ಜೆರುಸಲೇಂ(Jerusalem): ದೀರ್ಘಕಾಲದಿಂದ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ, ಗಾಜಾ(Gaza) ಕದನ ವಿರಾಮ(ceasefire) ಮಾತುಕತೆ ಕುರಿತು ಬೇಹುಗಾರಿಕಾ ಮುಖ್ಯಸ್ಥ ಹಾಜರಾಗಲಿದ್ದಾರೆ ಎಂದು ಇಸ್ರೇಲ್ ಘೋಷಿಸಿದ ಬೆನ್ನಲ್ಲೇ ಒಂದು ವೇಳೆ ಕದನ ವಿರಾಮಕ್ಕೆ ಒಪ್ಪಿದರೆ ನಾವು ಕೂಡಾ ಯುದ್ಧವನ್ನು ನಿಲ್ಲಿಸುವುದಾಗಿ ಹಮಾಸ್ ಪ್ರತಿಜ್ಞೆಗೈದಿರುವುದಾಗಿ ವರದಿ ತಿಳಿಸಿದೆ.
ಈ ಹಿಂದಿನ ಯುದ್ಧ ನಿಲ್ಲಿಸುವ ಕದನ ವಿರಾಮ ಮಾತುಕತೆ ವಿಫಲವಾಗಿತ್ತು. ಬಳಿಕ ಕಳೆದ ವಾರ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ನನ್ನು ಇಸ್ರೇಲ್ ವೈಮಾನಿಕ ದಾಳಿ ನಡೆಸಿ ಹ*ತ್ಯೆಗೈದ ನಂತರ ಅಮೆರಿಕ ಕೂಡಾ ಕದನ ವಿರಾಮದ ಬಗ್ಗೆ ಧ್ವನಿ ಎತ್ತಿತ್ತು.
ಇಸ್ರೇಲ್ ನ ಗಾಜಾ ಕದನ ವಿರಾಮ ಪ್ರಸ್ತಾಪದ ಬಗ್ಗೆ ದೋಹಾ ಮೂಲದ ನಾಯಕತ್ವ ಚರ್ಚೆ ನಡೆಸುತ್ತಿರುವುದಾಗಿ ಹಮಾಸ್ ನ ಹಿರಿಯ ಅಧಿಕಾರಿಗಳು ಎಎಫ್ ಪಿಗೆ ತಿಳಿಸಿರುವುದಾಗಿ ವರದಿಯಾಗಿದೆ.
ಇಸ್ರೇಲ್ ಕದನ ವಿರಾಮದ ಬಗ್ಗೆ ಘೋಷಿಸುತ್ತಿದ್ದಂತೆಯೇ ಹಮಾಸ್ ಕೂಡಾ ಯುದ್ಧ ನಿಲ್ಲಿಸಲು ಸಿದ್ಧವಾಗಿರುವುದಾಗಿ ತಿಳಿಸಿದೆ. ಆದರೆ ಇಸ್ರೇಲ್ ಕದನ ವಿರಾಮಕ್ಕೆ ಬದ್ಧವಾಗಿರಬೇಕು..ಗಾಜಾ ಪಟ್ಟಿಯಿಂದ ಸೇನೆಯನ್ನು ಹಿಂಪಡೆದು ಸ್ಥಳಾಂತರಗೊಂಡ ಜನರನ್ನು ಮರಳಿ ಕರೆತರಬೇಕು. ಅಲ್ಲದೇ ಕೈದಿಗಳ ಹಸ್ತಾಂತರ ಒಪ್ಪಂದಕ್ಕೆ ಒಪ್ಪಿ, ಮಾನವೀಯತೆ ನೆಲೆಯಲ್ಲಿ ಗಾಜಾಕ್ಕೆ ನೆರವು ನೀಡಬೇಕೆಂದು ಹಮಾಸ್ ಪ್ರತಿಕ್ರಿಯೆ ನೀಡಿದೆ.
ಈಜಿಪ್ಟ್ ಕದನ ವಿರಾಮದ ಮಾತುಕತೆ ಬಗ್ಗೆ ಮುಂದಾಳತ್ವ ವಹಿಸಿದ್ದು, ಒತ್ತೆಯಾಳುಗಳ ಬಿಡುಗಡೆ ಒಪ್ಪಂದದ ಬಗ್ಗೆ ಈಜಿಪ್ಟ್ ಸಿದ್ದವಾಗಿರುವುದನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವಾಗತಿಸಿರುವುದಾಗಿ ವರದಿ ತಿಳಿಸಿದೆ.