Advertisement

ಬಳ್ಮನೆ –ಬೂತನಾಡಿ ರಸ್ತೆ ಸಂಚಾರ ಅಧೋಗತಿ

01:09 PM Jul 15, 2022 | Team Udayavani |

ಹಾಲಾಡಿ: ಅಮಾಸೆಬೈಲು ಗ್ರಾಮ ಪಂಚಾಯತ್‌ನ ಎರಡನೇ ವಾರ್ಡ್‌ನ ಬಳ್ಮನೆ – ಬೂತನಾಡಿ ಮಣ್ಣಿನ ರಸ್ತೆಯು ಮಳೆಯಿಂದಾಗಿ ಸಂಪೂರ್ಣ ಜರ್ಜರಿತ ಗೊಂಡಿದ್ದು, ವಾಹನ ಸಂಚಾರವೇ ಕಷ್ಟ ಎನ್ನುವಂತಾಗಿದೆ. ಇಲ್ಲಿಂದ ಜಡ್ಡಿನಗದ್ದೆ, ಅಮಾಸೆಬೈಲು ಕಡೆಗೆ ಶಾಲೆಗೆ ಬರುವ ಮಕ್ಕಳಿದ್ದು, ರಿಕ್ಷಾ ಇನ್ನಿತರ ವಾಹನಗಳು ಬರದೇ, ಕಿ.ಮೀ. ಗಟ್ಟಲೆ ನಡೆದುಕೊಂಡು ಬರುವಂತಾಗಿದೆ.

Advertisement

ಬಳ್ಮನೆ – ಬೂತನಾಡಿ ರಸ್ತೆಯುದ್ದಕ್ಕೂ ಹೊಂಡ ಗುಂಡಿಯಿದ್ದು, ವಾಹನ ಸಂಚರಿಸಲು ಸಾಧ್ಯವಿಲ್ಲದಷ್ಟು ಹದಗೆಟ್ಟಿದೆ. ಅದರಲ್ಲೂ ರಸ್ತೆಯ ಮಧ್ಯೆಯೇ ನೀರು ಹೋಗಲು ಹೊಂಡ ಮಾಡಿಕೊಟ್ಟಂತೆ ಗುಂಡಿಗಳಾಗಿದ್ದು, ಇಲ್ಲಿಗೆ ಬರುವಂತಹ ರಿಕ್ಷಾ, ಇನ್ನಿತರ ವಾಹನಗಳು ಈ ಗುಂಡಿಗಳಲ್ಲಿ ಸಿಕ್ಕಿ, ಹೊರಬರಲು ಪರದಾಡುವಂತಾಗಿದೆ.

3 ಕಿ.ಮೀ. ನಡಿಗೆ

ಬೂತನಾಡಿ, ಬಳ್ಮನೆ ಪರಿಸರದಿಂದ ಜಡ್ಡಿನಗದ್ದೆ ಹಿ.ಪ್ರಾ. ಶಾಲೆ, ಅಮಾಸೆಬೈಲು ಕಡೆಗಳಿಗೆ ಶಾಲೆಗೆ ಹೋಗುವ ಅನೇಕ ಮಂದಿ ಮಕ್ಕಳಿದ್ದಾರೆ. ಇವರೆಲ್ಲ 2-3 ರಿಕ್ಷಾಗಳಲ್ಲಿ ಇಲ್ಲಿಂದ ತೆರಳುತ್ತಿದ್ದರು. ಆದರೆ ಈಗ ರಸ್ತೆಯ ಅವ್ಯವಸ್ಥೆಯಿಂದಾಗಿ ರಿಕ್ಷಾಗಳು ಬರದ ಪರಿಸ್ಥಿತಿಯಿದ್ದು, ಮಕ್ಕಳೆಲ್ಲ ಸುಮಾರು 3 ಕಿ.ಮೀ. ದೂರದವರೆಗೆ ಮಳೆಗೆ ನಡೆದುಕೊಂಡೇ ಶಾಲೆಗೆ ಬರುವಂತಾಗಿದೆ.

ಮುಚ್ಚಿದ ಚರಂಡಿಯಿಂದ ಸಮಸ್ಯೆ ಮಳೆ ನೀರು ಹರಿದು ಹೋಗಲು ರಸ್ತೆಯ ಬದಿಗಳಲ್ಲಿ ಚರಂಡಿ ಇತ್ತು. ಆದರೆ ಕಳೆದ ಬೇಸಗೆಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಚರಂಡಿಯಲ್ಲಿಯೇ ಹಾಕಿಕೊಂಡು ಹೋಗಿ, ಬಳಿಕ ಪೈಪ್‌ನ ಮೇಲೆ ಮಣ್ಣು ಚರಂಡಿಯನ್ನೇ ಮುಚ್ಚಿದ್ದಾರೆ. ಪರಿಣಾಮ ಮಳೆ ನೀರು ಪೂರ್ತಿ ರಸ್ತೆಯಲ್ಲಿಯೇ ಹರಿದು, ದೊಡ್ಡ ದೊಡ್ಡ ಹೊಂಡಗಳು ಸೃಷ್ಟಿಯಾಗಿವೆ.

Advertisement

ಅಭಿವೃದ್ಧಿಗೆ ಬೇಡಿಕೆ

ಬಳ್ಮನೆ – ಬೂತನಾಡಿ ರಸ್ತೆಯು ಮಣ್ಣಿನ ರಸ್ತೆಯಾಗಿ ಹಲವು ದಶಕಗಳೇ ಕಳೆದಿದ್ದು, ಇನ್ನೂ ಡಾಮರುಅಥವಾ ಕಾಂಕ್ರೀಟ್‌ ಕಾಮಗಾರಿ ಆಗಿಲ್ಲ. ಸುಮಾರು 3-4 ಕಿ.ಮೀ. ದೂರದವರೆಗೂ ಮಣ್ಣಿನ ರಸ್ತೆಯಾಗಿಯೇ ಇದ್ದು, ಈ ಭಾಗದ ಜನ ಅನೇಕ ವರ್ಷಗಳಿಂದ ರಸ್ತೆ ಅಭಿವೃದ್ಧಿಗೆ ಒತ್ತಾಯಿಸುತ್ತಲೇ ಇದ್ದಾರೆ. ಪ್ರತಿ ವರ್ಷದ ಮಳೆಗಾಲದಲ್ಲಿ ಇಲ್ಲಿನ ಜನ ಈ ಸಮಸ್ಯೆ ಅನುಭವಿಸುವಂತಾಗಿದೆ.

ಹೋಗಲು ಸಾಧ್ಯವೇ ಇಲ್ಲ: ಈ ಮಾರ್ಗದಲ್ಲಿ ಈಗ ಯಾವ ವಾಹನಗಳು ಹೋಗದಷ್ಟು ಹೊಂಡಗಳು ಇದ್ದು, ಬಾಡಿಗೆಗೆ ಕರೆದರೂ, ಯಾರೂ ಬರುವುದಿಲ್ಲ. ಮಕ್ಕಳನ್ನು ಅರ್ಧದದವರೆಗೆ ಮಾತ್ರ ಬಿಟ್ಟು ಹೋಗುತ್ತಿದ್ದು, ಅಲ್ಲಿಂದ ಮುಂದಕ್ಕೆ ಮನೆಯವರು ಕರೆದುಕೊಂಡು ಹೋಗಬೇಕು. ಸದ್ಯಕ್ಕೆ ತಾತ್ಕಾಲಿಕವಾಗಿ ಗುಂಡಿ ಮುಚ್ಚು ಕೆಲಸವಾದರೂ ಪಂಚಾಯತ್‌ನವರು ಮಾಡಿಕೊಡಲಿ. – ಶಿವರಾಜ್‌, ಸ್ಥಳೀಯರು

ತಾತ್ಕಾಲಿಕ ವ್ಯವಸ್ಥೆ: ಬಳ್ಮನೆ – ಬೂತನಾಡಿ ಸಂಪರ್ಕ ರಸ್ತೆ ಅಭಿವೃದ್ಧಿ ಬಗ್ಗೆ ಈಗಾಗಲೇ ಶಾಸಕರ ಬಳಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈಗ ಮಳೆಯಿಂದಾಗಿ ರಸ್ತೆ ಹದಗೆಟ್ಟ ಬಗ್ಗೆ ನಾನೇ ಸ್ವತಃ ಭೇಟಿ ಮಾಡಿ, ಗಮನಿಸಿದ್ದೇನೆ. ಮಳೆ ಸ್ವಲ್ಪ ಕಡಿಮೆಯಾದ ಕೂಡಲೇ ಈಗ ಸಂಚರಿಸಲು ಅನುಕೂಲವಾಗುವಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಲಾಗುವುದು. – ಕೆಲ ಚಂದ್ರಶೇಖರ್‌ ಶೆಟ್ಟಿ, ಅಮಾಸೆಬೈಲು ಗ್ರಾ.ಪಂ. ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next