Advertisement

ಹಳೆಯಂಗಡಿ ಗ್ರಾಮಸಭೆ: ಗ್ರಾಮಸ್ಥರ ಆಕ್ಷೇಪ 

10:10 AM Jan 17, 2018 | |

ಸಸಿಹಿತ್ಲು: ಭಾಗ್ಯಲಕ್ಷ್ಮೀ ಯೋಜನೆಯಲ್ಲಿ ಸರಕಾರದ ಯಾವುದೇ ರೀತಿಯಲ್ಲಿ ಇರದ ಮಾನದಂಡವನ್ನು ಅಧಿಕಾರಿಗಳು ತಮಗೆ ಬೇಕಾದ ರೀತಿಯಲ್ಲಿ ನಿಯಮಗಳನ್ನು ಒತ್ತಾಯ ಪೂರ್ವಕವಾಗಿ ಜಾರಿಗೊಳಿಸುತ್ತಿರುವುದರಿಂದ ಫಲಾನುಭವಿಗಳಿಗೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹಳೆಯಂಗಡಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಸಹಿತ ಪಂ. ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು.

Advertisement

ಹಳೆಯಂಗಡಿ ಗ್ರಾ.ಪಂ.ನ ಪಾವಂಜೆ, ಸಸಿಹಿತ್ಲು ಮತ್ತು ಹಳೆಯಂಗಡಿ ಗ್ರಾಮದ ವ್ಯಾಪ್ತಿಯ ದ್ವಿತೀಯ ಹಂತದ ಗ್ರಾಮಸಭೆ ಸಸಿಹಿತ್ಲುವಿನ ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಪಂ. ಅಧ್ಯಕ್ಷೆ ಜಲಜಾ ಪಾಣರ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸದಸ್ಯ ಎಚ್‌. ವಸಂತ ಬೆರ್ನಾಡ್‌ ಅವರು ವಿಷಯ ಪ್ರಸ್ತಾವಿಸಿ, ಮಗುವಿನ ತಾಯಿಯ ಹೆಸರು ಕೆಲವೊಂದು ತಾಂತ್ರಿಕ ಕಾರಣದಿಂದ ತವರು ಮನೆಯಲ್ಲಿನ ಪಡಿತರ ಚೀಟಿಯಲ್ಲಿಯೇ ಉಳಿದಿರುತ್ತದೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಆಕೆಯ ಹೆಸರು ಗಂಡನ ಮನೆಯಲ್ಲಿನ ಚೀಟಿಯಲ್ಲಿಯೇ ಇರಬೇಕು ಎಂದು ಸೂಚನೆ ನೀಡುತ್ತಾರೆ. ಆದರೆ ಸರಕಾರದ ಯಾವುದೇ ಸುತ್ತೋಲೆಯಲ್ಲಿ ಈ ರೀತಿಯ ನಿಯಮವಿಲ್ಲ. ಯಾವುದೇ ಪಡಿತರ ಚೀಟಿಯಲ್ಲಿ ಹೆಸರಿದ್ದರೂ ಅದನ್ನು ಪರಿಶೀಲಿಸಿ ಯೋಜನೆಯನ್ನು ಅರ್ಹ ಫಲಾನುಭವಿಗೆ ನೀಡಬೇಕು ಎಂದಾಗ ಗ್ರಾಮಸ್ಥರೂ ಬೆಂಬಲ ವ್ಯಕ್ತಪಡಿಸಿದರು.

ಸಿಆರ್‌ಝಡ್‌ ಅಧಿಕಾರಿ ಇಲ್ಲ
ಸಸಿಹಿತ್ಲು ಪ್ರದೇಶದಲ್ಲಿನ ಕೆಲವೊಂದು ಭೌಗೋಳಿಕ ಸಮಸ್ಯೆಯನ್ನು ತಿಳಿಸಲು ಸಿಆರ್‌ಝಡ್‌ ಅಧಿಕಾರಿಗಳು ಬೇಕು ಎಂದು ಗ್ರಾಮಸ್ಥರಾದ ಧನ್‌ರಾಜ್‌ ಕೋಟ್ಯಾನ್‌ ಸಹಿತ ಪಂ. ಸದಸ್ಯರಾದ ಚಂದ್ರಕುಮಾರ್‌, ಅಶೋಕ್‌ ಕುಮಾರ್‌ ತಿಳಿಸಿದರು. ಮುಂದಿನ ದಿನದಲ್ಲಿ ಸಿಆರ್‌ಝೆಡ್‌ ಅಧಿಕಾರಿಗಳೊಂದಿಗೆ ಮುಖಾಮುಖಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಲಾಯಿತು.

ಕೃಷಿಕರೇ ಇಲ್ಲದಂತಹ ಪರಿಸ್ಥಿತಿ
ಸಸಿಹಿತ್ಲು ಗ್ರಾಮದಲ್ಲಿ ಇಂದು ಕೃಷಿ ಭೂಮಿಯನ್ನು ಹುಡುಕಬೇಕಾಗಿದೆ. ಯುವಕರು ಕೃಷಿ ಮಾಡಿರಿ ಎಂದು ಇಲಾಖೆ ಮಾರ್ಗದರ್ಶನ ನೀಡುತ್ತದೆ. ಆದರೆ ಸಾಮಾನ್ಯ ವರ್ಗದ ಜನರಿಗೆ ಸೂಕ್ತವಾದ ಸವಲತ್ತು ಸಿಗುತ್ತಿಲ್ಲ. ಮೀಸಲಾತಿಯಿಂದ ಸಿಗುವ ಯಂತ್ರೋಪಕರಣಗಳ ದುರ್ಬಳಕೆ ಆಗುತ್ತಿದೆ ಎಂದು ಕೃಷಿಕರಾದ ರವಿಕುಮಾರ್‌, ಶ್ರೀನಿವಾಸ್‌ ರಾವ್‌ ಹೇಳಿಕೊಂಡರು.

Advertisement

ಗ್ರಾಮಸ್ಥರ ಬೇಡಿಕೆಗಳು
ಕಾರ್ನಾಡಿನಲ್ಲಿನ ರೈತ ಸಂಪರ್ಕ ಕೇಂದ್ರವನ್ನು ಕಿನ್ನಿಗೋಳಿ ಅಥವ ಹಳೆಯಂಗಡಿಗೆ ವರ್ಗಾಯಿಸಿರಿ, ಸಸಿಹಿತ್ಲು ಲಚ್ಚಿಲ್‌ನಲ್ಲಿ ನ ಪಂಪ್‌ ಚಾಲಕರು ಸರಿಯಿಲ್ಲ, ಉಪ್ಪು ನೀರು ತಡೆಗೋಡೆ ರಚಿಸಿರಿ, ಕದಿಕೆಯ ನೂತನ ಸೇತುವೆಗೆ ದಾರಿ ದೀಪ ಅಳವಡಿಸಿರಿ, ಬೀದಿ ನಾಯಿಗಳ ಕಾಟವನ್ನು ತಪ್ಪಿಸಿರಿ, ಪಾವಂಜೆ-ಹಳೆಯಂಗಡಿಗೆ ಪ್ರತ್ಯೇಕ ಆರೋಗ್ಯ ಕೇಂದ್ರ ಕೊಡಿ, ಪಲ್ಸ್ ಪೋಲಿಯೊ ಲಸಿಕೆಯ ಕಾರ್ಯಕ್ಕೆ ಅಂಗವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸಿರಿ ಸಹಿತ ಹಲವಾರು ಆಗ್ರಹಗಳು ಕೇಳಿ ಬಂದಿತು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಯಶೋಧರ್‌ ಜೆ. ನೋಡೆಲ್‌ ಅಧಿಕಾರಿಯಾಗಿದ್ದರು.

ಎಪಿಎಂಸಿ ಅಧ್ಯಕ್ಷ ಪ್ರಮೋದ್‌ಕುಮಾರ್‌, ಜಿಲ್ಲಾ ಪಂ. ಸದಸ್ಯ ವಿನೋದ್‌ ಕುಮಾರ್‌ ಬೊಳ್ಳೂರು, ತಾ. ಪಂ. ಸದಸ್ಯ ಜೀವನ್‌ ಪ್ರಕಾಶ್‌ ಕಾಮೆರೊಟ್ಟು, ಪಂಚಾಯತ್‌ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಎಚ್‌.ಹಮೀದ್‌, ಅಬ್ದುಲ್‌ ಬಶೀರ್‌, ಎಚ್‌. ವಸಂತ ಬೆರ್ನಾಡ್‌, ಅಬ್ದುಲ್‌ ಖಾದರ್‌, ಚಿತ್ರಾ ಸುರೇಶ್‌, ಅಬ್ದುಲ್‌ ಅಝೀಝ್, ವಿನೋದ್‌ ಕುಮಾರ್‌, ಸುಕೇಶ್‌, ಸುಗಂಧಿ , ಶರ್ಮಿಳಾ ಎನ್‌. ಕೋಟ್ಯಾನ್‌, ಅಶೋಕ್‌ ಬಂಗೇರ, ಚಿತ್ರಾ ಸುಕೇಶ್‌, ಗುಣವತಿ, ಮಾಲತಿ ಡಿ. ಕೋಟ್ಯಾನ್‌, ಪ್ರವೀಣ್‌ ಸಾಲ್ಯಾನ್‌, ಪಂಚಾಯತ್‌ರಾಜ್‌ ಇಂಜಿನಿಯರ್‌ ಪ್ರಶಾಂತ್‌ ಆಳ್ವ, ಶಿಶು ಅಭಿವೃದ್ಧಿ ಇಲಾಖೆಯ ಶೀಲಾವತಿ, ಮೆಸ್ಕಾಂ ಸಹಾಯಕ ಅಭಿಯಂತರ ಗಜಾನನ ಅಭ್ಯಂಕರ್‌ ಎ., ಹಳೆಯಂಗಡಿ ಮೆಸ್ಕಾಂ ಎಇ ಕೌಶಿಕ್‌, ಕೃಷಿ ಅ ಧಿಕಾರಿ ಅಬ್ದುಲ್‌ ಬಶೀರ್‌, ಗ್ರಾಮ ಕರಣಿಕ ಮೋಹನ್‌ ಬಿ. ಆರ್‌, ಸಸಿಹಿತ್ಲು ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಲೊಟಿಲ್ಡಾ ಎ. ಲೋಬೋ, ಪಶು ಸಂಗೋಪನ ಇಲಾಖೆಯ ಪ್ರಭಾಕರ ಶೆಟ್ಟಿ, ಕೆಮ್ರಾಲ್‌ ಆರೋಗ್ಯ ಕೇಂದ್ರದ ಡಾ| ಮಾಧವ ಪೈ, ಉಪಸ್ಥಿತರಿದ್ದರು. ಪಿಡಿಒ ಅಬೂಬಕ್ಕರ್‌ ಸ್ವಾಗತಿಸಿದರು. ಕಾರ್ಯದರ್ಶಿ ಕೇಶವ ದೇವಾಡಿಗ ವರದಿ ಮಂಡಿಸಿ, ವಂದಿಸಿದರು.

ಅಧಿಕಾರಿಗಳ ಗೈರಿಗೆ ಆಕ್ಷೇಪ 
ಆರು ತಿಂಗಳಿಗೊಮ್ಮೆ ನಡೆಯುವ ಗ್ರಾಮ ಸಭೆಗೆ ಸಂಬಂಧಿಸಿದ 36 ಇಲಾಖೆಗಳಲ್ಲಿ ಕೇವಲ ಬೆರಳೆಣಿಕೆಯ ಅ ಧಿಕಾರಿಗಳು ಬರುವುದು ಸರಿಯೇ ಎಂಬ ನಂದಾ ಪಾಯಸ್‌ ಅವರ ಪ್ರಶ್ನೆಗೆ ಉತ್ತರಿಸಿದ ಜಿ.ಪಂ. ಸದಸ್ಯ ವಿನೋದ್‌ ಬೊಳ್ಳೂರು, ಈ ಬಗ್ಗೆ ಹಲವಾರು ಬಾರಿ ಜಿ.ಪಂ. ಸಭೆಯಲ್ಲಿ ಪ್ರಸ್ತಾವನೆ ನಡೆಸಿದ್ದೇವೆ. ಆದರೂ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಮುಂದಿನ ಸಭೆಯಲ್ಲಿ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ ಎಂದರು. 

ಮೆಸ್ಕಾಂ ಇಲಾಖೆಗೆ ಶಾಕ್‌
ತಿಂಗಳಿನ ಬಿಲ್ಲು ಸರಿಯಾಗಿ ನೀಡದೆ ಮೆಸ್ಕಾಂ ಇಲಾಖೆ ಏಕಾಏಕಿ ಸಂಪರ್ಕ ಕಡಿತ ಮಾಡುವುದು ಸರಿಯಲ್ಲ. ಗ್ರಾಹಕರೊಂದಿಗೆ ಮಾನವೀಯತೆ ತೋರಿಸಲು ಲೈನ್‌ಮನ್‌ಗಳಿಗೆ ಸೂಚನೆ ನೀಡಿರಿ ಎಂದು ಸದಸ್ಯ ಅಬ್ದುಲ್‌ ಖಾದರ್‌ ಆಗ್ರಹಿಸಿದರು. ಜಿ.ಪಂ. ಸದಸ್ಯರು ಸಹ ಬೆಂಬಲಿಸಿ ತಮಗೆ ಆದ ಅನುಭವವನ್ನು ಹೇಳಿಕೊಂಡು ಮೆಸ್ಕಾಂ ಇಲಾಖೆಯ ಕಾರ್ಯ ವೈಖರಿಗೆ ಗ್ರಾಹಕರ ಮೂಲಕ ಶಾಕ್‌ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಉದಯವಾಣಿ ವರದಿ ಪ್ರಸ್ತಾವನೆ
ಹಳೆಯಂಗಡಿ, ಪಾವಂಜೆ, ಸಸಿಹಿತ್ಲು ಪ್ರದೇಶದಲ್ಲಿ ಕುಡಿಯುವ ನೀರಿನ ಶಾಶ್ವತ ಯೋಜನೆಯ ಬಗ್ಗೆ ಇತ್ತೀಚೆಗೆ ಉದಯವಾಣಿಯಲ್ಲಿ ವರದಿ ಪ್ರಕಟವಾಗಿದೆ. ಅದರಲ್ಲಿ ತಿಳಿಸಿರುವಂತೆ ಪಂಜ ಕೊಯಿಕುಡೆಯಲ್ಲಿ ನಿರ್ಮಾಣವಾಗುವ ಕಿಂಡಿಅಣೆಕಟ್ಟಿನಿಂದ ಕುಡಿಯುವ ನೀರಿನ ಜಾಕ್‌ವೆಲ್‌ ನಿರ್ಮಾಣಕ್ಕೆ ಒತ್ತಾಯಿಸಿದಲ್ಲಿ ನೀರನ್ನು ದೂರದ ತುಂಬೆಯಿಂದ ತರುವ ಬದಲು ಸ್ಥಳೀಯವಾಗಿಯೇ ಸಿಗುವ ವ್ಯವಸ್ಥೆಗೆ ಪ್ರಯತ್ನ ನಡೆಸಬೇಕು.
–  ಜೀವನ್‌ ಪ್ರಕಾಶ್‌ ಕಾಮೆರೊಟ್ಟು
   ತಾ.ಪಂ. ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next