ಸಾಗರ: ಮಕ್ಕಳನ್ನು ಬಿಸಿಲಿನಲ್ಲಿ ನಿಲ್ಲಿಸುವ ಪ್ರವೃತ್ತಿ ಸರಿಯಲ್ಲ, ರಾಜಕಾರಣಿಗಳು, ಬೇರೆ ಬೇರೆ ಸ್ತರದ ಗಣ್ಯರು ಶಾಲಾ ಭೇಟಿಗೆ ಬರುತ್ತಾರೆ ಎಂದು ಮಕ್ಕಳನ್ನು ಬಿಸಿಲಿನಲ್ಲಿ ನಿಲ್ಲಿಸಿ ಸ್ವಾಗತ ಮಾಡಿಸುವ ಸಂಪ್ರದಾಯಕ್ಕೆ ನನ್ನ ವಿರೋಧವಿದೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇಲ್ಲಿನ ಬೆಳಲಮಕ್ಕಿ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಕ್ರೀಡಾಂಗಣ ಉದ್ಘಾಟಿಸಿ, ಕೈತೊಳೆಯುವ ಘಟಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರಿ ಶಾಲೆಯ ಶ್ರೇಯೋಭಿವೃದ್ಧಿಗೆ ಪೋಷಕರು ಕೈಜೋಡಿಸಬೇಕು. ಕಾಲಕಾಲಕ್ಕೆ ಶಾಲೆಗೆ ಭೇಟಿ ನೀಡಿ ಮಕ್ಕಳ ಪ್ರಗತಿ ಜೊತೆಗೆ ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳ ಪೋಷಕರು ಕಾಲಕಾಲಕ್ಕೆ ಶಾಲೆಗೆ ಭೇಟಿ ನೀಡಿ ಮಕ್ಕಳ ಪ್ರಗತಿ ಗಮನಿಸುತ್ತಾ ಇರುತ್ತಾರೆ. ಇದರಿಂದ ಶಾಲೆಯ ಜೊತೆ ಅವರ ಬಾಂಧವ್ಯ ಸಹ ಬೆಳೆಯುತ್ತದೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುವ ಪೋಷಕರು ತಮ್ಮ ಜವಾಬ್ದಾರಿ ಮುಗಿಯಿತು ಎಂದು ಕೈತೊಳೆದುಕೊಂಡು ಬಿಡುತ್ತಾರೆ. ಇದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಅರಿವು ಪೋಷಕರಿಗೆ ಆಗುತ್ತಿಲ್ಲ. ಯಾವ ಪೋಷಕರು ಕಾಲಕಾಲಕ್ಕೆ ಶಾಲೆಗೆ ಭೇಟಿ ನೀಡಿ ಮಕ್ಕಳ ಪ್ರಗತಿ ಪರಿಶೀಲನೆ ನಡೆಸುತ್ತಾರೋ ಅಂತಹ ಮಕ್ಕಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ : ಕಾಂಗ್ರೆಸ್ಸಿಗರು ಅಲ್ ಖೈದಾ ಮೇಲೆ ಕರುಣೆ ತೋರುತ್ತಿದ್ದಾರೆ: ಸಿ.ಟಿ ರವಿ
ಇದೇ ಸಂದರ್ಭದಲ್ಲಿ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ, ಹೊಸದಾಗಿ ಬಂದ ಶಿಕ್ಷಕರಿಗೆ ಸ್ವಾಗತ, ಶಾಲೆಗೆ ದೇಣಿಗೆ ನೀಡಿದ ದಾನಿಗಳಿಗೆ ಸನ್ಮಾನ ಮತ್ತು ಏಳನೇ ತರಗತಿ ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿಂಬ ಕೆ.ಆರ್., ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್ ಉಪಸ್ಥಿತರಿದ್ದರು. ಐಶ್ವರ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ದಿನೇಶ್ ಸ್ವಾಗತಿಸಿದರು. ಜಯಮ್ಮ ನಿರೂಪಿಸಿದರು.