Advertisement

ಹಳೆಯಂಗಡಿ: ನರೇಗಾ ಗ್ರಾಮ ಸಭೆ

10:26 AM Dec 13, 2017 | Team Udayavani |

ಹಳೆಯಂಗಡಿ: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಲ್ಲಿ ಮಂಜೂರಾಗುವ ಅನುದಾನದಲ್ಲಿ ಈಗಿರುವ ಸಾಮಗ್ರಿ ಮತ್ತು ಮಾನವ ಶ್ರಮಕ್ಕೆ ಇರುವ 60:40 ಅನುಪಾತವನ್ನು ಬದಲಾಯಿಸಬೇಕು. ಇದರಿಂದ ಯೋಜನೆಯಲ್ಲಿ ನಿರ್ದಿಷ್ಟವಾಗಿ ಸಾರ್ವಜನಿಕ ಕಾಮಗಾರಿಗೆ ತೊಂದರೆ ಆಗುತ್ತಿದೆ ಎಂದು ಹಳೆಯಂಗಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ನರೇಗಾ ಯೋಜನೆಯ ಸಾಮಾಜಿಕ ಪರಿಶೋಧನ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.

Advertisement

ಪಂಚಾಯತ್‌ನ ರಾಜೀವಗಾಂಧಿ ಸಭಾ ಭವನದಲ್ಲಿ ಜರಗಿದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರಾದ ರವಿ ಕೊಳುವೈಲು ಆಗ್ರಹಿಸಿ, ಪಂಚಾಯತ್‌ ವ್ಯಾಪ್ತಿಯ ನದಿ ಬಳಿಯಲ್ಲಿ ಕೃಷಿಯನ್ನು ರಕ್ಷಿಸುವ ತಡೆ ಗೋಡೆಯನ್ನು ಯೋಜನೆಯಲ್ಲಿ ನಿರ್ಮಿಸಬಹುದು. ಆದರೆ ಈಗಿರುವ ಅನುಪಾತವನ್ನು ಬದಲಾಯಿಸಿದಲ್ಲಿ ಮಾತ್ರ ಪರಿಣಾಮಕಾರಿಯಾಗುತ್ತದೆ. ಇಂದಿನ ಮಾರುಕಟ್ಟೆ ಧಾರಣೆಯ ದರವನ್ನೇ ಮೀಸಲಿಟ್ಟರೆ ಮಾತ್ರ ಅನುಕೂಲವೂ ಆಗುತ್ತದೆ. ಬಾಕಿ ಉಳಿದಿರುವ ಹಣವು ಶೀಘ್ರವಾಗಿ ಬಿಡುಗಡೆಯಾದಲ್ಲಿ ಯೋಜನೆಯನ್ನು ಇನ್ನಷ್ಟು ಕಾರ್ಯರೂಪಕ್ಕೆ ತರಲು ಸಾಧ್ಯವಿದೆ ಎಂದು ಅಧಿ ಕಾರಿಗಳಲ್ಲಿ ಅವರು ಆಗ್ರಹಿಸಿದರು.  ಇದಕ್ಕೆ ಪಂ. ಸದಸ್ಯರಾದ ವಿನೋದ್‌ ಕುಮಾರ್‌ ಕೊಳುವೈಲು, ಅಬ್ದುಲ್‌ ಖಾದರ್‌, ತಾ.ಪಂ. ಸದಸ್ಯ ಜೀವನ್‌ಪ್ರಕಾಶ್‌ ಕಾಮೆರೊಟ್ಟು ಧ್ವನಿಗೂಡಿಸಿದರು. ಮಂಗಳೂರು ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಎಂಜಿನಿಯರ್‌ ಪ್ರಭಾಕರ್‌ ನೋಡೆಲ್‌ ಅಧಿಕಾರಿಯಾಗಿ ಅಧ್ಯಕ್ಷತೆಯನ್ನು ವಹಿಸಿದ್ದರು.

ಗ್ರಾಮಸ್ಥ ಮೋಹನ್‌ ಬಂಗೇರ ಮಾತನಾಡಿ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಅಸಹಕಾರದಿಂದ ತನಗೆ ತನ್ನ ಹಣವನ್ನು ಪಡೆಯಲು ಬಹಳಷ್ಟು ತೊಂದರೆಯಾಗಿದೆ. ಈ ಬಗ್ಗೆ ಹಲವು ಬಾರಿ ಮಂಗಳೂರಿನ ಕಚೇರಿಗೆ ಅಲೆದಾಡಿದ್ದೇನೆ. ಇಂತಹ ವಾತಾವರಣ ನಿರ್ಮಿಸಬೇಡಿ ಯೋಜನೆಯ ಬಗ್ಗೆ ಸಂಶಯ ವ್ಯಕ್ತವಾಗುತ್ತದೆ ಎಂದು ತಮ್ಮ ಖಾತೆಗೆ ಹಣ ಜಮೆಯ ವಿಳಂಬದ ಬಗ್ಗೆ ಪ್ರಶ್ನಿಸಿದರು.

ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಎಚ್‌. ವಸಂತ ಬೆರ್ನಾಡ್‌, ಅಬ್ದುಲ್‌ ಖಾದರ್‌, ವಿನೋದ್‌ ಕುಮಾರ್‌ ಕೊಳುವೈಲು, ಅಬ್ದುಲ್‌ ಅಜೀಜ್‌, ಜಯಂತಿ, ಬೇಬಿ ಸುಲೋಚನಾ, ಶರ್ಮಿಳಾ ಕೋಟ್ಯಾನ್‌, ಸುಗಂಧಿ, ಚಂದ್ರಕುಮಾರ್‌ ಸಸಹಿತ್ಲು, ಅಬ್ದುಲ್‌ ಬಶೀರ್‌, ಅಬ್ದುಲ್‌ ಹಮೀದ್‌, ಕಾರ್ಯದರ್ಶಿ ಕೇಶವ ದೇವಾಡಿಗ, ಯೋಜನೆಯ ಎಂಜಿನಿಯರ್‌ರಕ್ಷಿತ್‌ ಕುಮಾರ್‌,  ಸಂಪನ್ಮೂಲ ವ್ಯಕ್ತಿ ಮಂಗಳಶ್ರೀ ಉಪಸ್ಥಿತರಿದ್ದರು. ಯೋಜನೆಯ ತಾಲೂಕು ಸಂಯೋಜಕಿ ಪವಿತ್ರಾ ಶೆಟ್ಟಿ ವರದಿ ವಾಚಿಸಿದರು. ಪಂಚಾಯತ್‌ನ ಪಿಡಿಒ ಅಬೂಬಕ್ಕರ್‌ ಸ್ವಾಗತಿಸಿ, ವರದಿಯನ್ನು ಮಂಡಿಸಿದರು, ಯೋಜನೆಯ ಉಷಾರಾಣಿ ನಿರೂಪಿಸಿದರು.

ಗುತ್ತಿಗೆ ಯಂತ್ರೋಪಕರಣ ಸಲ್ಲದು
ಯೋಜನೆಯಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಸಿಗಬೇಕು, ಮಾನವ ಶ್ರಮ ಹೆಚ್ಚಾಗಬೇಕು ಎಂಬ ಉದ್ದೇಶವಿರುವುದರಿಂದ ಯೋಜನೆಯಲ್ಲಿ ಯಂತ್ರೋಪಕರಣ ಬಳಸಬಾರದು ಹಾಗೂ ಗುತ್ತಿಗೆದಾರರಿಗೆ ನೇರವಾಗಿ ಕಾಮಗಾರಿ ವಹಿಸಬಾರದು ಎಂಬ ನಿಯಮವಿದೆ. ಹಳೆಯಂಗಡಿ ಗ್ರಾ.ಪಂ. ಆರು ತಿಂಗಳಿನಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಿದೆ. ಪಾರದರ್ಶಕವಾಗಿ ಕಾಮಗಾರಿ ನಡೆಸಲು ಹೆಚ್ಚಾಗಿ ಪ್ರಯತ್ನ ನಡೆಸಬೇಕು, ಪ್ರತಿ ಐದು ವರ್ಷಕ್ಕೊಮ್ಮೆ ಉದ್ಯೋಗ ಚೀಟಿಯನ್ನು ನವೀಕರಿಸಿ. ಯಾರೂ ಕಾರ್ಡ್‌ ಅನ್ನು ದುರ್ಬಳಕೆ ಮಾಡಬಾರದು.
– ಪವಿತ್ರಾ ಶೆಟ್ಟಿ, ತಾ| ಸಂಯೋಜಕರು

Advertisement

ಆಧಾರ್‌ ಲಿಂಕ್‌ನಿಂದ ಗೊಂದಲ
ಫಲಾನುಭವಿಯು ಯೋಜನೆಯಲ್ಲಿ ನೀಡಿದ ಖಾತೆಗೆ ಈ ಹಿಂದೆ ಜಮೆಯಾಗುತ್ತಿತ್ತು. ಆದರೆ ಇತ್ತೀಚೆಗೆ ಅದಕ್ಕೆ ಆಧಾರ್‌ ಲಿಂಕ್‌ ನೀಡಿದ್ದರಿಂದ ಅವರ ಇತರ ಬ್ಯಾಂಕ್‌ ಖಾತೆಯಲ್ಲಿ ಸಾಲವಿದ್ದಲ್ಲಿ ಅದಕ್ಕೆ ನೇರವಾಗಿ ಜಮೆ ಆಗುತ್ತಿರುವುದರಿಂದ ಅವರು ತನಗೆ ಹಣ ಸಿಕ್ಕಿಲ್ಲ ಎಂದು ವಾದಿಸುತ್ತಿದ್ದಾರೆ. ಈ
ಗೊಂದಲವನ್ನು ಕೂಡ ನಿವಾರಿಸಬೇಕು.
– ಅಬೂಬಕ್ಕರ್‌, ಪಂ. ಪಿಡಿಒ

ಹಳೆಯಂಗಡಿ ಗ್ರಾ.ಪಂ. ಜನಸಂಖ್ಯೆಗೆ ಅನುಗುಣವಾಗಿ ಶೇ.10 ಮಾತ್ರ ಉದ್ಯೋಗ ಕಾರ್ಡ್‌ ಇದ್ದು ,ಇದು ಹೆಚ್ಚಿದಲ್ಲಿ ಪಂಚಾಯತ್‌ಗೆ ಅನುಕೂಲ. ಇಲಾಖೆಯ ಕುಂದುಕೊರತೆ ಇದ್ದಲ್ಲಿ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿರಿ.
– ಪ್ರಭಾಕರ್‌, ನೋಡಲ್‌ ಅಧಿಕಾರಿ

ಸಂಘ-ಸಂಸ್ಥೆ, ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಸಾರ್ವಜನಿಕ ಬಾವಿ ನಿರ್ಮಿಸಿದಲ್ಲಿ ಅದನ್ನು ಮೊದಲು ಪಂಚಾಯತ್‌ಗೆ ಬರೆದುಕೊಟ್ಟಲ್ಲಿ ಮಾತ್ರ ಯೋಜನೆಯಲ್ಲಿ ಬಾವಿ ನಿರ್ಮಿಸಬಹುದು.
ಪವಿತ್ರಾ ಶೆಟ್ಟಿ, ತಾಲೂಕು ಸಂಯೋಜಕರು

ಕಳೆದ ವರ್ಷದ ಗರಿಷ್ಠ ಸಾಧನೆ ಈ ಬಾರಿ ಹಳೆಯಂಗಡಿಯಲ್ಲಿ ನಡೆದಿಲ್ಲ ಕಾರಣ ಅನುದಾನ ಬಿಡುಗಡೆಯಲ್ಲಿನ ವಿಳಂಬ ಇದರಿಂದ ಪಂಚಾಯತ್‌ನ ವಾರ್ಷಿಕ ಪ್ರಗತಿಗೆ ತೊಡಕಾಗಿದೆ. ಇದಕ್ಕೆ ಯಾರು ಹೊಣೆ..?
 – ಜೀವನ್‌ಪ್ರಕಾಶ್‌ ಕಾಮೆರೊಟ್ಟು, ತಾ.ಪಂ. ಸದಸ್ಯರು

ಯೋಜನೆಯಿಂದ ಗ್ರಾಮಸ್ಥರಿಗೆ ಎಷ್ಟು ಲಾಭವಿದೆ. ಈ ಯೋಜನೆಯಲ್ಲಿ ಅವರ ಪಾತ್ರವೇನು, ಸೂಕ್ತವಾಗಿ ಅರಿವು ಮೂಡಿಸಲು ಪ್ರಚಾರ ನಡೆಸುವ ಬಗ್ಗೆ ಇಲಾಖೆ ಮತ್ತು ಪಂಚಾಯತ್‌ ಕ್ರಮಕೈಗೊಳ್ಳಲಿ.
ನಂದಾ ಪಾಯಸ್‌,  ಸಾಮಾಜಿಕ ಕಾರ್ಯಕರ್ತೆ

ಯೋಜನೆಯಲ್ಲಿನ ಹಣ ಸಾರ್ವಜನಿಕ ಕಾಮಗಾರಿಯಲ್ಲಿ ಸೂಕ್ತ ಸಮಯದಲ್ಲಿ ಬಿಡುಗಡೆ ಆಗುವುದಿಲ್ಲ, ಸಾಮಗ್ರಿಗಳನ್ನು ಸಾಲದಲ್ಲಿ ತಂದಿರುವುದರಿಂದ ತೊಂದರೆ ಆಗುತ್ತಿದೆ.
ವಿನೋದ್‌ಕುಮಾರ್‌, ಪಂ.ಸದಸ್ಯರು

ಅಧಿಕಾರಿಗಳು, ಎಂಜಿಯರ್‌ ಗಳ ಕೊರತೆಯಿಂದ ಬಿಲ್ಲುಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ. ಒಂದು ಪಂಚಾಯತ್‌ಗೆ ಖಾಯಂ ಆಗಿ ಅಧಿಕಾರಿಗಳನ್ನು ನೇಮಿಸಿ, ಬಳಸಿಕೊಳ್ಳಲಿ.
– ರವಿ ಕೊಳುವೈಲು, ಕೃಷಿಕರು

Advertisement

Udayavani is now on Telegram. Click here to join our channel and stay updated with the latest news.

Next