ದೇವನಹಳ್ಳಿ: ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ರೈಲು ನಿಲ್ದಾಣ ನಿರ್ಮಿಸಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದ್ದು ಶೀಘ್ರದಲ್ಲಿಯೇ ರೈಲು ಸಂಚಾರಕ್ಕೆ ಚಾಲನೆ ಸಿಗಲಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ನಿಂದ 2 ಕಿ.ಮೀ ದೂರದಲ್ಲಿ ನೂತನ ರೈಲು ನಿಲ್ದಾಣ ನಿರ್ಮಾಣವಾಗಿದ್ದು ರೈಲಿನಲ್ಲಿ ಬರುವ ಪ್ರಯಾಣಿಕರಿಗೆ ರೈಲ್ವೆ ನಿಲ್ದಾಣದಿಂದ ಏರ್ ಪೋರ್ಟ್‌ಗೆ ಉಚಿತ ಬಸ್ ವ್ಯವಸ್ಥೆ ಮಾಡಲಿದ್ದಾರೆ.
ರಸ್ತೆ ನಿರ್ಮಾಣ: ನೂತನ ರೈಲು ನಿಲ್ದಾಣದ ಬಳಿ ಪ್ರಯಾಣಿಕರನ್ನು ಸೆಳೆಯಲು ಬಣ್ಣದ ಹೂಗಳಿಂದ ಆಕರ್ಷಣೀಯ ಗಾರ್ಡ್ ನ್ ಸೇರಿ ಸುಸಜ್ಜಿತ ರಸ್ತೆ , ನೂತನ ನಿಲ್ದಾಣ ಸಜ್ಜಾಗುತ್ತಿದೆ. ಬೆಂಗಳೂರಿನಿಂದ ವಿಮಾನದಲ್ಲಿ ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆ ಉಡುಗೊರೆ ಇದಾಗಿದ್ದು ಹಲವಾರು ವರ್ಷಗಳಿಂದ ಈ ಭಾಗದ ಜನ ಷಟಲ್ ರೈಲಿಗೆ ಒತ್ತಾಯ ಮಾಡುತ್ತಿದ್ದರು. ಅದರ ಫಲವಾಗಿ ರಸ್ತೆ ಸಂಚಾರ ಬದಲಿಗೆ ಆರಾಮಾಗಿ ರೈಲಿನಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬಹುದಾಗಿದೆ. ಕೆಐಎಎಲ್ ಗೆ ತಲುಪಲು ಗಂಟೆ ಗಟ್ಟಲೆ ಸಂಚಾರ ಸಮಸ್ಯೆಯಿಂದ ಪ್ರಯಾಣಿಕರು ಮುಕ್ತರಾಗಬಹುದಾಗಿದೆ.
ಎಲ್ಲೆಲ್ಲಿ ಸಂಚಾರ?: ಇನ್ನೂ ಇದೀಗ ಏರ್ ಪೋರ್ಟ್ ಮುಖಾಂತರ ಬೆಂಗಳೂರಿ ನಿಂದ ಚಿಕ್ಕಬಳ್ಳಾಪುರ, ಚಿಂತಾಮಣಿಯಿಂದ ಕೋಲಾರಕ್ಕೆ ಹಾದು ಹೋಗಿರುವ ರೈಲ್ವೆ ಅಡಿ ದಿನಕ್ಕೆ 03 ರೈಲು ಮಾತ್ರ ಸಂಚರಿಸುತ್ತಿದ್ದು ನೂತನ ನಿಲ್ದಾಣ ನಿರ್ಮಾಣದ ನಂತರ ಷಟಲ್ ರೈಲು ಪ್ರಾರಂಭಗೊಳ್ಳಲಿದೆ. ಶೀಘ್ರ ರೈಲ್ವೆ ನಿಲ್ದಾಣಕ್ಕೆ ರೈಲು ಆಗಮಿಸಲಿದೆ. ಭರದಿಂದ ಸಾಗಿದ ಕಾಮಗಾರಿ: ಈಗಾಗಲೇ ಶೇ.80 ರೈಲು ನಿಲ್ದಾಣ ಕಾಮಗಾರಿ ಮುಗಿಸಿರುವ ರೈಲ್ವೆ ಇಲಾಖೆ ಮುಂದಿನ ತಿಂಗಳಲ್ಲಿ ಏರ್ ಪೋರ್ಟ್‌ಗೆ ರೈಲು ಓಡಿಸಲು ಯೋಜನೆ ಮಾಡಿಕೊಂಡಿದೆ. ಇದೀಗ ಉಳಿದ ಶೇ.20 ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಲು ಮುಂದಾಗಿದೆ.
ನಗರ ರೈಲು ನಿಲ್ದಾಣ, ಯಶವಂತಪುರ, ಯಲಹಂಕ, ಮಲ್ಲೇಶ್ವರ, ಬೈಯಪ್ಪನಹಳ್ಳಿ ಸೇರಿದಂತೆ ಇತರೆ ಕಡೆಗಳಿಂದ ಸಂಚರಿಸಬಹುದು ಎನ್ನಲಾಗುತ್ತಿದೆ. ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್ ವಿಡಿಯೋ ಸಮೇತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿ ರೈಲು ನಿಲ್ದಾಣದ ಬಗ್ಗೆ ಕುರಿತಾಗಿ ಟ್ವೀಟ್ ಮಾಡಿದ್ದಾರೆ. ವಿಮಾನ ನಿಲ್ದಾಣದ ಸುತ್ತಮುತ್ತ ರೈಲು ನಿಲ್ದಾಣವಿಲ್ಲ ಎಂಬ ಕೊರತೆ ಇತ್ತು. ಇದನ್ನು ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ. ವಿಮಾನ ನಿಲ್ದಾಣದ ಬಳಿ 2 ಕಿ.ಮೀ ಅಂತರದಲ್ಲಿ ರೈಲು ನಿಲ್ದಾಣ ನಿರ್ಮಿಸಲಾಗುವುದು.
–ಎಸ್. ಮಹೇಶ್