Advertisement

ಬರದನಾಡಿಗೆ ಬಜೆಟ್‌ನಲ್ಲಿ ಅರೆಕಾಸು!

09:36 AM Feb 09, 2019 | Team Udayavani |

ಚಿತ್ರದುರ್ಗ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ 2019-20ನೇ ಸಾಲಿನ ಬಜೆಟ್‌ಗೆ ಸಾರ್ವಜನಿಕರು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಚಿತ್ರದುರ್ಗ: ರಾಜ್ಯ ಸಮ್ಮಿಶ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 2019-20ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಚಿತ್ರದುರ್ಗ ಜಿಲ್ಲೆಗೆ 2.25 ಕೋಟಿ ರೂ. ಕೊಡುಗೆಯಾಗಿ ನೀಡುವ ಮೂಲಕ ಸಂಪೂರ್ಣವಾಗಿ ಮರೆತಿದ್ದಾರೆ.

ಕಳೆದ ಬಜೆಟ್‌ನಲ್ಲಿ ಘೋಷಿಸಲಾದ ಗೃಹೋಪಯೋಗಿ ಎಲ್‌ಇಡಿ ಲೈಟ್ ಉತ್ಪಾದನಾ ಘಟಕ ಸೇರಿದಂತೆ ಭದ್ರಾ ಮೇಲ್ದಂಡೆ, ನೇರ ರೈಲು ಮಾರ್ಗ, ಸರ್ಕಾರಿ ಮೆಡಿಕಲ್‌ ಕಾಲೇಜು ಸೇರಿದಂತೆ ಯಾವುದನ್ನು ನೀಡದೆ ಮುಖ್ಯಮಂತ್ರಿಗಳು ನಿರಾಸೆ ಉಂಟು ಮಾಡಿದ್ದಾರೆ.

ಪ್ರವಾಸೋದ್ಯಮದಲ್ಲಿ ಐತಿಹಾಸ ಕೋಟೆ, ಭಾರತಾಂಬೆ ಭಾವಚಿತ್ರ ಹೋಲುವ ವಾಣಿ ವಿಲಾಸ ಸಾಗರ ಜಲಾಶಯ ಅಭಿವೃದ್ಧಿ ಮಾಡಲು ಸಾಕಷ್ಟು ಅವಕಾಶಗಳಿತ್ತು. ಜಿಲ್ಲೆಯ ಧರ್ಮಪುರ, ಪರಶುರಾಂಪುರ ಮತ್ತು ಭರಮಸಾಗರ ಕೇಂದ್ರಗಳನ್ನು ತಾಲೂಕು ಕೇಂದ್ರ ಘೋಷಿಸುವ ಅವಕಾಶವಿತ್ತು. ಕೋಟೆನಾಡಿನ ಮಟ್ಟಿಗೆ ಯಾವುದೇ ಸಿಹಿ ವಿಚಾರಗಳಿಲ್ಲವೇ ಇಲ್ಲ, ಎಲ್ಲವೂ ಕಹಿಯಾಗಿದೆ.

ಇಡೀ ಬಜೆಟ್‌ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಗೆ ಕೇವಲ 2.25 ಕೋಟಿ ರೂ. ಕೊಡುಗೆ ನೀಡಿದ್ದು ಬಿಟ್ಟರೆ ಏನೊಂದು ನೀಡಿಲ್ಲ. ಆರೋಗ್ಯ ಇಲಾಖೆ ವತಿಯಿಂದ ಡಿಜಿಟಲ್‌ ಸ್ತನರೇಖನ ವ್ಯವಸ್ಥೆಗೆ ಒಂದು ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕರ್ಮಚಾರಿಗಳಿಗೆ ತರಬೇತಿ ನೀಡಲು 1.25 ಕೋಟಿ ರೂ. ವೆಚ್ಚದಲ್ಲಿ ವಿಭಾಗೀಯ ಮಟ್ಟದ ಒಂದು ತರಬೇತಿ ಕೇಂದ್ರ ಹೊರತು ಮತ್ಯಾವುದನ್ನು ನೀಡಿಲ್ಲ.

Advertisement

ಕಳೆದ ಬಜೆಟ್‌ನಲ್ಲಿ ಕುಮಾರಸ್ವಾಮಿ ಗೃಹೋಪಯೋಗಿ ಎಲ್‌ಇಡಿ ಲೈಟ್ ಉತ್ಪಾದನಾ ಘಟಕ ಘೋಷಿಸಿದ್ದರು. ಆ ಯೋಜನೆ ಇಂದಿಗೂ ಎಲ್ಲಿದೆ ಎಂದು ಗೊತ್ತಿಲ್ಲ. ಈಗಾಗಲೇ ಜಿಲ್ಲೆ ಇಡೀ ರಾಷ್ಟ್ರದಲ್ಲೇ ಅತ್ಯಂತ ಹಿಂದುಳಿದ, ಅತಿ ಕಡಿಮೆ ಮಳೆ ಬೀಳುವ ದೇಶದ 16 ಜಿಲ್ಲೆಗಳಲ್ಲಿ ಚಿತ್ರದುರ್ಗ ಜಿಲ್ಲೆಯೂ ಸ್ಥಾನ ಪಡೆದಿದೆ. ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಮಧ್ಯಕರ್ನಾಟಕದ ಬಯಲು ಸೀಮೆ ಜಿಲ್ಲೆಯನ್ನು ಶಾಶ್ವತವಾಗಿ ಬಯಲಾಗಿಸುವ ಹುನ್ನಾರ ಮಾಡುತ್ತಿವೆ.

ಸರ್ಕಾರಿ ಚಿತ್ರದುರ್ಗ ಮೆಡಿಕಲ್‌ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಆರಂಭಿಸುವಂತೆ ಸಾರ್ವಜನಿಕರು, ಹೋರಾಟಗಾರರು ಸರ್ಕಾರದ ಮೇಲೆ ಸಾಕಷ್ಟು ಒತ್ತಡ ತಂದಿದ್ದರೂ ಅನುದಾನ ಮೀಸಲಿಟ್ಟಿಲ್ಲ. ಕಳೆದ ಎರಡು ವರ್ಷಗಳಿಂದೆ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಮೆಡಿಕಲ್‌ ಕಾಲೇಜು ಘೋಷಿಸಿದ್ದು, ಬಿಟ್ಟರೆ ಏನು ಆಗಿಲ್ಲ.

ಭದ್ರಾ ಮೇಲ್ದಂಡೆ ಯೋಜನೆಗೆ ಕನಿಷ್ಠ 5 ಸಾವಿರ ಕೋಟಿ ರೂ.ಮೀಸಲಿಡುವಂತೆ ಬಿಜೆಪಿ ಬೃಹತ್‌ ಪ್ರತಿಭಟನೆ ಮಾಡಿತ್ತು. ಅದಕ್ಕೂ ಮುಖ್ಯಮಂತ್ರಿಗಳು ಕ್ಯಾರೇ ಎಂದಿಲ್ಲ. ಧರ್ಮಪುರ, ಪರಶುರಾಂಪುರ ಹೋಬಳಿಗಳನ್ನು ತಾಲೂಕು ಕೇಂದ್ರ ಮಾಡುವಂತೆ ಸಾರ್ವಜನಿಕರು ದೊಡ್ಡ ಮಟ್ಟದ ಹೋರಾಟ ಮಾಡಿದ್ದರೂ ಮುಖ್ಯಮಂತ್ರಿಗಳ ಕಿವಿಗೆ ಬಿದ್ದಿಲ್ಲ. ಒಟ್ಟಾರೆ ಚಿತ್ರದುರ್ಗ ಜಿಲ್ಲೆ ಯಾರಿಗೂ ಬೇಡವಾದ ಕೂಸಾಗಿದೆ.

ಜನರು ಏನಂತಾರೆ?
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಹಲವಾರು ಸೌಲಭ್ಯ ನೀಡಿರುವುದು ಸ್ವಾಗತಾರ್ಹ. ಆದರೆ, ರಾಜ್ಯದ ಲಕ್ಷಾಂತರ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವ ಯಾವುದೇ ಕೈಗಾರಿಕಾ ಸ್ಥಾಪನೆ ಬಗ್ಗೆ ಪ್ರಸ್ತಾಪನೆ ಇಲ್ಲ. ಇದೊಂದು ನಿರಾಸವಾದ ಬಜೆಟ್.
•ಬಿ.ಎಸ್‌. ಅನುಸೂಯಮ್ಮ, ತ್ಯಾಗರಾಜ ನಗರ, ಚಳ್ಳಕೆರೆ.

ಈ ಬಾರಿ ಬಜೆಟ್‌ನಲ್ಲಿ ಬರಪೀಡಿತ ಚಿತ್ರದುರ್ಗ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಬೇಕಿತ್ತು. ಚಳ್ಳಕೆರೆಯ ಪರಶುರಾಂಪುರ, ಹಿರಿಯೂರಿನ ಧರ್ಮಪುರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಿ ಅಭಿವೃದ್ಧಿಗೆ ನೀಡಬೇಕಿತ್ತು. ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಬಜೆಟ್ ಇದಾಗಿದೆ.
•ಬಿ.ಎಂ. ಭಾಗ್ಯಮ್ಮ, ಗೃಹಿಣಿ, ಚಳ್ಳಕೆರೆ.

ರಾಜ್ಯದ ಮುಖ್ಯಮಂತ್ರಿ, ವಿತ್ತ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯಕ್ಕೆ ಉತ್ತಮ ಬಜೆಟ್ ನೀಡಿದ್ದಾರೆಂದು ಭಾವಿಸಬೇಕಾದ ಅವಶ್ಯಕತೆ ಇಲ್ಲ. ಕಾರಣ ಕಳೆದ ಹಲವಾರು ದಶಕಗಳಿಂದ ಬರದ ನಾಡು ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಬೇಕಾದ ಅನುದಾನ ಬಜೆಟ್‌ನಲ್ಲಿ ಬಿಡುಗಡೆ ಮಾಡಿಲ್ಲ. ಇದು ಕೇವಲ ಪ್ರಚಾರ ಪಡೆಯಲು ರೂಪಿಸಿದ ಬಜೆಟ್ ಆಗಿದೆ.
•ಆರ್‌. ನಾಗೇಶ್‌, ವಾಲ್ಮೀಕಿ ಸಮುದಾಯದ ಯುವ ಮುಖಂಡ.

ಚಿತ್ರದುರ್ಗ ಜಿಲ್ಲೆ ಬರಗಾಲ ಪೀಡಿತ ಪ್ರದೇಶವಾಗಿದ್ದು, ಈ ಭಾಗದ ಎಲ್ಲ ರೈತರ ಸಾಲ ಮನ್ನಾ ಮಾಡುವುದಲ್ಲದೆ ವಿಶೇಷ ಪ್ಯಾಕೇಜನ್ನು ರೂಪಿಸಿ ಜಿಲ್ಲೆಯ ರೈತರಿಗೆ ಹೆಚ್ಚು ಅನುಕೂಲ ಮಾಡುತ್ತಾರೆಂಬ ಭಾವನೆ ಇತ್ತು. ಆದರೆ, ಮುಖ್ಯಮಂತ್ರಿಗಳು ಜಿಲ್ಲೆಯ ಜನರನ್ನು ನಿರಾಸೆಗೊಳಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಕನಸಾಗಿಯೇ ಉಳಿಯಲಿದೆ.
•ಕೆ.ಪಿ. ಭೂತಯ್ಯ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಿರಿಯ ಉಪಾಧ್ಯಕ್ಷ.

ರಾಜ್ಯದಲ್ಲಿ ಒಂದು ಸಾವಿರ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಪೂರ್ವ ಪ್ರಾಥಮಿಕ ಶಾಲೆಯಿಂದ 12ನೇ ತರಗತಿಯವರೆಗೆ ತೆರೆಯುತ್ತಿರುವುದು ಶೈಕ್ಷಣಿಕ ಕ್ರಾಂತಿಗೆ ನಾಂದಿಯಾಗಲಿದೆ. ಪರಶುರಾಂಪುರಕ್ಕೆ ತಾಲೂಕು ಕೇಂದ್ರ ಘೋಷಣೆ ಮಾಡದಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಮೆಡಿಕಲ್‌ ಕಾಲೇಜು ನೀಡದಿರುವುದು ಖಂಡನೀಯ. ಸಿರಿಧಾನ್ಯ ಬೆಳೆಯುವ ರೈತರಿಗೆ ಒಂದು ಹೆಕ್ಟೇರ್‌ಗೆ 10 ಸಾವಿರ ರೂ. ಕೊಡುಗೆ, ಸಿ ಮತ್ತು ಡಿ ಸರ್ಕಾರಿ ನೌಕರರ ವರ್ಗಾವಣೆಗೆ ಕೌನ್ಸೆಲಿಂಗ್‌ ವ್ಯವಸ್ಥೆ ಜಾರಿ ಅತ್ಯುತ್ತಮವಾಗಿದೆ.
•ಜೆ.ಯಾದವರೆಡ್ಡಿ, ಚಿಂತಕ, ನಿವೃತ್ತ ಪ್ರಾಂಶುಪಾಲರು.

ಸಿಎಂ ಎಚ್.ಡಿ. ಕುಮಾರಸ್ವಾಮಿ ಮಂಡಿಸಿರುವ ಆಯವ್ಯಯ ರೈತ ಪರವಾಗಿದೆ. ಸಾವಯವ ಕೃಷಿ ಯೋಜನೆಗೆ 35 ಕೋಟಿ ರೂ., ರೈತ ಸಿರಿಧಾನ್ಯ ಯೋಜನೆಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ., ಕೃಷಿ ಭಾಗ್ಯ ಯೋಜನೆಗೆ 250 ಕೋಟಿ ರೂ., ಸಿರಿಧಾನ್ಯಗಳ ಉತ್ತೇಜನಕ್ಕೆ ರೈತ ಸಿರಿ ಯೋಜನೆಗೆ 10 ಕೋಟಿ ರೂ. ನೀಡಿರುವುದು, ರೈತರ ಸಾಲ ಮನ್ನಾಗೆ 46 ಸಾವಿರ ಕೋಟಿ ರೂ., ಶೂನ್ಯ ಬಂಡವಾಳ ಇಸ್ರೇಲ್‌ ಮಾದರಿ ಕೃಷಿ ಯೋಜನೆ ಸಂಪೂರ್ಣ ರೈತ ಪರವಾದ ಬಜೆಟ್ ಆಗಿದೆ.
•ಸೋಮಗುದ್ದು ಕೆ.ರಂಗಸ್ವಾಮಿ.ರಾಜ್ಯಾಧ್ಯಕ್ಷರು, ಅಖಂಡ ಕರ್ನಾಟಕ ರೈತ ಸಂಘ.

ಜಿಲ್ಲೆಯ ಮಟ್ಟಿಗೆ ನಿರಾಶದಾಯಕ ಬಜೆಟ್. ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ತಾಲೂಕು ಕೇಂದ್ರಗಳ ಘೋಷಣೆ ಮಾಡಿಲ್ಲ. ತೆಂಗು, ಅಡಿಕೆ ಸೇರಿದಂತೆ ಮತ್ತಿತರ ಬೆಳೆಗಳ ಹಾನಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಮೀಸಲಿಲ್ಲ, ವಿವಿ ಸಾಗರಕ್ಕೆ ನೀರು ಹರಿಸುವ ಕುರಿತು ಏನೂ ಹೇಳಿಲ್ಲ. ರೈತರ ಸಾಲ ಪರಿಹಾರ ಆಯೋಗ ರಚನೆ ತೀರ್ಮಾನ ಉತ್ತಮವಾಗಿದೆ. ವಿವಿಧ ರೈತ ಯೋಜನೆಗಳು ರೈತರಿಗೆ ಒಂದಿಷ್ಟು ಶಕ್ತಿ ನೀಡಲಿವೆ.
•ಎಚ್.ಆರ್‌.ತಿಮ್ಮಯ್ಯ, ಅಧ್ಯಕ್ಷರು, ಹಿರಿಯೂರು ತಾಲೂಕು ಕೃಷಿಕ ಸಮಾಜ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೌರವಧನ ಹೆಚ್ಚಿಸಿರುವ ಕುಮಾರಸ್ವಾಮಿ ಶುಕ್ರವಾರ ಮಂಡಿಸಿರುವ ಬಜೆಟ್ ಬಿಸಿಯೂಟ ಕಾರ್ಯಕರ್ತೆಯರಿಗೆ ಪ್ರಯೋಜನವಿಲ್ಲ. ಕಡಿಮೆ ವೇತನಕ್ಕಾಗಿ ರಾಜ್ಯಾದ್ಯಂತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುತ್ತಿರುವ ಬಿಸಿಯೂಟ ತಯಾರಕರನ್ನು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಕಡೆಗಣಿಸಿದ್ದಾರೆ. ಈ ಲೋಪ ಸರಿಪಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ.
•ಕಾಂ.ಜಿ.ಸಿ.ಸುರೇಶ್‌ಬಾಬು, ಎ.ಐ.ಟಿ.ಯು.ಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ.

ಕುಮಾರಸ್ವಾಮಿ ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು ರೈತ ಪರ ಬಜೆಟ್ ಮಂಡಿಸಿದ್ದಾರೆ. ಇಸ್ರೇಲ್‌ ಮಾದರಿ ಕಿರು ನೀರಾವರಿ ಯೋಜನೆಗಳಿಗೆ 472 ಕೋಟಿ ರೂ., ಕೃಷಿ ಮತ್ತು ಕೃಷಿ ಸಂಬಂಧಿತ ಯೋಜನೆಗಳಿಗೆ 46.850 ಕೋಟಿ ರೂ., ದಾಳಿಂಬೆ ದ್ರಾಕ್ಷಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌, ಮಾತೃಶ್ರೀ ಯೋಜನೆಗೆ ಸಹಾಯಧನ ಹೆಚ್ಚಳ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಗೌರವ ಧನ ಹೆಚ್ಚಳ, ಲಿಂಗ್ಯಕ್ಯ ಡಾ| ಶಿವಕುಮಾರ ಮಹಾಸ್ವಾಮಿಗಳ ಹುಟ್ಟೂರು ವೀರಾಪುರಕ್ಕೆ ವಿಶೇಷ ಅನುದಾನ ನೀಡಿರುವುದು ತೃಪ್ತಿದಾಯಕವಾಗಿದ್ದು, ಇದೊಂದು ಜನಪರ ಬಜೆಟ್ ಆಗಿದೆ.
•ಮೋಕ್ಷಾ ರುದ್ರಸ್ವಾಮಿ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯೆ.

2019ನೇ ಸಾಲಿನ ಬಜೆಟ್ ರೈತರ ಹಿತ ಕಾಯುವ ದೃಷ್ಟಿಯಲ್ಲಿ ಸಮಗ್ರವಾಗಿ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯ ಉತ್ತಮವಾಗಿದೆ. ಜಿಲ್ಲೆಯ ಜೀವನಾಡಿಯಾಗಿ ಪ್ರತಿಬಿಂಬವಾಗಿ ರೂಪುಗೊಳ್ಳುವ ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಗತಿಯಲ್ಲಿ ಪೂರ್ಣಗೊಳ್ಳುವ ಬಗ್ಗೆ ಕ್ರಮ ಕೈಗೊಂಡಿರುವುದು ಉತ್ತಮ. ಗ್ರಾಮೀಣ ಸಂತೆಗಳ ಆರಂಭವಾದರೆ ಇದರಿಂದ ರೈತ ಬೆಳೆದ ಬೆಳೆಗಳ ಮಾರಾಟ ಸುಲಭವಾಗಲಿದೆ.
•ಮಂಜುನಾಥ ರೆಡ್ಡಿ, ಯುವ ರೈತ, ತುರುವನೂರು.

ರಾಜ್ಯ ಸರ್ಕಾರದ ಅತಂತ್ರ ಸ್ಥಿತಿಯಲ್ಲಿ ಮಂಡನೆಯಾದ ಕುಮಾರಸ್ವಾಮಿಯವರ ಬಜೆಟ್ ಅತಂತ್ರವೇ ಆಗಿದೆ. ಸಿದ್ದರಾಮಯ್ಯನವರು ಜನರಿಗೆ ಕೊಟ್ಟಿದ್ದ ಅನೇಕ ಭಾಗ್ಯಗಳಿಗೆ ಕತ್ತರಿಹಾಕಿ, ಮಠಗಳಿಗೆ ಮಾತ್ರ ಉದಾರತೆ ತೋರಿರುವುದು ಇನ್ನಷ್ಟು ಮಠಗಳು ಹುಟ್ಟುವುದಕ್ಕೆ ಅಡಿಪಾಯ ಹಾಕಿದಂತಾಗಿದೆ. ಈ ಬಜೆಟ್ ನಿರಾಶಾದಾಯಕವಾಗಿದೆ.
•ರವಿ ಕೆ.ಅಂಬೇಕರ್‌, ಯೋಗಾಚಾರ್ಯ, ಪತಂಜಲಿ ಯೋಗ ಪೀಠ.

ಯುವ ಸಮೂಹವನ್ನು ಆಕರ್ಷಿಸುವ ಬಜೆಟ್ ನೀಡಿಲ್ಲ. ರಾಜ್ಯದ ಯುವಕರಿಗೆ ಉದ್ಯೋಗ ಕಲ್ಪಿಸುವ ಯೋಜನೆಗೆ ಒತ್ತು ನೀಡಲ್ಲ. ಮುಖ್ಯಮಂತ್ರಿಗಳು ಚಿತ್ರದುರ್ಗ ಜಿಲ್ಲೆಗೆ ಶೂನ್ಯ ಕೊಡುಗೆ ನೀಡಿದ್ದು ಬೇಸರ ತಂದಿದೆ. ಒಂದೆರಡು ಬೃಹತ್‌ ಉದ್ಯಮಕ್ಕೆ ಒತ್ತು ನೀಡಿದ್ದರೆ ಸ್ವಲ್ಪ ದುಡಿಯುವ ಕೈಗಳಿಗೆ ಕೆಲಸ ಸಿಗುತ್ತಿತ್ತು.
•ಪಿ.ಕೆ. ಅಜಯ್‌ ಇಂಗಳದಾಳ್‌.

ರಾಜ್ಯ ಸರ್ಕಾರ ಸಾಲ ಮನ್ನಾ ಪ್ರಕ್ರಿಯೆ ಪೂರ್ಣಗೊಳಿಸಿ ರೈತರಿಗೆ ತುರ್ತು ಋಣಮುಕ್ತ ಪತ್ರ ನೀಡಲಿ. ಚಿತ್ರದುರ್ಗಕ್ಕೆ ಯಾವುದೇ ಹೊಸ ಯೋಜನೆ ನೀಡಿಲ್ಲ. ಜಿಲ್ಲೆಯ ನೀರಾವರಿಗೆ ಒತ್ತು ನೀಡುವ ಭಾವನೆ ಇದ್ದು ಹುಸಿಯಾಗಿದೆ.
•ಆರ್‌. ಪಾಲಯ್ಯ, ಸಾರ್ವಜನಿಕ.

ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಗಳಿಗೆ ಅನುದಾನ ನೀಡಿಲ್ಲ. ಇದೊಂದು ಜಾತಿ ಓಲೈಕೆಯ ಬಜೆಟ್ ಆಗಿದೆ. ಚಿತ್ರದುರ್ಗ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಒಟ್ಟಾರೆ ಜನಪರ ಅಲ್ಲದ ಇದೊಂದು ನೀರಸ ಬಜೆಟ್.
•ಪ್ರಭಾಕರ ಮ್ಯಾಸನಾಯಕ, ಮಾಜಿ ನಿರ್ದೇಶಕ, ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮ.

ಮುಖ್ಯಮಂತ್ರಿಗಳ ಮಂಡಿಸಿದ ರಾಜ್ಯ ಬಜೆಟ್ ರೈತರ ಪರ ಕಾಳಜಿ ಹೊಂದಿದೆ. ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂ. ನೀಡುವ ಯೋಜನೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸುವಂತಿದೆ. ರಾಜ್ಯದ ವಿವಿಧ ವರ್ಗದ ಜನರಿಗೆ ಘೋಷಿಸಿರುವ ಯೋಜನೆಗಳು ಹಾಗೂ ಕರೆ ತುಂಬಿಸುವ ಕಾರ್ಯಕ್ಕೆ ಒದಗಿಸಿರುವ ಅನುದಾನಗಳು ಸ್ವಾಗತಾರ್ಹ. ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಯೋಜನೆ ನೀಡಿಲ್ಲದಿರುವುದು, ಎನ್‌ಪಿಎಸ್‌ ರದ್ದತಿ ಬಗ್ಗೆ ಯಾವುದೇ ಪ್ರಸ್ತಾಪ ಮಾಡದಿರುವುದು ನೌಕರ ವರ್ಗದವರಲ್ಲಿ ನಿರಾಸೆ ಮೂಡಿಸಿದೆ.
•ಡಾ| ಆರ್‌.ಗಂಗಾಧರ, ಸಹಾಯಕ ಪ್ರಾಧ್ಯಾಪಕರು, ಅರ್ಥಶಾಸ್ತ್ರ.

ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವ ಆಯವ್ಯಯದಲ್ಲಿ ಕೃಷಿ ಯೋಜನೆಗೆ ಒತ್ತು ನೀಡಲಾಗಿದೆ. ಅಂತರ್ಜಲ ಹೆಚ್ಚಳಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದೊಂದು ರೈತ ಪರವಾದ ಬಜೆಟ್.
•ವೆಂಕಟೇಶ್‌ ಎಸ್‌.ವ್ಯಾಪಾರಸ್ಥ, ಚಳ್ಳಕೆರೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡಿಸಿದ ಬಜೆಟ್‌ನಲ್ಲಿ ಚಿತ್ರದುರ್ಗ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಮಲತಾಯಿ ಧೋರಣೆ ಅನುಸರಿಸಿದ್ದಾರೆ. ಕೆಲವೊಂದು ಜಿಲ್ಲೆ 200 ರಿಂದ 300 ಕೋಟಿ ರೂ. ನೀಡಲಾಗಿದೆ. ಆದರೆ, ಚಿತ್ರದುರ್ಗ ಜಿಲ್ಲೆಯನ್ನು ನಿರ್ಲಕ್ಷಿಸಲಾಗಿದೆ. ಮೆಡಿಕಲ್‌ ಕಾಲೇಜು, ರೈಲು ಸಂಪರ್ಕ, ಆಸ್ಪತ್ರೆಗಳ ಉನ್ನತೀಕರಣ, ಸದಾ ಬರಗಾಲದಿಂದ ತತ್ತ ರಿಸುತ್ತಿರುವ ರತರಿಗೆ ನೀರಿನ ಸೌಲಭ್ಯ ವಿಶೇಷ ಯೋಜನೆಗಳು ಇಲ್ಲದೆ ನಿರಾಶಾದಾಯಕ ಬಜೆಟ್ ಆಗಿದೆ .
•ಕೆ.ಸಿ. ಹೊರಕೇರಪ್ಪ, ಹಿರಿಯೂರು ತಾಲೂಕು ರೈತ ಸಂಘದ ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next