ಪಣಜಿ: ಗೋವಾ ರಾಜ್ಯದ ಪ್ರತಿಯೊಂದೂ ಕ್ಷೇತ್ರದ ಉದ್ಯೋಗದಲ್ಲಿ ಹೊರ ರಾಜ್ಯದವರು ನುಸುಳಿಕೊಳ್ಳುತ್ತಿದ್ದಾರೆ. ಗೋವಾದ ಭವಿಷ್ಯದ ದೃಷ್ಠಿಯಿಂದ ಇದು ಘಾತಕವಾಗಿದೆ. ಇದೇ ರೀತಿ ಮುಂದುವರೆದರೆ ಮೂಲತಃ ಗೋವನ್ನರು ಮುಂಬರುವ ದಿನಗಳಲ್ಲಿ ಯಾವುದೇ ಉದ್ಯೋಗ ನಡೆಸಲು ಸಾಧ್ಯವಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೊರ ರಾಜ್ಯದ ಜನತೆಯ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದರು.
ಉತ್ತರ ಗೋವಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಗೋವಾ ಮುಖ್ಯಮಂತ್ರಿ ಮಾತನಾಡಿದರು.
ಗೋವಾ ರಾಜ್ಯದಲ್ಲಿರುವ ಪರಪ್ರಾಂತೀಯ ಅಂದರೆ ಹೊರ ರಾಜ್ಯದ ಜನರ ಬಗ್ಗೆ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಇದೀಗ ಆಕ್ಷೇಪಕ್ಕೆ ಕಾರಣವಾಗಿದೆ. ಗೋವಾ ರಾಜ್ಯದ ಪ್ರತಿಯೊಂದೂ ಕ್ಷೇತ್ರದ ಉದ್ಯೋಗದಲ್ಲಿ ಹೊರ ರಾಜ್ಯದ ಜನರು ನುಸುಳುತ್ತಿದ್ದಾರೆ ಎಂದು ಪ್ರಮೋದ ಸಾವಂತ್ ನೀಡಿರುವ ವಿವಾದಾತ್ಮಕ ಹೇಳಿಕೆ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.
ಕಾರ್ಮಿಕ ಇಲಾಖೆಯ ಬಳಿ ಗೋವಾದಲ್ಲಿ ಎಷ್ಟು ಹೊರ ರಾಜ್ಯದ ಕಾರ್ಮಿಕರಿದ್ದಾರೆ ಎಂಬ ನೋಂದಾವಣಿಯಿಲ್ಲ. ಈ ವಿಭಾಗದಲ್ಲಿ ಹೊರ ರಾಜ್ಯದ ಕಾರ್ಮಿಕರ ವಿರುದ್ಧ ಯಾವುದೇ ದೂರು ಅಥವಾ ಪ್ರಕರಣಗಳಿಲ್ಲ ಎಂದು ಕಾರ್ಮಿಕ ಸಚಿವ ಬಾಬುಶ್ ಮೋನ್ಸೆರಾತ್ ಈ ಹಿಂದೆ ಹೇಳಿಕೆ ನೀಡಿದ್ದರು.
ಗೋವಾದಲ್ಲಿ ಹೊರ ರಾಜ್ಯದ ಜನರ ಪಾತ್ರ
ಗೋವಾ ರಾಜ್ಯಕ್ಕೆ ಪ್ರತಿದಿನ ಹೂವು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ನೆರೆಯ ರಾಜ್ಯ ಕರ್ನಾಟಕದಿಂದಲೇ ಆಗುತ್ತದೆ. ಇಷ್ಟೇ ಅಲ್ಲದೆ ಗೋವಾ ಸರ್ಕಾರದ ಉನ್ನತ ಹುದ್ದೆಗಳಿಂದ ಹಿಡಿದು ಕೂಲಿ ಕಾರ್ಮಿಕರವರೆಗೂ ಕೂಡ ಕರ್ನಾಟಕದ ಜನರೇ ಹೆಚ್ಚಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಗೋವಾದ ಅಭಿವೃದ್ಧಿಯಲ್ಲಿ ಕನ್ನಡಿಗರ ಪಾತ್ರ ಬಹು ದೊಡ್ಡದಿದೆ. ಇಷ್ಟು ಮಾತ್ರವಲ್ಲದೇ ಬಿಹಾರ, ಝಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಗೋವಾದಲ್ಲಿ ಕಾರ್ಮಿಕರಿದ್ದಾರೆ. ಹೀಗಿರುವಾಗ ಗೋವಾ ಮುಖ್ಯಮಂತ್ರಿಗಳ ಈ ವಿವಾದಾತ್ಮಕ ಹೇಳಿಕೆ ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.