ಏನ್ ಮಾಡ್ತಿದ್ದೀ? ಏನು ಬರೆಯಬೇಕೆಂದು ತಿಳಿಯದೆ ಈ ಪತ್ರ ಬರೆಯಲು ಕುಳಿತಿರುವೆ. ಇಷ್ಟಕ್ಕೂ, ಮನಸ್ಸಿಗೆ ಮೂಡುವ ಪದಗಳಿರದ ಭಾವನೆಗಳನ್ನು ನಿನಗೆ ಹೇಳಬೇಕು. ಅದೊಂತರಾ ನಿರಂತರ ಉಸಿರಾಟದ ಚಪಲ ನಿನ್ನೊಂದಿಗೆ. ನೀ ಸ್ವಲ್ಪ ಕೊಳಕ. ಹಾಗಿದ್ರೂ ನಿನ್ನನ್ನ ಮುದ್ದು ಚೆಲುವ ಅಂತಾನೇ ಕರಿತೀನಿ, ಯಾಕೆ ಗೊತ್ತ? ಮೂರು ದಿನಕ್ಕೊಮ್ಮೆ ಮಾತ್ರ ಸ್ನಾನ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿರೋ ನೀನು ನನ್ನೊಂದಿಗೆ ಬರುವಾಗ ಮಾತ್ರ ದಿನವೂ ಸ್ನಾನ ಮಾಡೋದನ್ನ ಮರೆಯಲ್ವಲ್ಲ; ಆ ಪ್ರೀತಿಪರತೆಗೆ. ದಿನನಿತ್ಯ ನೀಟಾಗಿ ಬಂದು, ಸ್ಟೈಲಿಶ್ ಆಗಿ ಕಾಣಿಸಿಕೊಂಡು, ನಯವಾದ, ಹೊಗಳಿಕೆಯ ಬಣ್ಣದ ಮಾತುಗಳನ್ನಾಡಿ ಎರಡು ಮೂರು ಹುಡುಗಿಯರ ಜೊತೆ ತಿರುಗೋ ಹುಡುಗರಿಗಿಂತ ನಿನ್ನ ಒಲವೇ ಸನಿಹ. ಮನದಲ್ಲಿ ಅದೆಷ್ಟೇ ನೋವಿರಲಿ, ಆ ನಿನ್ನ ಕಂಗಳ ನೋಟದಲ್ಲಿ ಅದೆಂಥದೋ ಸಾಂತ್ವನವಿದೆ ಹುಡುಗ. ನನ್ನೆಲ್ಲಾ ಸುಖ ದುಃಖದ ಭಾವಕ್ಕೆ ನಿನದೇ ದನಿ, ಹೂಂ ಕಣೋ; ನನ್ನ ತುಟಿಯ ಕೆಂಪು ರಂಗಿಗೆ ಮೆಲ್ನಗು ತುಂಬಿದ ಚೇತನ ನೀನು.
Advertisement
ನನ್ನ ಜೀವಮಾನದ ಅದೆಷ್ಟು ಗಂಟೆಗಳು ನಾನು ಅಮ್ಮ,ಅಪ್ಪನೊಂದಿಗೆ ಮಾತಾಡಿದ್ದೇನೊ, ಅದಕ್ಕಿಂತಲೂ ಹೆಚ್ಚು ನಿನ್ನೊಂದಿಗೆ ನನ್ನ ಬದುಕಿನ ಚಿತ್ರಣಗಳನ್ನ ತೆಗೆದಿಟ್ಟು, ಮಾತಾಡಿದೀನಿ. ಯಾಕೆಂದರೆ ಅಷ್ಟು ಮುಕ್ತವಾಗಿ, ಬಟಾಬಯಲಾಗಿ ಎಲ್ಲವನ್ನೂ ನಿನ್ನೊಂದಿಗೆ ಹಂಚಿಕೊಳ್ಳುವ ಧೈರ್ಯ ನೀಡಿದ್ದಿ. ಮೊಬೈಲ್ ಬಂದಂದಿನಿಂದ ಲೆಕ್ಕ ಹಾಕಿದರೂ ನಿನಗೆ ಮಾಡಿದಷ್ಟು ಸಂದೇಶಗಳು ಬೇರೆಯವರಿಗೆ ಕಳಿಸಿದ ಸಂದೇಶಗಳನ್ನೆಲ್ಲ ಒಟ್ಟುಗೂಡಿಸಿದರೂ ಆಗುವುದಿಲ್ಲವೇನೋ! ಅಷ್ಟರ ಮಟ್ಟಿಗೆ ಎಲ್ಲರ ಸಾಂಗತ್ಯಕ್ಕಿಂತ ನಾನೇ ಮುಖ್ಯ ಎಂಬಷ್ಟು ಒಲವು ಹರಿಸಿದ್ದಿ. ನನಗೂ ತಿಳಿದಿದೆ; ಬರಿಯ ಫೋನ್ ಕಾಲ್ಸ…, ಮೆಸೇಜುಗಳು ಮಾತ್ರ ಪ್ರೀತಿಯನ್ನು ಬಿಂಬಿಸುವುದಿಲ್ಲ ಮತ್ತು ಅದರಿಂದ ಪ್ರೀತಿಯನ್ನು ಕಾಪಿಟ್ಟುಕೊಳ್ಳಲು ಅಸಾಧ್ಯ ಎಂದು.
Related Articles
ಪಲ್ಲವಿ
Advertisement