Advertisement

ಸದಸ್ಯರು, ಇಲಾಖಾಧಿಕಾರಿಗಳು ಗೈರು 

08:15 AM Mar 24, 2018 | |

ಸಿದ್ದಾಪುರ: ಹಳ್ಳಿಹೊಳೆ ಗ್ರಾ.ಪಂ.ನ  2017-18ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ ಶೆಟ್ಟಿಪಾಲು ಸರಕಾರಿ ಹಿ. ಪ್ರಾ. ಶಾಲೆಯ ಸಭಾಭವನದಲ್ಲಿ ಅಧ್ಯಕ್ಷೆ ಭಾಗೀರಥಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.

Advertisement

ಗ್ರಾಮಸಭೆ ಆರಂಭವಾಗುತ್ತಿದ್ದಂತೆ ಗ್ರಾಮಸ್ಥರು ಗ್ರಾ.ಪಂ. ಸದಸ್ಯರು, ಇಲಾಖಾಧಿಕಾರಿಗಳು ಸಭೆಗೆ ಗೈರುಹಾಜರಾದ ಬಗ್ಗೆ ಆಕ್ಷೇಪಿಸಿದರು. ಅಧಿಕಾರಿ ಗಳು ಗ್ರಾಮಸಭೆಗೆ ಗೈರಾಗಿದ್ದಾರೆ. ಜನಪ್ರತಿನಿಧಿಗಳಿಗೆ ಅಧಿಕಾರಿಗಳನ್ನು ಗ್ರಾಮ  ಸಭೆಗೆ ಕರೆಸಲು ಆಗದಿದ್ದ ಮೇಲೆ ಯಾಕೆ ಗ್ರಾಮಸಭೆ ನಡೆಸುತ್ತಿರಿ ಎಂದು ಗ್ರಾ.ಪಂ. ಆಡಳಿತವನ್ನು ತರಾಟೆ ತೆಗೆದುಕೊಂಡು, ಗ್ರಾಮಸಭೆ ಮುಂದೂಡಲು ಆಗ್ರಹಿಸಿದರು.ಮಾರ್ಗದರ್ಶಿ ಅಧಿಕಾರಿಯವರು ಮಧ್ಯೆ ಪ್ರವೇಶಿಸಿ,  ಗ್ರಾಮಸಭೆಗೆ ಬಾರದ ಅಧಿಕಾರಿಗಳಿಗೆ ಸಂಬಂಧಪಟ್ಟವರಿಂದ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸು ತ್ತೇವೆ. ಸದಸ್ಯರು ಸಭೆಗೆ ಬಾರದ ಬಗ್ಗೆ ಅಧ್ಯಕ್ಷರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಗ್ರಾಮಸ್ಥರನ್ನು ಸಮಾಧಾನಪಡಿಸಿ, ಗ್ರಾಮಸಭೆ ಮುಂದುವರಿಸಿದರು.

ಶಿಕ್ಷಣ ಇಲಾಖೆ: ಗ್ರಾಮಸ್ಥರ ಆಕ್ರೋಶ
ಹಳ್ಳಿಹೊಳೆ ಗ್ರಾಮದ ದೇವರಬಾಳಿನ ಸರಕಾರಿ ಶಾಲೆಗೆ ಶಿಕ್ಷಕಿ ಸರಿಯಾಗಿ ಬರುತ್ತಿಲ್ಲ. ಇದರ ಬಗ್ಗೆ ಶಿಕ್ಷಕಿಯನ್ನು ಪ್ರಶ್ನಿಸಿದರೆ, ಉದ್ದಟತನದಿಂದ ವರ್ತಿಸುತ್ತಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದರೆ, ಅಧಿಕಾರಿಗಳು ಕೂಡ ಶಿಕ್ಷಕಿಯ ಪರವಾಗಿ ನಿಂತು ಶಾಲೆ ಮುಚ್ಚಿಸುವ ಬಗ್ಗೆ ಚಿಂತನೆ  ನಡೆಸುತ್ತಿದ್ದಾರೆ.

ಶಾಲೆ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಇಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಇದಕ್ಕೆ ಅಧ್ಯಕ್ಷರು ಧ್ವನಿಗೂಡಿಸಿ, ಪಂ.  ನಿರ್ಣಯ ಮಾಡಿ ಇಲಾಖೆಗೆ ಕಳಿಸಿದರೂ ಕೂಡ ಶಿಕ್ಷಕಿಯ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ. ಇದರ ಬಗ್ಗೆ ಶಿಕ್ಷಕಿ ಅವರನ್ನು ಪ್ರಶ್ನಿಸಿದರೆ  ಗ್ರಾ. ಪಂ. ಅಧ್ಯಕ್ಷರು ಎನ್ನುವ ಗೌರವ ನೀಡದೆ ಮಾತನಾಡುತ್ತಾರೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿ ಇಲಾಖೆಯ ಮಾಹಿತಿ ನೀಡಿದರು.

Advertisement

ಗ್ರಾ. ಪಂ. ಸದಸ್ಯರಾದ ಶ್ರೀಕರ ನಾಯ್ಕ, ದಿನೇಶ ಯಡಿಯಾಳ, ಶಿವರಾಮ ಪೂಜಾರಿ, ಮಾಧವ ಶೆಣೈ, ರಾಘವೇಂದ್ರ ನಾಯ್ಕ, ಗಿರಿಜಾ, ಉಪ ಅರಣ್ಯಧಿಕಾರಿ ವೀರಣ್ಣ, ಶಂಕರನಾರಾಯಣ ಪೊಲೀಸ್‌ ಠಾಣೆಯ ಎಎಸ್‌ಐ ಶುಭಕರ, ಮೆಸ್ಕಾಂ ಜೂನಿಯರ್‌ ಎಂಜಿನಿಯರ್‌ ಹರೀಶ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಲಲಿತಾ, ನಮ್ಮಭೂಮಿ ಸಂಸ್ಥೆಯ ವನಜಾ ಮೊದಲಾದವರು ಉಪಸ್ಥಿತರಿದ್ದರು.

ನಮ್ಮ ಭೂಮಿ ಸಂಸ್ಥೆಯ ವತಿಯಿಂದ ಚೊಕ್ಕ ಚುನಾವಣೆ ಅಭಿಯಾನದ ಬಗ್ಗೆ ಮಾಹಿತಿ, ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ ಎನ್ನುವ ಕರಪತ್ರ ವಿತರಿಸಿ, ಪ್ರಮಾಣ ವಚನ ಬೋಧಿಸಿದರು.ಅಭಿವೃದ್ಧಿ ಅಧಿಕಾರಿ ಸುದರ್ಶನ ಕಾರ್ಯಕ್ರಮ ನಿರೂಪಿಸಿದರು.

ಸಮಸ್ಯೆಗಳು
ಕೃಷಿ ಭೂಮಿಗಳಿಗೆ ಕಾಡುಪ್ರಾಣಿಗಳ ಕಾಟ, ಅಪಾಯಕಾರಿ ವಿದ್ಯುತ್‌ ಲೈನ್‌ಗಳು, ಅಂಗನವಾಡಿ ಪರಿಸರದಲ್ಲಿ  ಬೀದಿ ನಾಯಿಗಳ ಕಾಟ, ಅಕ್ರಮ ಮದ್ಯ ಮಾರಾಟ, ಶೆಟ್ಟಿಪಾಲು ಹೊಳೆಯ ಸೇತುವೆಯ ಕೈಪಟ್ಟಿ ರಿಪೇರಿಯಾಗದ್ದು, ಕ್ಯೂರಿಂಗ್‌ ಮಾಡದಿರುವ ಬಗ್ಗೆ, ಗ್ರಾಮದಲ್ಲಿ ಅಪರಿಚಿತರ ತಿರುಗಾಟ  ಮೊದಲಾದ ಸಮಸ್ಯೆಗಳನ್ನು ಗ್ರಾಮಸ್ಥರು ಸಭೆಯ ಮುಂದಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next