Advertisement

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

01:24 AM Nov 17, 2024 | Team Udayavani |

ಮಂಗಳೂರು: ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿ ಪುರಸ್ಕೃತ ಕನ್ಯಾನ ಸದಾಶಿವ ಕೆ. ಶೆಟ್ಟಿ ಅವರಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಮಂಗಳೂರು ವತಿಯಿಂದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಶನಿವಾರ ಗೌರವ ಅಭಿನಂದನೆ ಸಲ್ಲಿಸಲಾಯಿತು.

Advertisement

ಗೌರವ ಸ್ವೀಕರಿಸಿ ಮಾತನಾಡಿದ ಅವರು, ಸಮಾಜ ಸೇವೆ ಮಾಡಲು ನನಗೆ ಭಗವಂತ ನೀಡಿರುವ ಆಶೀರ್ವಾದವಾಗಿದ್ದು, ನನ್ನ ಬದುಕಿನ ಸುಯೋಗವಾಗಿದೆ. ಬಡ ಜನತೆಯ ಸೇವೆ ನನಗೆ ತೃಪ್ತಿ ನೀಡಿದೆ. ಸಮಾಜದ ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ ಸಾಧ್ಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ದೇವರು ಕೊಟ್ಟ ಸಂಪತ್ತನ್ನು ಭಗವಂತನ ಪ್ರಸಾದ ಎಂದು ಊರಿಗೆ ಹಂಚುವ ಸದಾಶಿವ ಶೆಟ್ಟರ ಮನಸ್ಸು ವಿಶಾಲವಾದುದು ಎಂದು ಬಣ್ಣಿಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಸ್ಥಾಪಕಾಧ್ಯಕ್ಷ ಸತೀಶ್‌ ಶೆಟ್ಟಿ ಪಟ್ಲ ಮಾತನಾಡಿ, ರಾಜ್ಯ ಸರಕಾರ ಸದಾಶಿವ ಶೆಟ್ಟಿಯವರಿಗೆ ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿ ನೀಡುವ ಮೂಲಕ ಅರ್ಹ ವ್ಯಕ್ತಿಯನ್ನು ಗೌರವಿಸಿದೆ. ಅವರ ಸಮಾಜಮುಖೀ ಕಾರ್ಯಗಳು ನಿರಂತರವಾಗಿರಲಿ ಎಂದರು.

ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಮಾತನಾಡಿ, ಸಂಪತ್ತು ಇದ್ದರೂ ದಾನ ಮಾಡುವ ಮನಸ್ಸು ಎಲ್ಲರಿಗೂ ಇರುವುದಿಲ್ಲ. ದಾನ ಮಾಡಿದಾಗ ಸಮಾಜ ಅವರನ್ನು ಗುರುತಿಸುತ್ತದೆ ಎಂದರು.

Advertisement

ಪಟ್ಲ ಫೌಂಡೇಶನ್‌ನ ಪ್ರಧಾನ ಸಂಚಾಲಕ ಶಶಿಧರ ಶೆಟ್ಟಿ ಬರೋಡ ಮಾತನಾಡಿ, ಸದಾಶಿವ ಶೆಟ್ಟಿ 150 ಕೋಟಿ ರೂ.ಗಿಂತಲೂ ಅಧಿಕ ಮೊತ್ತವನ್ನು ಸಮಾಜಕ್ಕೆ ನೀಡಿ ಬಡವರ ಕಣ್ಣೀರು ಒರೆಸಿದ್ದಾರೆ ಎಂದರು.

ಪಟ್ಲ ಫೌಂಡೇಶನ್‌ನ ಸರ್ವ ಘಟಕಗಳ ವತಿಯಿಂದ ಸದಾಶಿವ ಶೆಟ್ಟಿ ಅವರನ್ನು ಗೌರವಿಸಲಾಯಿತು. ಶಾಸಕ ರಾಜೇಶ್‌ ನಾೖಕ್‌ ಉಳಿಪಾಡಿಗುತ್ತು, ಟ್ರಸ್ಟ್‌ ಗೌರವ ಸಲಹೆಗಾರ ಪಟ್ಲಗುತ್ತು ಮಹಾಬಲ ಶೆಟ್ಟಿ, ಪಟ್ಲಗುತ್ತು ಲಲಿತಾ ಶೆಟ್ಟಿ, ಪಟ್ಲಗುತ್ತು ನಿರ್ಮಿತಾ, ಉದ್ಯಮಿ ಗಳಾದ ಸಿ.ಎ. ದಿವಾಕರ ರಾವ್‌, ಕೆ.ಎಂ. ಶೆಟ್ಟಿ ಮಧ್ಯಗುತ್ತು, ಪಟ್ಲ ಫೌಂಡೇಶನ್‌ ಪದಾಧಿಕಾರಿಗಳಾದ ಸುದೇಶ್‌ ಕುಮಾರ್‌ ರೈ, ರಾಜೀವ ಪೂಜಾರಿ ಕೈಕಂಬ, ಪ್ರದೀಪ್‌ ಆಳ್ವ ಕದ್ರಿ, ಬಾಳ ಜಗನ್ನಾಥ ಶೆಟ್ಟಿ, ಆರತಿ ಆಳ್ವ, ರವಿಚಂದ್ರ ಶೆಟ್ಟಿ ಅಶೋಕನಗರ ಮೊದಲಾದವ‌ರಿದ್ದರು. ಟ್ರಸ್ಟ್‌ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್‌ ನಿರೂಪಿಸಿದರು.

ವಿನೂತನ ಶೈಲಿಯಲ್ಲಿ ಸಮ್ಮಾನ
ಸಮ್ಮಾನದ ಪೇಟ, ಶಾಲು, ಸ್ಮರಣಿಕೆ, ತೈಲಚಿತ್ರವನ್ನೊಳಗೊಂಡ ವಸ್ತುಗಳನ್ನು ಪಲ್ಲಕ್ಕಿಯಲ್ಲಿ ತರಲಾಯಿತು. ಜತೆಗೆ ಗೆಂದಾಳೆ ಸೀಯಾಳ, ಅಡಿಕೆ ಗೊನೆ, ತರಕಾರಿ, ಹಣ್ಣು ಹಂಪಲು, ಅಕ್ಕಿ ಹಾಗೂ ಭತ್ತದ ಮುಡಿ, ಹಿಂಗಾರ ಮೊದಲಾದ ಬುಟ್ಟಿಗಳನ್ನು 6 ಜತೆ ಪತಾಕೆ, ಬಣ್ಣದ ಕೊಡೆ, ಕೊಂಬು, ವಾಲಗದೊಂದಿಗೆ ವೇದಿಕೆಗೆ ತಂದು ಸದಾಶಿವ ಶೆಟ್ಟರನ್ನು ಸಮ್ಮಾನಿಸಲಾಯಿತು.

ಸೌಮ್ಯಾ ಅವರ ಹಾಡಿನೊಂದಿಗೆ ಮಂಜುಶ್ರೀ ಚಂದ್ರಹಾಸ್‌ ಶೆಟ್ಟಿ ಆರತಿ ಬೆಳಗಿದರು. ಸತೀಶ್‌ ಶೆಟ್ಟಿ ಪಟ್ಲ ಅಭಿನಂದನಾ ಗೀತೆಯ ಮೂಲಕ ಗೌರವ ಸಲ್ಲಿಸಿದರು. ಇದೇ ವೇಳೆ ಸದಾಶಿವ ಶೆಟ್ಟಿಯವರಿಗೆ ಪುಷ್ಪವೃಷ್ಟಿ ಮಾಡಲಾಯಿತು. ಬೃಹತ್‌ ಗಾತ್ರದ ಹೂವಿನ ಹಾರ ಹಾಗೂ ಸೇಬಿನ ಹಾರ ಹಾಕಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next