ಕೊಪ್ಪಳ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ನನಗೆ ಅತಿ ದೊಡ್ಡ ಜವಬ್ದಾರಿಯನ್ನು ನೀಡಿದೆ. ಅದನ್ನು ಅತ್ಯಂತ ಪ್ರಮಾಣಿಕ ಹಾಗೂ ದಕ್ಷತೆಯಿಂದ ಯಶಸ್ವಿಯಾಗಿ ನಿಭಾಯಿಸಿ ಹೊಸದೊಂದು ಕೊಡುಗೆ ಕೊಡುವೆನು ಎಂದು ನೂತನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಅವರು ಹೇಳಿದರು.
ಸಚಿವರಾದ ಬಳಿಕ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯ ಗವಿಮಠಕ್ಕೆ ಭೇಟಿ ನೀಡಿ ಗವಿಸಿದ್ದೇಶ್ವರ ಸ್ವಾಮೀಜಿಗಳ ಆಶೀರ್ವಾದ ಪಡೆದು ಸುದ್ದಿಗಾರರ ಜೊತೆ ಮಾತನಾಡಿ, ರಾಷ್ಟ್ರೀಯ ನಾಯಕರು ಹಾಗೂ ಇಲ್ಲಿನ ನಾಯಕರು ನನ್ನನ್ನು ಗುರುತಿಸಿ ಸಚಿವ ಸ್ಥಾನ ನೀಡಿದ್ದಾರೆ ಎಂದರೆ ಅದನ್ನು ನಾನು ಅರ್ಥ ಮಾಡಿಕೊಂಡು ಆಡಳಿತ ನಡೆಸಬೇಕು ಎಂದರು.
ನನಗೆ ಸಚಿವ ಸ್ಥಾನ ಲಭಿಸುವಲ್ಲಿ ಸಂತೋಷಜೀ ಅವರ ಕೊಡುಗೆಯಿದೆ ಎನ್ನುವುದೆಲ್ಲವೂ ಊಹಾಪೋಹ. ಆದರೆ ಜಿಲ್ಲಾ ಪ್ರಾತಿನಿಧ್ಯ ಕೊಡಬೇಕಿತ್ತು. ಹಾಗಾಗಿ ನನಗೆ ಸಚಿವ ಸ್ಥಾನ ದೊರೆತಿದೆ. ಬೆಳಗಾವಿ, ಬೆಂಗಳೂರು ಭಾಗದಲ್ಲಿ ಸಚಿವ ಸ್ಥಾನ ಕಡಿಮೆ ಮಾಡಿ, ಎಲ್ಲ ಭಾಗಕ್ಕೂ ಸಚಿವ ಸ್ಥಾನ ಸಿಗಬೇಕು ಎನ್ನುವ ಉದ್ದೇಶದಿಂದ ಈ ಬಾರಿ ಸ್ಥಾನಮಾನಗಳು ಹಂಚಿಕೆಯಾಗಿವೆ ಎಂದರು.
ಇದನ್ನೂ ಓದಿ :ಜಮೀರ್ ಮನೆ ಕಟ್ಟಿದ್ದಾರೆ ಅಷ್ಟೆ,ಹಣ ದುರುಪಯೋಗ ಎಲ್ಲಿಆಗಿದೆ?:ED ದಾಳಿ ವಿರುದ್ಧ ಸಿದ್ದು ಟೀಕೆ
ಆನಂದ್ ಸಿಂಗ್‌ರಿಗೆ ಖಾತೆ ಹಂಚಿಕೆಯ ಬಗ್ಗೆ ಅಸಮಾಧಾನದ ವಿಚಾರಕ್ಕೆ, ಜನ ನಮ್ಮನ್ನು ಕ್ಷೇತ್ರದ ಕೆಲಸ ಮಾಡಲು ಆಯ್ಕೆ ಮಾಡಿ ಕಳಿಸಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಒಂದೊಂದು ಖಾತೆ ಒಂದೊಂದು ಭಾಗಕ್ಕೆ ಕೊಟ್ಟಿರುತ್ತಾರೆ. ಅದನ್ನು ನಾವು ಸಮರ್ಥವಾಗಿ ನಿಭಾಯಿಸಬೇಕು. ಒಂದುವರೆ ವರ್ಷದಲ್ಲಿ ಜನಪರ ಆಡಳಿತ ನೀಡಲಿದ್ದೇವೆ. ಮುಂದೆ ಬೊಮ್ಮಾಯಿ ಹಾಗೂ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ನಾವು ಮುನ್ನಡೆಯಲಿದ್ದೇವೆ ಎಂದರು.
ಈಗ ಸರ್ಕಾರದಲ್ಲಿ ನನಗೆ ಎರಡು ಪ್ರಭಲ ಖಾತೆ ಕೊಟ್ಟಿದ್ದಾರೆ. ಹಿಂದೆ ಸಹಕಾರ ಮಹಾಮಂಡಳ, ಅಪೆಕ್ಸ್, ಆರ್‌ಡಿಸಿಸಿ ಬ್ಯಾಂಕ್‌ನಲ್ಲಿ ನನ್ನ ಆಡಳಿತ ಜನ ನೋಡಿದ್ದಾರೆ. ಈ ಬಾರಿಯೂ ನನ್ನ ಆಡಳಿತ ನೋಡಲಿದ್ದಾರೆ ಎಂದರಲ್ಲದೇ, ಕೆಆರ್‌ಎಸ್‌ನಲ್ಲಿ ಅಕ್ರಮ ಗಣಿಗಾರಿಕೆಯ ವಿಚಾರದ ಕುರಿತಂತೆ ಸುಮಲತಾ ಪ್ರಸ್ತಾಪದ ವಿಚಾರದ ಕುರಿತು ವಿಧಾನಸಭೆಯಲ್ಲಿ ಚರ್ಚೆ ಮಾಡುವೆ. ತಜ್ಞರು, ವಿಜ್ಞಾನಿಗಳ ತಂಡವೂ ಗಮನಿಸಿದೆ. ಇಲಾಖೆಯ ಅಧಿಕಾರಿ ಜೊತೆ ಚರ್ಚೆ ಮಾಡುವೆನು. ಅಗತ್ಯವಿದ್ದಲ್ಲಿ ಕೆಆರ್‌ಎಸ್‌ಗೆ ಭೇಟಿ ನೀಡುವೆ ಎಂದರು.