ಶಿರಸಿ: ಈ ವರ್ಷ ಹಳ್ಳಿಸೂನ ದಿಲ್ಲಿ, ದಿಲ್ಲೀಸೂನ ದುಬೈ ಎಂಬ ಹೆಸರಿನಲ್ಲಿ ಕೊಂಕಣಿ ಜಾಗೃತಿ ಅಭಿಯಾನ ಹಮ್ಮಿಕೊಂಡು ಕರ್ನಾಟಕದ ಹಳ್ಳಿ-ಹಳ್ಳಿಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ ಎಂದು ಕರ್ನಾಟಕ ಕೊಂಕಣಿ ಅಕಾಡೆಮಿ ಅಧ್ಯಕ್ಷ ಆರ್.ಪಿ. ನಾಯ್ಕ ಹೇಳಿದರು.
ಆವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಕೊಂಕಣಿ ಜಾಗೃತಿ ಅಭಿಯಾನದಡಿ ತಾಲೂಕಿನ ಹುಲೇಕಲ್‌ನ ಬಾಲ ಭವನದಲ್ಲಿ ಕೊಂಕಣಿ ಭಾಷಾ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕರ್ನಾಟಕ ಸರಕಾರದ ಅನುದಾನದಿಂದ ನಡೆಯುತ್ತಿರುವ ಕೊಂಕಣಿ ಅಕಾಡೆಮಿ ಸರಕಾರದ ಸೂಚನೆಯಂತೆ ತನ್ನ ಇತಿಮಿತಿಗಳಲ್ಲಿ ಕಾರ್ಯನಿರ್ವಹಿಸುತ್ತ ಕೊಂಕಣಿ ಭಾಷೆಯ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ವರ್ಷ ಈಗಾಗಲೇ ಇಂಥ 33 ಕಾರ್ಯಕ್ರಮಗಳನ್ನು ಪೂರೈಸಿದ್ದೇವೆ. ಇದರಿಂದ ಕೊಂಕಣಿಗರ ಭಾಷಾಭಿಮಾನವನ್ನು ಜಾಗೃತ ಗೊಳಿಸುತ್ತಿದ್ದೇವೆ. ಅಲ್ಲದೇ ಆಯಾ ಊರುಗಳಲ್ಲಿರುವ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಗೂ ಭೇಟಿ ನೀಡಿ ಕೊಂಕಣಿ ವಿದ್ಯಾರ್ಥಿಗಳಿಗೆ ತೃತೀಯ ಐಚ್ಛಿಕ ಭಾಷೆಯಾಗಿ ಕೊಂಕಣಿ ಕಲಿಯುವಂತೆ ಮನ ಒಲಿಸುತ್ತಿದ್ದೇವೆ ಎಂದರು.
ರಾಷ್ಟ್ರಪತಿ ಜೀವನರಕ್ಷಾ ಪ್ರಶಸ್ತಿ ವಿಜೇತ ರಾಮದಾಸ ಪಾಂಡುರಂಗ ಪೈ, ನಮ್ಮ ಮಾತೃಭಾಷೆ ಕೊಂಕಣಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶ್ರವಣ ಬೆಳಗೊಳದ ಗೊಮ್ಮಟೇಶ್ವರ ಪ್ರತಿಮೆ ಬುಡದಲ್ಲಿ ಚಾವುಂಡರಾಯಾನೆ ಕರವಿಯಲೇಂ ಎಂಬ ದೇವನಾಗರಿ ಲಿಪಿಯಲ್ಲಿ ಕೊರೆದಿರುವ ವಾಕ್ಯ ಕೊಂಕಣಿ ಭಾಷೆಯದ್ದು ಎಂದು ಭಾಷಾತಜ್ಞರು ಅರ್ಥೈಸಿದ್ದಾರೆ. ಕ್ರಿ.ಶ.1560ರಲ್ಲಿ ಪೋರ್ತುಗೀಸರ ಧರ್ಮಾಂತರ ಕಾನೂನಿಗೆ ಹೆದರಿದ ಕೊಂಕಣಿ ಭಾಷಿಕರು ತಮ್ಮ ಮೂಲ ನೆಲೆಯಾದ ಗೋವೆ ತೊರೆದು ದಕ್ಷಿಣಕ್ಕೆ ವಲಸೆ ಬಂದು ಕಾರವಾರದಿಂದ ಕೊಚ್ಚಿವರೆಗಿನ ಕರಾವಳಿಗುಂಟ ನೆಲೆಸಿದರು. ಆಗ ಅಯಾ ಪ್ರದೇಶದಲ್ಲಿ ಆಳುತ್ತಿದ್ದ ಸೋಂದೆ, ಕೆಳದಿ ಅರಸರು, ಗೇರುಸೊಪ್ಪೆಯ ಚೆನ್ನಭೈರಾದೇವಿ, ಉಲ್ಲಾಳದ ರಾಣಿ ಅಬ್ಬಕ್ಕದೇವಿ, ಕೊಚ್ಚಿಯ ಕೇರಳವರ್ಮ ಮುಂತಾದವರು ಆಶ್ರಯ ಕೊಟ್ಟಿದ್ದರಿಂದ ಮನೆ ಮಠ ಬಿಟ್ಟು ಬಂದವರಿಗೆ ಒಂದು ನೆಲೆ ಸಿಕ್ಕಿತು. ಆದರೂ ಈ ಜನರು ತಾವು ನೆಲೆಸಿದಲ್ಲೆಲ್ಲ ಕೃಷಿ, ವ್ಯಾಪಾರ ಉದ್ಯೋಗ ಕೈಗೊಂಡು ದೇವಾಲಯಗಳನ್ನು ಸ್ಥಾಪಿಸಿ ತಮ್ಮ ಧರ್ಮ ಹಾಗೂ ಭಾಷೆ ಊರ್ಜಿತಗೊಳಿಸಿದರು. ಅದರಿಂದಾಗಿಯೇ ಇಂದಿಗೂ ಕೊಂಕಣಿ ಭಾಷೆ ಜೀವಂತವಾಗಿದೆ ಎಂದರು.
ಶಿರಸಿಯ ಸೇಂಟ್ ಅಂಥೋನಿ ಚರ್ಚ್ ಗುರು ಫಾ| ಜಾನ್ ಫರ್ನಾಂಡಿಸ್, ಕೊಂಕಣಿ ಒಂದು ಸುಂದರ ಮಧುರ ಭಾಷೆಯಾಗಿದ್ದು ಜನರಿಗೆ ಆಡುವುದಕ್ಕೆ ಮತ್ತು ಕಲಿಯುವುದಕ್ಕೆ ತುಂಬ ಸುಲಭವಾಗಿದೆ. ನಾವು ನಮ್ಮ ಚರ್ಚ್‌ಗಳಲ್ಲಿ ದೇವರಿಗೆ ಅರ್ಪಿಸುವ ಎಲ್ಲ ಸೇವೆಗಳನ್ನು ಕೊಂಕಣಿಯಲ್ಲೇ ಮಾಡುತ್ತೇವೆ. ನಮ್ಮ ದರ್ಮಗ್ರಂಥ ಬೈಬಲ್ ಕೂಡ ಕೊಂಕಣಿಯಲ್ಲಿದೆ. ಆದರೂ ಹಳ್ಳಿಗಳಲ್ಲಿ ನಡೆಯುವ ಇಂಥ ಕಾರ್ಯಕ್ರಮಗಳ ಮೂಲಕ ಎಲ್ಲ ಸಮುದಾಯದ ಜನರಿಗೆ ಮಾತೃಭಾಷೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಅತಿಥಿಗಳಾಗಿ ಬಂದ ಹುಲೇಕಲ್ ಗ್ರಾಪಂ ಮಾಜಿ ಅಧ್ಯಕ್ಷೆ ನಾಗೂಬಾಯಿ ನಾಗೇಶ ಶೇಟ್, ಹುಲೇಕಲ್‌ನ ಸಮನ್ವಯ ಸೇವಾ ಸಮಿತಿ ಅಧ್ಯಕ್ಷ ನರೇಶ ಪೈ, ನಾಟಕಕಾರ ವಾಸುದೇವ ಶಾನಭಾಗ ಕೊಂಕಣಿ, ಸಂಧ್ಯಾ ಕುರ್ಡೆಕರ, ರಾಮಚಂದ್ರ ಪೈ, ನಾಗೇಶ ಅಣ್ವೇಕರ, ರಾಮದಾಸ ಪೈ ಮುಂತಾದವರು ಭಾಗಿಯಾದರು. ಸದಸ್ಯ ಸಂಚಾಲಕ ನಾಗೇಶ ಅಣ್ವೇಕರ ನಿರೂಪಿಸಿದರು.