Advertisement
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೃತಕ ಹೇರ್‌ಜೆಲ್‌ಗಳು ಹಲವು ರಾಸಾಯನಿಕಗಳಿಂದ ಕೂಡಿದ್ದು ದೀರ್ಘಕಾಲದ ಉಪಯೋಗದಿಂದ ದುಷ್ಪರಿಣಾಮ ಉಂಟುಮಾಡುತ್ತವೆ. ಮುಖ್ಯವಾಗಿ ಫಾರ್ಮಾಲ್ಡಿಹೈಡ್ ಎಂಬ ರಾಸಾಯನಿಕವು ಹಾರ್ಮೋನ್ ವ್ಯತ್ಯಯವನ್ನು ಉಂಟುಮಾಡುತ್ತದೆ. ಇದು ಸಾಮಾನ್ಯವಾಗಿ ಎಲ್ಲ ಕೃತಕ ಹೇರ್‌ಜೆಲ್‌ಗಳಲ್ಲಿ ಅಧಿಕ ಪ್ರಮಾಣದಲ್ಲಿರುತ್ತದೆ. ಮನೆಯಲ್ಲೇ ತಯಾರಿಸಿದ ಹೇರ್‌ಜೆಲ್‌ಗಳು ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಮಕ್ಕಳಿಗೆ, ಮಹಿಳೆಯರಿಗೆ ನಿತ್ಯೋಪಯೋಗಕ್ಕೆ ದೀರ್ಘಕಾಲೀನ ಬಳಕೆಗೆ ಸುಯೋಗ್ಯ.
ಸಾಮಗ್ರಿ: ಆರ್ಧ ಚಮಚ ಜೆಲ್ಯಾಟಿನ್, ಅರ್ಧ ಕಪ್ ಬೆಚ್ಚಗಿನ ಡಿಸ್ಟಿಲ್ ವಾಟರ್, 20 ಹನಿ ಲ್ಯಾವೆಂಡರ್ ತೈಲ (ಪರಿಮಳಕ್ಕಾಗಿ). ವಿಧಾನ: ಒಂದು ಬೌಲ್‌ನಲ್ಲಿ ಅರ್ಧ ಚಮಚ ಜೆಲ್ಯಾಟಿನ್ ತೆಗೆದುಕೊಂಡು ಅದಕ್ಕೆ ಬೆಚ್ಚಗಿನ ಡಿಸ್ಟಿಲ್‌ವಾಟರ್ ಬೆರೆಸುತ್ತ ಚೆನ್ನಾಗಿ ಕಲಕಬೇಕು. ತದನಂತರ 20 ಹನಿ ಲ್ಯಾವೆಂಡರ್ ತೈಲವನ್ನು ಸೇರಿಸಿ ಮಿಶ್ರಮಾಡಬೇಕು. ಪರಿಮಳಕ್ಕಾಗಿ ಲ್ಯಾವೆಂಡರ್ ತೈಲವನ್ನು ಬಳಸುವುದಾಗಿದ್ದು, ಲ್ಯಾವೆಂಡರ್ ತೈಲವಿಲ್ಲದೆಯೂ ಹೇರ್‌ಜೆಲ್ ತಯಾರಿಸಬಹುದು. ಅಥವಾ ಟೀಟ್ರೀ ಆಯಿಲ್ ಬೆರೆಸಿಯೂ ತಯಾರಿಸಬಹುದು. ಇದನ್ನು ಫ್ರಿಜ್‌ನಲ್ಲಿಟ್ಟು ಬಳಸಬೇಕು.
Related Articles
ಸಾಮಗ್ರಿ: ಅರ್ಧ ಕಪ್ ಅಲೋವೆರಾ, 20 ಹನಿ ಲ್ಯಾವೆಂಡರ್ ತೈಲ.
ವಿಧಾನ: ಒಂದು ಪುಟ್ಟ ಬೌಲ್‌ನಲ್ಲಿ ಅಲೋವೆರಾ ಜೆಲ್ ಹಾಗೂ ಲ್ಯಾವೆಂಡರ್ ತೈಲವನ್ನು ಚೆನ್ನಾಗಿ ಮಿಶ್ರ ಮಾಡಬೇಕು. ಸಣ್ಣ ಗಾಜಿನ ಭರಣಿಯಲ್ಲಿ ಹಾಕಿ, ಫ್ರಿಜ್‌ನಲ್ಲಿ ಅರ್ಧ ಗಂಟೆ ಇಡಬೇಕು. ಇದನ್ನು ನಿತ್ಯ ಕೂದಲಿಗೆ ಲೇಪಿಸಿದರೆ, ಪೋಷಕಾಂಶವೂ ದೊರೆಯುತ್ತದೆ. ಕೂದಲು ಜಿಡ್ಡಿನ ಅಂಶವಿಲ್ಲದೆ ಹೊಳೆಯುತ್ತದೆ. ಸ್ಟೈಲಿಂಗ್ ಜೆಲ್ ಆಗಿಯೂ ಇದು ಉಪಯುಕ್ತ.
Advertisement
ಅಗಸೇ ಬೀಜದ ಹೇರ್ಜೆಲ್ಸಾಮಗ್ರಿ: 10 ಚಮಚ ಅಗಸೇಬೀಜ , 1 ಕಪ್ ಡಿಸ್ಟಿಲ್ ವಾಟರ್, 20 ಹನಿಗಳಷ್ಟು ಲ್ಯಾವೆಂಡರ್ ತೈಲ.
ವಿಧಾನ: ಒಂದು ಪಾತ್ರೆಯಲ್ಲಿ ಅಗಸೇಬೀಜ ಹಾಗೂ ಡಿಸ್ಟಿಲ್ ವಾಟರ್ ತೆಗೆದುಕೊಂಡು ಸಣ್ಣ ಉರಿಯಲ್ಲಿ ಕುದಿಸಬೇಕು. ಸುಮಾರು 10-15 ನಿಮಿಷ ಕುದಿಸಿದಾಗ, ನೀರು ದಪ್ಪವಾಗಿ ಸಕ್ಕರೆಯ ಪಾಕದಂತೆ ಅಂಟುತನ ಪಡೆದುಕೊಳ್ಳುತ್ತದೆ. ತದನಂತರ ಇದನ್ನು ಬಟ್ಟೆ ಅಥವಾ ಜಾಲರಿಯ ಮೂಲಕ ಸೋಸಬೇಕು. ಆರಿದ ಬಳಿಕ ಇದನ್ನು ಲ್ಯಾವೆಂಡರ್ ತೈಲದೊಂದಿಗೆ ಮಿಶ್ರ ಮಾಡಿ ಒಂದು ಸಣ್ಣ ಗ್ಲಾಸ್ ಜಾರ್‌ನಲ್ಲಿ ಹಾಕಿ ಫ್ರಿಜ್‌ನಲ್ಲಿಡಬೇಕು. ಎಲ್ಲ ಸೀಸನ್‌ಗಳಲ್ಲೂ ಬಳಸಬಹುದಾದ ಆರೋಗ್ಯಕರ ಹೇರ್‌ಜೆಲ್ ಇದು! ನೈಸರ್ಗಿಕ ಹೇರ್ ಸ್ಟ್ರೇಯ್‌ಟನಿಂಗ್ ಜೆಲ್
ಉದ್ದವಾದ ನೀಳ-ನೇರ ಕೇಶರಾಶಿ ಇಂದಿನ ಫ್ಯಾಶನ್ ಟ್ರೆಂಡ್‌ಗಳಲ್ಲಿ ಒಂದು. ಮನೆಯಲ್ಲೇ ನೀಳ-ನೇರವಾದ ಕೇಶರಾಶಿಗಾಗಿ ಈ ಹೇರ್‌ಜೆಲ್ ಉಪಯುಕ್ತ.
ಸಾಮಗ್ರಿ: 10 ಚಮಚ ಅಗಸೆಬೀಜ, 1 ಕಪ್ ನೀರು, ಅಲೋವೆರಾ ತಿರುಳು 4 ಚಮಚ, 2 ಚಮಚ ಶುದ್ಧ ಹರಳೆಣ್ಣೆ , 1 ಚಮಚ ಲಿಂಬೆರಸ, 2 ಚಮಚ ಜೇನು.
ವಿಧಾನ: ಒಂದು ಅಗಲಬಾಯಿಯ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಕುದಿಸಬೇಕು. ಕುದಿ ಬಂದ ನಂತರ ಅಗಸೆಬೀಜಗಳನ್ನು ಬೆರೆಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕಲಕುತ್ತಾ ಬಿಸಿ ಮಾಡಬೇಕು. ದಪ್ಪವಾದ ದ್ರವದಂತಾದಾಗ ಆರಿಸಿ, ಬಟ್ಟೆ ಅಥವಾ ಜರಡಿಯಲ್ಲಿ ಸೋಸಬೇಕು. ಆರಿದ ಬಳಿಕ ಅಲೋವೆರಾ ತಿರುಳು ಸೇರಿಸಿ ಕಲಕಬೇಕು. ತದನಂತರ ಇದಕ್ಕೆ ನಿಂಬೆರಸ, ಹರಳೆಣ್ಣೆ , ಜೇನು ಬೆರೆಸಿ ಚೆನ್ನಾಗಿ ಮಿಶ್ರಮಾಡಿ ಗಾಜಿನ ಭರಣಿಯಲ್ಲಿ ಹಾಕಿ ಫ್ರಿಜ್‌ನಲ್ಲಿಡಬೇಕು. ಇದನ್ನು ಕೂದಲಿಗೆ ಮೇಲಿನಿಂದ ಕೆಳಗೆ ಚೆನ್ನಾಗಿ ಲೇಪಿಸಬೇಕು. ಉದ್ದಕ್ಕೆ ಬಾಚಿ, ಕೂದಲನ್ನು ಬಿಡಬೇಕು. ಅರ್ಧ ಗಂಟೆ ಬಳಿಕ ಕೂದಲು ತೊಳೆದರೆ, ನೈಸರ್ಗಿಕ ಹೇರ್ ಸ್ಟ್ರೇಯ್‌ಟನರ್ ಜೆಲ್ ಆಗಿ ಇದು ಕಾರ್ಯವೆಸಗುತ್ತದೆ. ಇದನ್ನು ನಿತ್ಯ ಒಂದು ಬಾರಿಯಂತೆ ಒಂದು ತಿಂಗಳು ಲೇಪಿಸಿದರೆ, ಹೊಳೆವ ನೀಳ-ನೇರ ಕೇಶರಾಶಿ ಉಂಟಾಗುತ್ತದೆ! ನಿಂಬೆಯುಕ್ತ ಹೇರ್‌ಜೆಲ್
ಸಾಮಗ್ರಿ: 5 ಚಮಚ ಜೆಲ್ಯಾಟಿನ್, 1 ಕಪ್ ನೀರು, 10 ಚಮಚ ನಿಂಬೆರಸ, 2 ಚಮಚ ಕೊಬ್ಬರಿಎಣ್ಣೆ , 4 ಚಮಚ ಅಲೋವೆರಾ ತಿರುಳು.
ವಿಧಾನ: ಒಂದು ಪ್ಯಾನ್‌ನಲ್ಲಿ ನೀರು ಹಾಗೂ ಜೆಲ್ಯಾಟಿನ್ ತೆಗೆದುಕೊಂಡು ಚೆನ್ನಾಗಿ ಮಿಶ್ರಮಾಡಿ, ಸಣ್ಣ ಉರಿಯಲ್ಲಿ ಕರಗಿಸಬೇಕು. ಉರಿಯಿಂದ ಕೆಳಗಿಳಿಸಿದ ಬಳಿಕ ನಿಂಬೆರಸ ಬೆರೆಸಿ ಮಿಶ್ರಮಾಡಬೇಕು. ಆರಿದ ಬಳಿಕ ಗಟ್ಟಿಯಾದ ಜೆಲ್ ಸೆಟ್ ಆಗುತ್ತದೆ. ಇದಕ್ಕೆ ಕೊಬ್ಬರಿಎಣ್ಣೆ ಹಾಗೂ ಅಲೋವೆರಾ ತಿರುಳು ಬೆರೆಸಿ ಬ್ಲೆಂಡರ್‌ನಲ್ಲಿ ಚೆನ್ನಾಗಿ ಬ್ಲೆಂಡ್ ಮಾಡಬೇಕು. ಇದನ್ನು ಗಾಜಿನ ಭರಣಿಯಲ್ಲಿ ಸಂಗ್ರಹಿಸಿ ಕೂದಲಿಗೆ ಸ್ಟೈಲಿಂಗ್ ಹೇರ್‌ಜೆಲ್ ಆಗಿ ಉಪಯೋಗಿಸಿದರೆ ಕೂದಲಿಗೆ ಪೋಷಣೆ, ಕಂಡೀಷನರ್ ಪರಿಣಾಮವೂ ಉಂಟಾಗಿ ಕೂದಲು ಕಾಂತಿ, ಸ್ನಿಗ್ಧತೆ ಪಡೆದುಕೊಳ್ಳುತ್ತದೆ. ಹೊಸ ವಿನ್ಯಾಸಗಳಲ್ಲಿ ಕೂದಲನ್ನು ಸೆಟ್‌ಮಾಡಲೂ ಈ ಹೇರ್‌ಜೆಲ್ ಉಪಯುಕ್ತ. ಜೇನುಮೇಣ ಜೋಜೋಬಾ ತೈಲದ ಹೇರ್‌ಜೆಲ್
ಸಾಮಗ್ರಿ: 5 ಚಮಚ ಜೇನುಮೇಣದ ತುರಿ, 5 ಚಮಚ ಶೀಬಟರ್, ಜೋಜೋಬಾ ತೈಲ 5 ಚಮಚ, 1 ಚಮಚ ಆರಾರೂಟ್ ಹಿಟ್ಟು , ವಿಟಮಿನ್ “ಈ’ ತೈಲ 10 ಹನಿ.
ವಿಧಾನ: ಮೊದಲು ಸಣ್ಣ ಉರಿಯಲ್ಲಿ ಜೇನುಮೇಣ ಕರಗಿಸಿ, ಅದರೊಂದಿಗೆ ಶೀಬಟರ್ ಬೆರೆಸಿ ಕಲಕಬೇಕು. ಇದಕ್ಕೆ ಜೋಜೋಬಾ ತೈಲ ಬೆರೆಸಿ ಆರಾರೂಟ್ ಹಿಟ್ಟು ಹಾಗೂ ಕೊನೆಯಲ್ಲಿ ವಿಟಮಿನ್ “ಈ’ ತೈಲ ಬೆರೆಸಿ ಕಲಕಬೇಕು. ಶೀಬಟರ್ ಬದಲಿಗೆ ಜೆಲ್ಯಾಟಿನ್ ಬಳಸಬಹುದು. ಇದು ಸಹ ಕಂಡೀಶನರ್ ಪರಿಣಾಮ ಬೀರುವ ಹೇರ್‌ಜೆಲ್. ಕೃತಕ ಹೇರ್‌ಜೆಲ್‌ನಲ್ಲಿರುವ ರಾಸಾಯನಿಕಗಳಾದ ಬೆನ್‌ರಿkುನ್ ಈಉಅ, ಕ್ಲೋರಿನ್, ಯೂರಿಯಾ, ಐಸೊ ಪ್ರೊಪೈಲ್ ಆಲ್‌ಕೊಹಾಲ್‌ಗಳು ನೈಸರ್ಗಿಕ ಹೇರ್‌ಜೆಲ್‌ಗಳಲ್ಲಿ ಇಲ್ಲ. ಆದ್ದರಿಂದ ಸೌಂದರ್ಯಕ್ಕೂ ಆರೋಗ್ಯಕ್ಕೂ ಉತ್ತಮ. – ಡಾ. ಅನುರಾಧಾ ಕಾಮತ್