Advertisement

Haleyangadi: ಹಳೆಯಂಗಡಿ- ಒಂದು ಚರಂಡಿಯ ದುರಂತ ಕಥೆ…

06:00 PM Dec 01, 2023 | Team Udayavani |

ಹಳೆಯಂಗಡಿ: ಇಲ್ಲಿನ ಹಳೆಯಂಗಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಇಂದಿರಾನಗರದ ಜನವಸತಿ ಪ್ರದೇಶದ ಚರಂಡಿಯಲ್ಲಿ ಹೂಳು ತುಂಬಿ ರಸ್ತೆಯ ಮೇಲೆ ಕೊಳಚೆ ನೀರು ಹರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ದುರಸ್ತಿ ಅಥವಾ ತೆರವು ಮಾಡುವ ಬಗ್ಗೆ ಗ್ರಾಮ ಪಂಚಾಯತ್‌ ತಯಾರಿದ್ದರೂ ಬಿಲ್ಲು ಪಾವತಿಯ ವಿವಾದದಿಂದ ಸಾಧ್ಯವಾಗಿಲ್ಲ.

Advertisement

ಗಬ್ಬೆದ್ದು ನಾರುತ್ತಿದೆ
ಇಂದಿರಾನಗರದ ಉದ್ಯಾನವನದ ಸುತ್ತಲೂ ಮೇಲ್ಭಾಗದ ಜನವಸತಿ ಪ್ರದೇಶದ ಮನೆಗಳಲ್ಲಿನ ಕೊಳಚೆ ನೀರು ನೇರವಾಗಿ ಹರಿಯುವ ಚರಂಡಿ ತುಂಬಿದ ಅನಂತರ ರಸ್ತೆಯ ಮೇಲೆ ಹರಿದಾಡಿ ವಾಹನಗಳ ಸಂಚಾರಕ್ಕೆ, ಪಾದಚಾರಿಗಳಿಗೆ ನಡೆದಾಡಲು ತೆರಳಲು ಆಗಿದೆ. ಜತೆಗೆ ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುವ ವಾತಾವರಣ ನಿರ್ಮಾಣವಾಗಿದೆ. ಆರೋಗ್ಯ ಇಲಾಖೆಯೂ ಈ ಬಗ್ಗೆ ಮೌನವಹಿಸಿದೆ ಹಾಗೂ ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಿದ್ದರೂ ಬಿಲ್‌ ಪಾವತಿ ವಿವಾದದ ಕಾರಣ ನೀಡುತ್ತಾರೆ ಎಂಬುವುದು ಗ್ರಾಮಸ್ಥರ ಆರೋಪ.

ಬಿಲ್ಲು ಪಾವತಿಯ ವಿವಾದ
ಉದಯವಾಣಿ ಸುದಿನವು ಈ ಬಗ್ಗೆ ಗ್ರಾಮ ಪಂಚಾಯತ್‌ನಲ್ಲಿ ಮಾಹಿತಿ ಕಲೆ ಹಾಕಿದಾಗ ಈ ಚರಂಡಿಯ ದುರಸ್ತಿ ಸಹಿತ ಶಾಶ್ವತ ಪರಿಹಾರಕ್ಕಾಗಿ 1.5 ಲಕ್ಷ ರೂ. ಮೀಸಲಿರಿಸಲಾಗಿದೆ. ಆದರೆ ಇದೇ ವಾರ್ಡ್‌ನಲ್ಲಿ ಗ್ರಾಮ ಪಂಚಾಯತ್‌ನ ಮೂಲಕ ಈ ಹಿಂದೆ
ಕಾಮಗಾರಿಯೊಂದನ್ನು ನಡೆಸಲಾಗಿತ್ತು ಇದರ ಬಿಲ್ಲನ್ನು ಗುತ್ತಿಗೆದಾರರಿಗೆ ಪಾವತಿಸದ ಕಾರಣ ಇಂದಿರಾ ನಗರದ ವಾರ್ಡ್‌ ನ ಗ್ರಾಮ ಪಂಚಾ ಯತ್‌ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದ್ದರಿಂದ ಪಂಚಾಯತ್‌ ನ ಸಾಮಾನ್ಯ ಸಭೆಯಲ್ಲಿ ವಾದ- ವಿವಾದದಿಂದ ಮಂಜೂರಾದ  ಯೋಜನೆಯನ್ನು ಆಡಳಿತ ಮಂಡಳಿ ಜಾರಿ ಮಾಡಲು ಈ ಹಿಂದಿನ ಬಿಲ್ಲನ್ನು ಪಾವತಿಸಲು ಸಹಕಾರ ನೀಡಬೇಕು ಎಂದು ಹೇಳಿದೆ. ಆದರೆ ಹಿಂದಿನ ಬಿಲ್ಲನ್ನು ಪಾವತಿಸಲು ವಿರೋಧ ಪಕ್ಷದ ಸದಸ್ಯರಿಂದ ಆಕ್ಷೇಪ ವ್ಯಕ್ತವಾಗಿದೆ. ಹಿಂದಿನ ಬಿಲ್‌ ಪಾವತಿಯಾಗದ ಕಾರಣ ಯಾವುದೇ ಗುತ್ತಿ ಗೆದಾರರು ಕಾಮಗಾರಿ ಕೈಗೊಳ್ಳಲು ಮುಂದೆ ಬರುತ್ತಿಲ್ಲ.

ಹಳೆ ಬಿಲ್ಲಿಗೆ ತಾಂತ್ರಿಕ ಅಡಚಣೆ
ನಡೆಸಿದ ಕಾಮಗಾರಿಯ ಮುಂದುವರಿದ ಕೆಲಸ ಎಂದು ಬಿಲ್ಲು ಮಾಡುವಾಗ ಅದರ ತಾಂತ್ರಿಕಾಂಶವನ್ನು ಹೇಗೆ ಮಾಡುತ್ತಾರೆ.
ಅಲ್ಲಿ ಆ ಕೆಲಸ ಮಾಡಿರಬೇಕಲ್ಲವೇ ಇದೇ ನಮ್ಮ ಆಕ್ಷೇಪ, ಕಾಮಗಾರಿಯ ಜಿಪಿಆರ್‌ ಎಸ್‌ ಹೇಗೆ ಮಾಡುತ್ತಾರೆ. ಯಾರೇ ಆಗಿರಲಿ ಪ್ರಾಮಾಣಿಕತೆಯಿಂದ ಕಾಮಗಾರಿ ನಡೆಸಲಿ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಕಾಮಗಾರಿ ನಡೆಸಬೇಕು, ಗುತ್ತಿಗೆದಾರರ ಮಾತನ್ನು ಕೇಳುವಂತಾಗಬಾರದು. ಸೂಕ್ತವಾದ ದಾಖಲೆಯೊಂದಿಗೆ ಬಿಲ್ಲು ಪಾವತಿಯಾಗಲಿ ಇಲ್ಲಿನ ಜ್ವಲಂತ ಸಮಸ್ಯೆಗೆ ಕೂಡಲೆ ಪರಿಹಾರ ಕಾಣಬೇಕು ಎಂಬುದು ನಮ್ಮ ಒತ್ತಾಸೆ ಎನ್ನುತ್ತಾರೆ ಸದಸ್ಯ ಅಬ್ದುಲ್‌ ಖಾದರ್‌.

ಕಾಮಗಾರಿ ನಡೆಸಲು ಸಿದ್ಧ
ಇದೇ ವಾರ್ಡ್‌ನ ಸದಸ್ಯರೊಬ್ಬರು ಸೂಚಿಸಿದಂತೆ ಕಾಮಗಾರಿಯನ್ನು ನಡೆಸಲಾಗಿದೆ. ಅದರ ಮುಂದುವರಿದ ಕಾಮಗಾರಿಯನ್ನು ಎಂಜಿನಿಯರ್‌ ಮೂಲಕವೇ ನಡೆಸಿದ್ದರ ಬಿಲ್ಲನ್ನು ನೀಡಲು ಆ ವಾರ್ಡ್‌ನ ಸದಸ್ಯರು ಬಲವಾದ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಅಡ್ಡಿ ಪಡಿಸಿದ್ದರಿಂದ ಗುತ್ತಿಗೆಗಾರರು ಯಾರೂ ಕಾಮಗಾರಿ ನಡೆಸಲು ಮುಂದೆ ಬರುತ್ತಿಲ್ಲ, ನಡೆದ ಕಾಮಗಾರಿಯಲ್ಲಿ ಯಾವುದೇ ಗೊಂದಲ ಇಲ್ಲದಿದ್ದರೂ ಸುಖಾಸುಮ್ಮನೆ ಅಡ್ಡಿ ಪಡಿಸುತ್ತಿರುವುದು ಸರಿಯಲ್ಲ. ಚರಂಡಿ ಕಾಮಗಾರಿ ನಡೆಸಲು ನಾವು ಸಹ ಸಜ್ಜಾಗಿದ್ದೇವೆ ಹಣವನ್ನು ಸಹ ಮೀಸಲಿರಿಸಲಾಗಿದೆ ಮೊದಲು ಹಳೆ ಬಿಲ್ಲನ್ನು ಪಾವತಿಸಲು ಅವಕಾಶ ಮಾಡಿಕೊಡಬೇಕು.
ಪೂರ್ಣಿಮಾ, ಅಧ್ಯಕ್ಷರು, ಹಳೆಯಂಗಡಿ ಗ್ರಾ.ಪಂ

Advertisement

ಕಿಸೆಯಿಂದ ಹಣ ಹಾಕಿ ಕೆಲಸ
ಚರಂಡಿಯಲ್ಲಿ ಕೊಳಚೆ ನೀರು ಹರಿದಾಡಿ, ದುರ್ವಾಸನೆ, ಆರೋಗ್ಯ ಸಮಸ್ಯೆ ಇದ್ದರೂ ಪಂಚಾಯತ್‌ನಲ್ಲಿ ತಮ್ಮ ಸ್ವ ಹಿತಾಸಕ್ತಿಯ ಹಠ ಸಾಧನೆ ಆಗುತ್ತಿದೆ. ನಾನೇ ಸ್ವತಃ ಕಿಸೆಯಿಂದ ಹಣಕೊಟ್ಟು ತಾತ್ಕಾಲಿಕ ದುರಸ್ತಿ ಮಾಡಿಸಿದ್ದೇನೆ, ಜನರ ಸಮಸ್ಯೆಗೆ ಸ್ಪಂದಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು, ಸ್ವ ಪ್ರತಿಷ್ಠೆಯಿಂದ ಏನೂ ಸಾಧನೆಯಾಗುವುದಿಲ್ಲ ಎನ್ನುತ್ತಾರೆ ಸದಸ್ಯ ಅಬ್ದುಲ್‌ ಅಜೀಜ್‌.

ಸದಸ್ಯರ ಆಕ್ಷೇಪ ಕಾಮಗಾರಿ ಈ ಹಿಂದಿನ ಪಿಡಿಒ ಅವರ ಅವಧಿಯಲ್ಲಿ ನಡೆದಿರುವುದು. ಇದಕ್ಕೆ ಪಂಚಾಯತ್‌ನ ಸದಸ್ಯರ ಆಕ್ಷೇಪವು ಸಾಮಾನ್ಯ ಸಭೆಯಲ್ಲಿ ವ್ಯಕ್ತಪಡಿಸಿದ್ದರಿಂದ ತಡೆಹಿಡಿಯಲಾಗಿದೆ. ಎಲ್ಲ ಸದಸ್ಯರ ಒಮ್ಮತದ ನಿರ್ಣಯಕ್ಕೆ ಬದ್ಧರಾದಲ್ಲಿ ಸುಲಭವಾಗಿ ಸಮಸ್ಯೆ ಇತ್ಯರ್ಥವಾಗುತ್ತದೆ. ಸದಸ್ಯರೊಬ್ಬರು ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿರುವ ಬಗ್ಗೆ ಗಮನಕ್ಕೆ ಬಂದಿದೆ. ಅಧಿಕಾರಿಗಳನ್ನು ಈ ವಿವಾದಕ್ಕೆ ಎಳೆದುತರಬೇಡಿ.
-ದೀಪ್ತಿ, ಪಿಡಿಒ (ಪ್ರಭಾರ)

*ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next