.

ಕಮಲಾ ಹಂಪನಾ ಅವರು ಕೇವಲ ಕೃತಿ ರಚನೆ, ಅಧ್ಯಯನ, ಸಂಶೋಧನೆಯಲ್ಲಿ ಕಳೆದುಹೋಗಲಿಲ್ಲ. ಕನ್ನಡ ನಾಡು ನುಡಿಗೆ ತೊಂದರೆ ಉಂಟಾದ ಸಂದರ್ಭದಲ್ಲಿ ತಮ್ಮ ಲೇಖನಿಯಿಂದ ಹೋರಾಟ, ಪ್ರತಿರೋಧ ಕೃತಿಯನ್ನೂ ರಚಿಸಿದ್ದಾರೆ. ತಣ್ಣನೆಯ ಧ್ವನಿಯಲ್ಲಿ ಗಟ್ಟಿತನದ ವಿಷಯಗಳನ್ನು ಪ್ರತಿಪಾದಿಸಿದ್ದಾರೆ.

Advertisement

ಕನ್ನಡಿಗರಿಗೆ ಉದ್ಯೋಗ ದೊರಕದಿದ್ದಾಗ, ಅನ್ಯ ಭಾಷಿಕರಿಂದ ಕನ್ನಡದ ಮೇಲೆ ದಬ್ಟಾಳಿಕೆ ಉಂಟಾದ ಸಂದರ್ಭದಲ್ಲಿ ಪ್ರತಿಭಟಿಸಿದ್ದಾರೆ ಎಂದು ತಿಳಿಸಿದರು. ಶಿಕ್ಷಣ ತಜ್ಞ ಪ್ರೊ.ಕೆ.ಈ.ರಾಧಾಕೃಷ್ಣ ಮಾತನಾಡಿ, ಓಜಸ್ಸು, ತೇಜಸ್ಸು ಹಾಗೂ ವರ್ಚಸ್ಸು ಮೂರರಲ್ಲಿಯೂ ಎತ್ತರದ ಸ್ಥಾನದಲ್ಲಿರುವ ಹಂಪನಾ ಅವರ ದಾಂಪತ್ಯ ಮುದ್ದಣ್ಣ ಮನೋರಮೆ ರೀತಿಯದ್ದು.

ಭಾರತೀಯ ಸಂಸ್ಕಾರದಿಂದ ಬಂದಂತಹ ಜೀವನ ಪ್ರೀತಿಯೇ ಹಂಪನಾ ದಂಪತಿ ಇಷ್ಟು ವರ್ಷ ಅನ್ಯೋನ್ಯ ದಾಂಪತ್ಯ ನಡೆಸಲು ಸಾಧ್ಯವಾಗಿದೆ. ವಿದ್ವತ್‌ ಪರಂಪರೆ ಕಳೆದು ಹೋಗುತ್ತಿರುವ ಸಂದರ್ಭದಲ್ಲಿ ಕಮಲಾ ಹಂಪನಾ ತಮ್ಮ ವಿದ್ವತ್‌ ಪರಂಪರೆಯಿಂದ ಅತ್ಯುತ್ತಮ ಪಾಂಡಿತ್ಯ ಕೃತಿಗಳನ್ನು ರಚಿಸಿದ್ದಾರೆ. ಜತೆಗೆ ಸೃಜನಶೀಲ ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಮಲಾ ಹಂಪನಾ, ಭಾಷೆಗೆ ನಿಘಂಟುವಿನಲ್ಲಿ ಅರ್ಥ ದೊರೆಯಲಿದೆ. ಆದರೆ ಭಾವನೆಗಳಿಗಲ್ಲ. ವಿಜ್ಞಾನವು ವೈಚಾರಿಕ ಸತ್ಯದೆಡೆಗೆ ಕರೆದೊಯ್ಯಲಿದೆ. ಆದರೆ ಭಾವನೆಯು ಸತ್ಯವನ್ನೂ ಮೀರಿದ್ದನ್ನು ಮನುಷ್ಯನಿಗೆ ತಿಳಿಸಲಿದೆ.

ಇಂತಹ ವೈಚಾರಿಕ ಮತ್ತು ಭಾವನೆಗಳ ಸಮ್ಮಿಶ್ರಣದ ಸಂಶೋಧನೆ ನನ್ನದು. ನಾನು ಹಲವು ಧರ್ಮಗ್ರಂಥಗಳನ್ನು ಓದಿರುವೆ. ಆದರೆ ನನಗಿನ್ನೂ ಆತ್ಮದ ಬಗ್ಗೆ ಸರಿಯಾಗಿ ತಿಳಿದಿಲ್ಲ. ಹೀಗಾಗಿ ನಾನು ಆತ್ಮಕಥೆ ಬರೆಯುತ್ತಿಲ್ಲ. ಬದಲಿಗೆ ಜೀವನ ರೇಖೆಗಳ ಬಗ್ಗೆ ಬರೆಯುತ್ತಿದ್ದೇನೆ. ಎರಡು ವರ್ಷಗಳಲ್ಲಿ ಅದು ಬಿಡುಗಡೆಗೆ ಸಿದ್ಧವಾಗಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಡಾ.ಎಚ್‌.ಎನ್‌. ಆರತಿ ಅವರ “ಸ್ಮೋಕಿಂಗ್‌ ಜೋನ್‌’ ಕೃತಿ ಲೋಕಾರ್ಪಣೆಗೊಳಿಸಲಾಯಿತು. ವಿಮರ್ಶಕ ಎಸ್‌.ಆರ್‌.ವಿಜಯಶಂಕರ್‌ ಅವರು ಕಮಲಾ ಹಂಪನಾ ಕೃತಿಗಳ ಬಗ್ಗೆ ಉಪನ್ಯಾಸ ನೀಡಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಲಾ ಸಂಪನ್ನಕುಮಾರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next