Advertisement
ಹಳೆಯಂಗಡಿ ಜಂಕ್ಷನ್‌ನಲ್ಲಿ ನಾಲ್ಕು ಬದಿಯಿಂದ ವಾಹನಗಳು ಬಂದು ಸೇರುತ್ತಿವೆ. ಫ್ಲೈ ಓವರ್, ಅಂಡರ್ ಪಾಸ್ ಬಿಡಿ; ಕನಿಷ್ಠ ಸರ್ವಿಸ್ ರಸ್ತೆ ಕೂಡ ಇಲ್ಲ. ಎಲ್ಲ ಕಡೆಯಿಂದ ವಾಹನಗಳು ನುಗ್ಗಿದರೆ ಆಗಾಗ್ಗೆ ಟ್ರಾಫಿಕ್ ಜಾಮ್ ನಿತ್ಯದ ಸಮಸ್ಯೆ. ಹೆದ್ದಾರಿ ಬದಿಯವರೆಗೆ ಅಂದು ಕಟ್ಟಡ ಕಟ್ಟಲು ಅನುಮತಿ ನೀಡಿದ್ದೇ ದೊಡ್ಡ ಸಮಸ್ಯೆ.
Related Articles
Advertisement
ರಾಜ್ಯ ಮಟ್ಟದ ಸಾಧನೆ
ರಾಮನಗರ, ಆದರ್ಶ ನಗರ, ಸಾಗ್, ಸಂತೆಕಟ್ಟೆ, ಕರಿತೋಟ, ಚಿಲಿಂಬಿ, ಕೊಪ್ಪಲ ಮತ್ತಿತರ ಪ್ರದೇಶಗಳು ಜನ ವಸತಿಯ ಜತೆಗೆ ಒಂದಷ್ಟು ಕೃಷಿ ಕಾರ್ಯದ ಪ್ರದೇಶವಾಗಿದೆ. ಇಲ್ಲಿನ ಶ್ರೀ ವಿದ್ಯಾವಿನಾಯಕ ಯುವಕ ಮಂಡಲವು ರಾಜ್ಯ ಮಟ್ಟದಲ್ಲಿ ಪ್ರಪ್ರಥಮವಾಗಿ ಮೂರು ಬಾರಿ ಪ್ರಶಸ್ತಿ-ಪುನಸ್ಕಾರ ಪಡೆದುಕೊಂಡ ಸೇವಾ ಸಂಸ್ಥೆಯಾಗಿದೆ. ಯುವತಿ ಮತ್ತು ಮಹಿಳಾ ಮಂಡಲವೂ ಸಹ ವಿಶೇಷ ಮನ್ನಣೆ ಪಡೆದುಕೊಂಡಿದೆ.
ನೂರು ವರ್ಷದ ಯುಬಿಎಂಸಿ ಶಾಲೆಯಿದೆ. ಪಠ್ಯ ಪುಸ್ತಕದಲ್ಲಿ ಹಳೆಯಂಗಡಿ ಹೆಸರನ್ನು ದಾಖಲಿಸಿದ ದಿ| ನಾರಾಯಣ ಸನಿಲ್ ಅವರ ಹೆಸರಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಕಾರ್ಯ ನಿರ್ವಹಿಸುತ್ತಿರುವುದು ವಿಶೇಷ. ಇಲ್ಲಿ ನೆಲೆಸಿದ್ದ ಸಮಾಜ ಸೇವಕ ದಿ| ಶಾಂತರಾಮ ಶೆಟ್ಟಿ ಅವರು ನೀಡಿದ ಸೇವೆಗೆ ಅವರ ಹುಟ್ಟೂರ ಕೆಮ್ರಾಲ್ ಸರಕಾರಿ ಫ್ರೌಢಶಾಲೆಯು ನಾಮಾಂಕಿತವಾಗಿರುವುದು ಉಲ್ಲೇಖನೀಯ. ಬೊಳ್ಳೂರು ದಿ| ವಾಸುದೇವ ಆಚಾರ್ಯರ ಸೇವಾ ಹೆಜ್ಜೆಗಳು ಅಜರಾಮರ.
ಹಳೆಯಂಗಡಿ ಗ್ರಾಮ ಪಂಚಾಯತ್ ಪ್ರಥಮವಾಗಿ ಕಾಗದ ರಹಿತ ಸೇವೆ, ಏಕ ಗವಾಕ್ಷಿ ಸೇವೆ, ಕಂಪ್ಯೂಟರೀಕೃತ ನೀರಿನ ಬಿಲ್ಲನ್ನು ಆರಂಭಿಸಿದ ಜಿಲ್ಲೆಯ ಪ್ರಥಮ ಪಂಚಾಯತ್ ನ ಹೆಗ್ಗಳಿಕೆ, ಅಲ್ಲದೆ ಹವಾನಿಯಂತ್ರಿತ ಕಚೇರಿಯನ್ನು ಹೊಂದಿರುವುದು ವಿಶೇಷ.
ಸಮಸ್ಯೆಗಳು ಸಾಲು… ಸಾಲು…
ಹೊರ ಭಾಗದ ಜನರು ತಮ್ಮ ತ್ಯಾಜ್ಯವನ್ನು ಹಳೆಯಂಗಡಿಯ ಒಳ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಸಾಡುವುದಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಇಂದಿರಾನಗರದಲ್ಲಿನ ಚರಂಡಿಯ ಅವ್ಯವಸ್ಥೆಗೆ ಮುಕ್ತಿ ಸಿಕ್ಕಿಲ್ಲ, ಹೆದ್ದಾರಿಯಲ್ಲಿನ ಅಕ್ಕ ಪಕ್ಕದ ರಸ್ತೆಯಲ್ಲಿ ಬಿದ್ದಿರುವ ಹೊಂಡಕ್ಕೆ ಶಾಶ್ವತ ಪರಿಹಾರ ಆಗಿಲ್ಲ. ಇನ್ನು ಚರಂಡಿ ವ್ಯವಸ್ಥೆಯೇ ಇಲ್ಲ. ಕರಿತೋಟದಲ್ಲಿನ ಚೇಳ್ಯಾರು ಕಿಂಡಿ ಅಣೆಕಟ್ಟಿನಲ್ಲಿ ಮರ-ಗೆಲ್ಲುಗಳೊಂದಿಗೆ ಹೂಳು ತುಂಬಿರುವುದರಿಂದ ನೀರು ಸರಾಗವಾಗಿ ಹರಿಯಲು ಅಡಚಣೆ, ಸಾಗ್ ಪ್ರದೇಶದಲ್ಲಿನ ತ್ಯಾಜ್ಯ ಸಮಸ್ಯೆ, ಒಳ ಪೇಟೆಯಲ್ಲಿ ಸಸಿಹಿತ್ಲು-ಕದಿಕೆ ರಸ್ತೆಯಲ್ಲಿನ ಚರಂಡಿಯ ಅವ್ಯವಸ್ಥೆ, ಆಮೆಗತಿಯಲ್ಲಿ ಸಾಗುತ್ತಿರುವ ಮೀನು ಮಾರುಕಟ್ಟೆಯ ಕಟ್ಟಡ, ಸಾರ್ವಜನಿಕ ಶೌಚಾಲಯದ ದುರಸ್ತಿ ಶೀಘ್ರವಾಗಿ ನಡೆಯಬೇಕಾಗಿದೆ.
ನಾಗರಿಕರ ಸಹಕಾರ ಅಗತ್ಯ: ಹಳೆಯಂಗಡಿಯ ಪೇಟೆ ಬೆಳೆಯುತ್ತಿರುವುದರೊಂದಿಗೆ ಮೂಲ ಸೌಕರ್ಯವನ್ನು ಕಲ್ಪಿಸಲು, ಮುಖ್ಯವಾಗಿ ನಾಗರಿಕರ ಸಹಕಾರ ಅಗತ್ಯವಾಗಿದೆ. ಗ್ರಾಮ ಪಂಚಾಯತ್‌ನ ಇತಿಮಿತಿಯೊಂದಿಗೆ ಪ್ರಗತಿಗೆ ಪೂರಕವಾಗಿ ಯೋಜನೆಯನ್ನು ಜಾರಿಗೊಳಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಸಮಸ್ಯೆಗಳನ್ನು ನಿವಾರಿಸಲು ಆದಷ್ಟು ಪ್ರಯತ್ನ ನಡೆಸುತ್ತಿದ್ದೇವೆ. ತ್ಯಾಜ್ಯ ಮತ್ತಿತರ ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸಬೇಕಾದರೆ ನಾಗರಿಕರು ಪಂಚಾಯತ್‌ನೊಂದಿಗೆ ಕೈ ಜೋಡಿಸಬೇಕು. –ಪೂರ್ಣಿಮಾ, ಅಧ್ಯಕ್ಷರು, ಹಳೆಯಂಗಡಿ ಗ್ರಾಮ ಪಂಚಾಯತ್
ಪ್ರಗತಿಗೆ ಪೂರಕ ಸ್ಪಂದನೆ: ಆರ್ಥಿಕತೆಯೊಂದಿಗೆ ಪ್ರಗತಿಗೆ ಪೂರಕವಾಗಿ ಆಡಳಿತಾತ್ಮಕ ಸ್ಪಂದನೆ ಬೇಕು. ಬೆಳೆಯುವ ಪಟ್ಟಣಕ್ಕೆ ಏನೆಲ್ಲ ಬೇಕು ಎಂಬ ಟಾಸ್ಕ್ ಪೋರ್ಸ್‌ನಂತೆ ಮುಂದಿನ 50 ವರ್ಷದ ದೂರದೃಷ್ಟಿಯಲ್ಲಿ ಕೆಲಸ ಮಾಡಬೇಕಾಗಿದೆ. ಸಮಸ್ಯೆಗಳು ಹಾಗೆಯೇ ಉಳಿಯಬಾರದು ಅದು ನಿವಾರಣೆಯಾಗುವಲ್ಲಿ ಶ್ರಮಿಸಬೇಕು. ಸಂಘಟಿತ ಪ್ರಯತ್ನ ಇದರೊಂದಿಗೆ ನಡೆಯಲಿ. –ಭಾಸ್ಕರ ಸಾಲ್ಯಾನ್, ಗ್ರಾಮಸ್ಥರು
-ನರೇಂದ್ರ ಕೆರೆಕಾಡು