Advertisement

ಆರೇ ತಿಂಗಳಲ್ಲಿ ಅರ್ಧ ಲಕ್ಷ ಕೋಳಿಗಳಿಗೆ “ಲಸಿಕೆ’

02:44 PM Jan 25, 2022 | Team Udayavani |

ಸಿಂಧನೂರು: ಪಶುಪಾಲನಾ ಇಲಾಖೆ ಕಚೇರಿಗೆ ಜಾನುವಾರುಗಳನ್ನು ಹೊಡೆದುಕೊಂಡು ಹೋಗುವವರ ಸಂಖ್ಯೆಯೇ ಕಡಿಮೆಯಾಗಿದೆ. ಆದರೂ, ಪಶುಸಂಗೋಪನಾ ಇಲಾಖೆ ಮಾತ್ರ ಶೇ.126ರಷ್ಟು ಗುರಿ ಮೀರಿ ಸಾಧನೆ ತೋರಿ ಸಾರ್ವಜನಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ.

Advertisement

ಅಭಿವೃದ್ಧಿ ಕಾಮಗಾರಿಗಳ ಬದಲಾಗಿ ಪಶುಸಂಗೋಪನಾ ಇಲಾಖೆ ಕಾರ್ಯಕ್ರಮಗಳ ಪಟ್ಟಿಯಲ್ಲಿ ತಾಲೂಕಿನಲ್ಲೇ ನಂ.1 ಪಟ್ಟ ಈ ಇಲಾಖೆಗೆ ಸಂದಿದೆ. ಕಳೆದ ಆರ್ಥಿಕ ವರ್ಷ ಮಾರ್ಚ್‌ನಿಂದ ಡಿಸೆಂಬರ್‌ ಅಂತ್ಯಕ್ಕೆ ಪಶುಸಂಗೋಪನಾ ಇಲಾಖೆ ಮಾತ್ರ ಗುರಿ ಮೀರಿ ಸಾಧನೆ ಮಾಡಿದೆ.

ತಾಲೂಕಿನಲ್ಲಿ 25ಕ್ಕೂ ಹೆಚ್ಚು ಇಲಾಖೆಗಳು ಮಾತ್ರ ಶೇ.50ರಷ್ಟು ಗುರಿ ತಲುಪಲಿಕ್ಕೂ ಸಾಧ್ಯವಾಗಿಲ್ಲ. ಡಿಸೆಂಬರ್‌ ಅಂತ್ಯದ ವರದಿ ಕಂಡು ಜನಪ್ರತಿನಿಧಿಗಳು ಚಾಟಿ ಬೀಸಿದ್ದು, ಮುಂದಿನ ಮಾರ್ಚ್‌ನೊಳಗೆ ಟಾರ್ಗೆಟ್‌ ಮುಗಿಸಲು ಗಡುವು ನೀಡಿದ್ದಾರೆ.

50 ಸಾವಿರಕ್ಕೂ ಹೆಚ್ಚು ಕೋಳಿಗಳಿಗೆ ಲಸಿಕೆ

ಕಳೆದ ನಾಲ್ಕೈದು ತಿಂಗಳಲ್ಲಿ ತಾಲೂಕಿನಲ್ಲಿ 50,676 ಕೋಳಿಗಳಿಗೆ ಕೊಕ್ಕರೆ ರೋಗ ನಿಯಂತ್ರಿಸಲು ಲಸಿಕೆ ಹಾಕಲಾಗಿದೆ ಎಂದು ಇಲಾಖೆ ಪ್ರಗತಿ ತೋರಿಸಿದೆ. 4,223 ಕೋಳಿಗಳಿಗೆ ಮಾತ್ರ ರಾಜ್ಯ ಸರ್ಕಾರ ಲಸಿಕೆ ಹಾಕಲು ಗುರಿ ನಿಗದಿಪಡಿಸಿತ್ತು. ಅಧಿಕಾರಿಗಳು ಕೋಳಿಗಳನ್ನು ಹುಡುಕಿಕೊಂಡು ಹೋಗಿ ಲಸಿಕೆ ಹಾಕಿದ್ದಾರೆ. ಆದರೆ, ಎಲ್ಲೆಲ್ಲಿ ಕೋಳಿಗಳಿಗೆ ಲಸಿಕೆ ಹಾಕಲಾಗಿದೆ. ಯಾರ ಮಾಲೀಕತ್ವ ಇತ್ತು ಎಂಬ ವಿವರವನ್ನು ಮಾತ್ರ ಬಿಟ್ಟು ಕೊಟ್ಟಿಲ್ಲ. ಕೇಳುವ ಪ್ರಯತ್ನಕ್ಕೂ ಕೂಡ ಅಧಿ ಕಾರಿಗಳು ಹಾಗೂ ಜನಪ್ರತಿನಿ ಧಿಗಳು ಮುಂದಾಗಿಲ್ಲ. ಪರಿಣಾಮ ಪಶುಸಂಗೋಪನಾ ಇಲಾಖೆ ಮಾತ್ರ ಪ್ರಗತಿಯಲ್ಲಿ ಶೇ.126 ಅಂಕ ಗಳಿಸಿ ಇತರ ಇಲಾಖೆಗಳಿಗೆ ಸೆಡ್ಡು ಹೊಡೆದಿದೆ.

Advertisement

ಕಾರ್ಯಕ್ರಮ ನಗಣ್ಯ

ಪಶುಭಾಗ್ಯ ಯೋಜನೆ ಹೊರತುಪಡಿಸಿ ಯಾವುದೇ ಯೋಜನೆಗಳನ್ನು ಈ ಇಲಾಖೆ ಅನುಷ್ಠಾನಗೊಳಿಸಿಲ್ಲ. ಕಾಲುಬಾಯಿ ರೋಗಕ್ಕೆ ಲಸಿಕೆ ಹಾಕಲು ತಿಳಿಸಿದರೆ, ಶೇ.49ರಷ್ಟು ಮಾತ್ರ ಸಾಧನೆ ಮಾಡಿದೆ. ಜಾನುವಾರುಗಳು 3 ಲಕ್ಷಕ್ಕೂ ಹೆಚ್ಚಿದ್ದರೂ ಅವುಗಳನ್ನು ಕಣ್ಣೆತ್ತಿಯೂ ನೋಡಿಲ್ಲ. ವಿಶೇಷ ಘಟಕ ಯೋಜನೆಯಡಿ ಒಬ್ಬ ರೈತನಿಗೆ ಮಾತ್ರ ಹಾಲು ಕರೆಯುವ ಯಂತ್ರವನ್ನು ವಿತರಿಸಲಾಗಿದೆ. ಇನ್ನುಳಿದಂತೆ ಯಾವುದೇ ಕಾರ್ಯಕ್ರಮ ಅನುಷ್ಠಾನಗೊಳಿಸಿಲ್ಲ. ತುರ್ತು ಚಿಕಿತ್ಸೆ, ಜಾನುವಾರುಗಳು ಆಸ್ಪತ್ರೆಗೆ ದಾಖಲಾದ ಪ್ರಮಾಣ, ಅವುಗಳಿಗೆ ನೀಡಿದ ಚಿಕಿತ್ಸೆಯ ವಿವರ ಸೇರಿದಂತೆ ಯಾವುದನ್ನೂ ಕೂಡ ಈ ಇಲಾಖೆ ಹೇಳಿಕೊಳ್ಳುತ್ತಿಲ್ಲ.

ಕೋಳಿ ಬೆನ್ನತ್ತಿ ದುಪ್ಪಟ್ಟು ಸಾಧನೆ

ಸ್ವಾರಸ್ಯ ಎಂದರೆ, ಸರ್ಕಾರ ನೀಡುವ ಗುರಿಯನ್ನು ಮೀರುವುದು ಕಣ್ಣಿಗೆ ಬೀಳದ ಪ್ರಗತಿಯಲ್ಲಿ ಎಂಬುದಕ್ಕೆ ಕೋಳಿ ಕತೆ ನಿದರ್ಶನವಾಗಿದೆ. ರಾಜ್ಯ ಸರ್ಕಾರ ಕೊಕ್ಕರೆ ರೋಗಕ್ಕೆ ಸಂಬಂಧಿಸಿ ಮಾಸಿಕ 4,223 ಕೋಳಿಗಳಿಗೆ ಲಸಿಕೆ ಹಾಕಲು ತಾಲೂಕಿಗೆ ಗುರಿ ನಿಗದಿಪಡಿಸಿತ್ತು. ಆದರೆ, ಇವರು ದುಪಟ್ಟು ಕೋಳಿಗಳನ್ನು ಹುಡುಕಿ ಲಸಿಕೆ ಕೊಟ್ಟಿದ್ದಾರೆ. ಕೆಲವೇ ದಿನಗಳಲ್ಲಿ 46,161 ಕೋಳಿಗಳನ್ನು ಪತ್ತೆ ಹಚ್ಚಿ, ಅವುಗಳಿಗೆ ಸಿಬ್ಬಂದಿ ಲಸಿಕೆ ಹಾಕಿ ಬಂದಿದ್ದಾರೆ. ಮಿತಿ ಮೀರಿ ಲಸಿಕೆ ಪೂರೈಸಿದ ಇಲಾಖೆಯೂ ಕೂಡ ಲೆಕ್ಕ ನೀಡಬೇಕಿದೆ.

ಯಾವ ರೈತರು ಸಾಕಣೆ ಮಾಡಿದ ಕೋಳಿಗಳಿಗೆ ಲಸಿಕೆ ಹಾಕಿದ್ದಾರೆಂಬ ಮಾಹಿತಿಯನ್ನು ಮೊದಲು ಪಶುಸಂಗೋಪನಾ ಇಲಾಖೆಯವರು ಬಿಡುಗಡೆ ಮಾಡಬೇಕು. ಬರೀ ಅಂಕಿ-ಸಂಖ್ಯೆ ಕೊಟ್ಟರೆ ಇದೊಂದು ರೈತ ವಿರೋಧಿ ಇಲಾಖೆಯಾಗುತ್ತದೆ. -ಎಚ್‌.ಎನ್‌. ಬಡಿಗೇರ, ಪ್ರಗತಿಪರ ಸಂಘಟನೆ ಮುಖಂಡ, ಸಿಂಧನೂರು

ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next