Advertisement

ಹಳ್ಳೂರು ಗ್ರಾಪಂ ಭ್ರಷ್ಟಾಚಾರ: ತನಿಖೆಗೆ ಆಗ್ರಹ

04:21 PM Feb 24, 2021 | Team Udayavani |

ಹಾವೇರಿ: ರಟ್ಟೀಹಳ್ಳಿ ತಾಲೂಕಿನ ಹಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ಸಾಕಷ್ಟು ಅವ್ಯವಹಾರ, ಭ್ರಷ್ಟಾಚಾರ ನಡೆಯುತ್ತಿದೆ. ಪಂಚಾಯಿತಿಯಿಂದ ನಡೆಯುವ ಬಹುತೇಕ ಕಾಮಗಾರಿಗಳು ಕಳಪೆ ಗುಣಮಟ್ಟದಿಂದಕೂಡಿದ್ದು, ಜಿಲ್ಲಾ ಪಂಚಾಯಿತಿಯಿಂದ ಸಮಗ್ರ ತನಿಖೆನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಳ್ಳೂರು ಗ್ರಾಮದ ಸಾಮಾಜಿಕ ಕಾರ್ಯಕರ್ತ ಎ.ಎಚ್‌. ಶಿಂಧೆ ಒತ್ತಾಯಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳ್ಳೂರು ಗ್ರಾಪಂನಲ್ಲಿ ಸಾಕಷ್ಟು ಭ್ರಷ್ಟಾಚಾರ, ಕಳಪೆ ಕಾಮಗಾರಿ ನಡೆಯುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಎಸಿಬಿ, ಲೋಕಾಯುಕ್ತ ಸೇರಿ ಬೇರೆ-ಬೇರೆ ತನಿಖಾ ಇಲಾಖೆಗಳಿಗೆ ದೂರುದಾಖಲಿಸಲು ದಾಖಲೆಗಳು ಅವಶ್ಯವಿದ್ದು, ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದರೂ ಪಿಡಿಒ ರವೀಶ್‌ಕೆ.ಆರ್‌. ಯಾವುದೇ ಮಾಹಿತಿ ಕೊಡುತ್ತಿಲ್ಲ, ಮಾಹಿತಿಪೂರೈಸುವಂತೆ ಮಾಹಿತಿ ಆಯೋಗದ ಆಯುಕ್ತರು ಆದೇಶಿಸಿದರೂ ಪಾಲಿಸುತ್ತಿಲ್ಲ. ಕೂಡಲೇ ಜಿಪಂ ಸಿಇಒ ಅವರು ಇದನ್ನು ಗಂಭೀರವಾಗಿ ಪರಿಗಣಿಸಿಪಿಡಿಒ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪ್ರಾಥಮಿಕ ಶಾಲೆ ಆವರಣದಲ್ಲಿ ನಿರ್ಮಿಸಿರುವ ಹೈಟೆಕ್‌ ಶೌಚಾಲಯದ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಆಶ್ರಯ ಮನೆಗಳನ್ನು ಅಕ್ರಮವಾಗಿಹಂಚಿಕೆ ಮಾಡಲಾಗಿದೆ. ಯಾವ ಕಾಮಗಾರಿಗೆ ಎಷ್ಟು ಅನುದಾನ ಬಂದಿದೆ. ಎಷ್ಟು ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಯಾರಿಗೂ ಗೊತ್ತಾಗುತ್ತಿಲ್ಲ, ಮಾಹಿತಿಹಕ್ಕಿನಡಿ ಅರ್ಜಿ ಸಲ್ಲಿಸಿದರೂ ಮಾಹಿತಿ ಕೊಡದಿದ್ದಾಗಮಾಹಿತಿ ಆಯೋಗದ ಬೆಳಗಾವಿ ಆಯುಕ್ತರಿಗೆ ದೂರುಸಲ್ಲಿಸಿದ್ದೇವು. ಆಗ ಅವರು ಸಮರ್ಪಕ ಮಾಹಿತಿ ಪೂರೈಸುವಂತೆ ಕಳೆದ ಮಾರ್ಚ್‌ನಲ್ಲೇ ಆದೇಶ ಹೊರಡಿಸಿದ್ದರೂ ಮಾಹಿತಿ ನೀಡುತ್ತಿಲ್ಲ. ಆಯೋಗಕ್ಕೂ ಕೇವಲ ಮಾಹಿತಿ ಒದಗಿಸಲಾಗಿದೆ ಎಂದು ಪತ್ರ ಬರೆದಿದ್ದಾರೆ. ಯಾವೆಲ್ಲ ಮಾಹಿತಿ ಕೊಟ್ಟಿದ್ದೇವೆ. ಏನೆಲ್ಲ ಅಡಕಗಳನ್ನು ಹಚ್ಚಿದ್ದೇವೆ ಎಂಬ ಯಾವ ಮಾಹಿತಿ ಅವರಿಗೂ ಕೊಟ್ಟಿಲ್ಲ ಎಂದು ದೂರಿದರು.

ಕೂಡಲೇ ಪಿಡಿಒ ಅವರನ್ನು ಅಮಾನತು ಮಾಡಿ ತನಿಖೆ ನಡೆಸಬೇಕು. ಇಲ್ಲದಿದ್ದರೆ ಪಂಚಾಯಿತಿ ಎದುರು ನಿರಂತರ ಧರಣಿ ಹಮ್ಮಿಕೊಳ್ಳುತ್ತೇವೆ ಎಂದರು. ಹಳ್ಳೂರು ನವಶಿಲಾಯುಗ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸಿ.ಎಂ. ಜಕ್ಕಾಲಿ ಮಾತನಾಡಿದರು ಸುದ್ದಿಗೋಷ್ಠಿಯಲ್ಲಿ ಗ್ರಾಮದ ಮಂಜುನಾಥ ಹಳ್ಳೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next