Advertisement

ಪ್ರಖರ ದೀಪ ತೆರವಿಗೆ ಸಾರಿಗೆ ಇಲಾಖೆ ಕ್ರಮ

10:00 AM Oct 29, 2018 | |

ಕುಂದಾಪುರ: ಹೆದ್ದಾರಿಗಳಲ್ಲಿ ರಾತ್ರಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಎಲ್ಲ ವಾಹನಗಳಲ್ಲಿ ಪ್ರಖರ ಬೆಳಕು ಸೂಸುವ ಹೆಲೋಜಿನ್‌ ದೀಪಗಳ ತೆರವಿಗೆ ಉಡುಪಿಯ ಪ್ರಾದೇಶಿಕ ಸಾರಿಗೆ ಇಲಾಖೆ ಮುಂದಾಗಿದೆ. ಎದುರು ವಾಹನಗಳಿಗೆ ತೊಡಕಾಗುವ ಪ್ರಖರ ಹೆಲೋಜಿನ್‌ ದೀಪಗಳನ್ನು ಅಳವಡಿಸಬಾರದು ಎನ್ನುವ ಕಾನೂನು ಇದ್ದರೂ ಯಾರೂ ಪಾಲಿಸುತ್ತಿಲ್ಲ. ತಡವಾಗಿಯಾದರೂ ಇಲಾಖೆ ಎಚ್ಚೆತ್ತುಕೊಂಡಿದೆ. 

Advertisement

ಸ್ವಇಚ್ಛೆಯಿಂದ ತೆರವು
ಬೇರೆ ವಾಹನಗಳಿಗೆ ತೊಂದರೆ ಮಾಡುವಂತಹ ದೀಪಗಳನ್ನು ವಾಹನ ಮಾಲಕರು ಸ್ವಇಚ್ಛೆಯಿಂದ ತೆರವು ಮಾಡಿ ಎನ್ನುವುದಾಗಿ ಸಾರಿಗೆ ಇಲಾಖೆ ಮನವಿ ಮಾಡಿದೆ. 

ವಾರದ ಗಡುವು
ಅಪಾಯಕಾರಿ ಲೈಟ್‌ ತೆರವಿಗೆ ವಾಹನ ಸವಾರರಿಗೆ ಒಂದು ವಾರದ ಗಡುವು ನೀಡಲಾಗಿದೆ. ಆ ಬಳಿಕವೂ ತೆರವು ಮಾಡದಿದ್ದಲ್ಲಿ, ನಿರಂತರ ಕಾರ್ಯಾಚರಣೆ ನಡೆಸಿ, ಕಾನೂನಿನಂತೆ ತಲಾ 1 ಸಾವಿರ ರೂ. ದಂಡ ವಿಧಿಸಲಾಗುವುದು. ಇದನ್ನು ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಪೊಲೀಸ್‌ ಇಲಾಖೆಯ ಸಹಕಾರದೊಂದಿಗೆ ಜಾರಿಗೆ ತರಲು ಚಿಂತಿಸಲಾಗಿದೆ ಎಂದು ಉಡುಪಿಯ ಪ್ರಾದೇಶಿಕ ಸಾರಿಗೆ ಇಲಾಖೆಯ ಆಯುಕ್ತ ರಮೇಶ್‌ ವರ್ಣೇಕರ್‌ “ಉದಯವಾಣಿ’ಗೆ ತಿಳಿಸಿದ್ದಾರೆ. 

2 ವರ್ಷದಿಂದ ಇಲ್ಲ ಸಭೆ
ರಸ್ತೆ ಅಪಘಾತ ನಿಯಂತ್ರಿಸುವಲ್ಲಿ ರಸ್ತೆ ಸುರಕ್ಷತಾ ಸಮಿತಿಯ ಪಾತ್ರ ಮಹತ್ವದ್ದಾಗಿದೆ. ಆದರೆ ದ.ಕ. ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಡಿಸಿ, ಎಸ್ಪಿ, ಆರ್‌ಟಿಒ ಅಧಿಕಾರಿಗಳನ್ನು ಒಳಗೊಂಡ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯೇ ನಡೆದಿಲ್ಲ. ಉಡುಪಿ ಜಿಲ್ಲೆಯಲ್ಲಿ ಕಳೆದ ತಿಂಗಳು ಸಮಿತಿ ಸಭೆ ನಡೆದಿತ್ತು.

 ಸಮಿತಿ ಕ್ರಿಯಾಶೀಲವಾಗಬೇಕು
ಇತ್ತೀಚೆಗಿನ ಮಾಡೆಲ್‌ಗ‌ಳ ಕಾರುಗಳಲ್ಲಿ ಪ್ರಖರ ಬೆಳಕು ಸೂಸುವ ದೀಪ ಇರುವುದು ಸಾಬೀತಾಗಿದೆ. ರಾತ್ರಿ ವೇಳೆ ಸಂಭವಿಸುವ ಹೆಚ್ಚಿನ ರಸ್ತೆ ಅಪಘಾತ ಪ್ರಕರಣಗಳಿಗೆ ಹೆಲೋಜಿನ್‌ ಲೈಟ್‌ಗಳೇ ಕಾರಣ. ಇವುಗಳ ತೆರವು ಸಾರಿಗೆ ಇಲಾಖೆ ಯಿಂದ ಮಾತ್ರ ಅಸಾಧ್ಯ. ಮೋಟಾರು ಕಾಯ್ದೆ ಉಲ್ಲಂಘನೆ ಸಂಬಂಧ ಡಿಸಿ, ಎಸ್ಪಿ , ಆರ್‌ಟಿಒ ಆಯುಕ್ತರನ್ನೊಳಗೊಂಡ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಗೆ ಹೆಚ್ಚಿನ ಅಧಿಕಾರವಿದೆ. ಇದು ಕ್ರಿಯಾಶೀಲವಾದರೆ ಅಪಘಾತ ಕಡಿಮೆಯಾಗಬಹುದು.

Advertisement

ಗಂಭೀರವಾಗಿ ಪರಿಗಣಿಸಿದ್ದೇವೆ
ಹೆದ್ದಾರಿಯಲ್ಲಿ ಇತ್ತೀಚೆಗೆ ಸಂಭವಿಸಿರುವ ಕೆಲವು ಅಪಘಾತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಉಡುಪಿ ಜಿಲ್ಲೆಯಾದ್ಯಂತ ವಾಹನಗಳ ಹೆಲೋಜಿನ್‌ ದೀಪ ತೆರವು ಮಾಡಲು ಮುಂದಾಗಿದ್ದೇವೆ. ವಾಹನ ಸವಾರರಿಗೆ ಒಂದು ವಾರ ಸಮಯ ನೀಡಲಾಗಿದೆ, ತಪ್ಪಿದಲ್ಲಿ ದಂಡ ವಿಧಿಸಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲ ಕಡೆಗಳಲ್ಲಿ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಲಾಗುವುದು. 
 ರಮೇಶ್‌ ವರ್ಣೇಕರ್‌, ಪ್ರಾದೇಶಿಕ ಸಾರಿಗೆ ಆಯುಕ್ತರು, ಉಡುಪಿ

ಸಿಬಂದಿ ಕೊರತೆ
ಅಪಘಾತ ತಡೆಯಲು ಹೆಲೋಜಿನ್‌ ಲೈಟ್‌ಗಳಿಗೆ ಕಡಿವಾಣ ಹಾಕಬೇಕಾದುದು ತೀರಾ ಅಗತ್ಯ. ಆದರೆ ಇದರ ಕಾರ್ಯಾಚರಣೆಗೆ ಬಂಟ್ವಾಳ ಹಾಗೂ ಪುತ್ತೂರು ವ್ಯಾಪ್ತಿಯಲ್ಲಿ  ಸಾರಿಗೆ ಇಲಾಖೆಯಲ್ಲಿ ಸಿಬಂದಿ ಕೊರತೆ ಅಡ್ಡಿ ಯಾಗಿದೆ. ಪೊಲೀಸ್‌ ಇಲಾಖೆಯೊಂದಿಗೆ ಜಂಟಿಯಾಗಿ ಮುಂದಿನ ದಿನಗಳಲ್ಲಿ ಈ ಸಂಬಂಧ ಕಾರ್ಯಾಚರಣೆ ನಡೆಸಲು ಚಿಂತನೆ ನಡೆಸಲಾಗುವುದು. 
 ಜಿ.ಎಸ್‌. ಹೆಗ್ಡೆ , ಸಾರಿಗೆ ಆಯುಕ್ತರು (ಪ್ರಭಾರ) ಪುತ್ತೂರು ಹಾಗೂ ಸಹಾಯಕ ಆಯುಕ್ತರು, ಬಂಟ್ವಾಳ

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next