ಹಳಿಯಾಳ: ಖಾಸಗಿ ಶಾಲೆಗಳಿಗೆ ಆದ್ಯತೆ ನೀಡುವ ಮೂಲಕ ಸರ್ಕಾರ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಖಂಡನೀಯ. ಮತ್ತೆ ಸರ್ಕಾರಿ ಶಾಲೆಗಳನ್ನು ಬಂದ್(ಮುಚ್ಚಲು) ಮಾಡಲು ಹೊರಟರೆ ಜಯ ಕರ್ನಾಟಕ ಸಂಘಟನೆ ರಾಜ್ಯಾದ್ಯಂತ ಊಗ್ರ ಹೋರಾಟ ನಡೆಸಲಿದೆ ಎಂದು ಸಂಘಟನೆ ರಾಜ್ಯಾಧ್ಯಕ್ಷ ಆರ್ ಚಂದ್ರಪ್ಪ ಎಚ್ಚರಿಕೆ ನೀಡಿದರು.
63ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕದ 7ನೇ ವಾರ್ಷಿಕೋತ್ಸವ ಅಂಗವಾಗಿ ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ನಡೆದ ಕನ್ನಡ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಳಿಯಾಳ ಪಟ್ಟಣದಲ್ಲಿ ನಿಂತಿರುವ ದೊಡ್ಡ ಸಂಗೋಳ್ಳಿ ರಾಯಣ್ಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಸ್ಥಾಪನೆ ಮಾಡಲೆಬೇಕೆಂದು ಆಗ್ರಹಿಸಿದರು. ಸಂಘಟನೆಯಲ್ಲಿ 40 ಲಕ್ಷ ಸದಸ್ಯರಿದ್ದು ಸಮಾಜ ಸೇವೆಯೇ ಸಂಘಟನೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಸ್ಥಳೀಯ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುತ್ತಿಲ್ಲ, ರೈತರ ಬಾಕಿ ಹಣ ನೀಡುತ್ತಿಲ್ಲ ಮಾತ್ರವಲ್ಲದೇ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡದೆ ಅನ್ಯಾಯವೆಸಗುತ್ತಿರುವ ಕುರಿತು ಕಿಡಿಕಾರಿದ ಅವರು ಕಂಪೆನಿ ಕೂಡಲೇ ತನ್ನ ವರಸೆ ಬದಲಿಸಿ ರೈತರಿಗೆ ಸಹಕರಿಸದೆ ಇದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಚಂದ್ರಪ್ಪನವರನ್ನು ತೆರೆದ ವಾಹನದಲ್ಲಿ ಬೈಕ್ ರ್ಯಾಲಿಯ ಮೂಲಕ ಸ್ವಾಗತಿಸಲಾಯಿತು.
ಹಳಿಯಾಳದ ಆದಿಶಕ್ತಿಮಠದ ಕೃಷ್ಣಾನಂದ ಭಾರತಿ ಸ್ವಾಮಿಗಳು ಹಾಗೂ ಮಿಲಾಗ್ರಿಸ್ ಚರ್ಚನ ಫಾ|ಜ್ಞಾನಪ್ರಕಾಶರಾವ ಸಾನ್ನಿಧ್ಯ ವಹಿಸಿದ್ದರು. ಹಳಿಯಾಳ ಹಿರಿಯ ಪತ್ರಕರ್ತ ದಿ.ಅರುಣ ಕಾಶೀನಾಥ ನಾಯ್ಕ ಹಾಗೂ ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರಯ್ಯ, ಆನಂದ ರೆಡ್ಡಿ, ತಾಲೂಕಾಧ್ಯಕ್ಷ ವಿಲಾಸ ಕಣಗಲಿ, ಮುಂಡಗೊಡದ ಪಾಂಡುರಂಗ ಪವಾರ, ಯಲ್ಲಾಪುರದ ವಿಲ್ಸನ್ ಫರ್ನಾಂಡಿಸ್, ಪ್ರಮುಖರಾದ ಶಿರಾಜ ಮುನವಳ್ಳಿ, ಸಂಪತ ಬೆಣಚೆಕರ, ಪಾಂಡುರಂಗ, ಮಂಜುನಾಥ ಕಲಕುಂಬಿ, ಅನಿಸ ಪಿರವಾಲೆ, ಗೋಪಿ ಮೇತ್ರಿ, ಕಿರಣ ಕಮ್ಮಾರ, ದತ್ತಾ ಬಾಂದೇಕರ, ಯಲ್ಲಪ್ಪಾ ಮಾಲವನಕರ, ವಿಕ್ರಾಂತ ಶೆಟ್ಟಿ, ಸುಭಾಷ ಕೋಲಕರ, ದುರ್ಗಪ್ಪಾ ಚಲವಾದಿ, ಬಸವರಾಜ ತಳವಾರ, ಮಹೇಶ ಹುಲಕೊಪ್ಪ, ಗಣೇಶ ಗೊಸಪ್ಪನವರ, ಮಹಾದೇವ ಮೊದಲಾದವರು ಇದ್ದರು.