Advertisement

ಗೋವಾದಲ್ಲಿರುವ ಕನ್ನಡ ಕೂಲಿ ಕಾರ್ಮಿಕರಿಗೆ ಗೋವಾ ಕನ್ನಡ ಮಹಾ ಸಂಘದಿಂದ ಕ್ಷೌರ ವ್ಯವಸ್ಥೆ

04:29 PM Apr 16, 2020 | sudhir |

ಪಣಜಿ: ಗೋವಾದ ಬಿಚೋಲಿಯ ಲೇಬರ್ ಕ್ಯಾಂಪ್‍ನಲ್ಲಿರುವ ಕನ್ನಡಿಗ ಕೂಲಿ ಕಾರ್ಮಿಕರಿಗೆ ಅಖಿಲ ಗೋವಾ ಕನ್ನಡ ಮಹಾಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಗುರುವಾರ ಈ ಕನ್ನಡಿಗರಿಗೆ ಕ್ಷೌರಿಕರನ್ನು ಕರೆಯಿಸಿ ಅಗತ್ಯವಿದ್ದವರಿಗೆ ಕ್ಷೌರ ಮಾಡಿಸಲು ವ್ಯವಸ್ಥೆ ಕಲ್ಪಿಸಲಾಯಿತು.

Advertisement

ಲಾಕ್‍ಡೌನ್‍ನಿಂದಾಗಿ ಗೋವಾದಲ್ಲಿ ಸಿಲುಕಿಕೊಂಡಿರುವ ಕೂಲಿ ಕಾರ್ಮಿಕರಿಗೆ ಗೋವಾ ಸರ್ಕಾರ ರಾಜ್ಯದಲ್ಲಿ 10 ಲೇಬರ್ ಕ್ಯಾಂಪ್‍ಗಳಲ್ಲಿ ವಾಸ್ತವ್ಯ ಮತ್ತು ಊಟದ ವ್ಯವಸ್ಥೆ ಕಲ್ಪಿಸಿದೆ. ಆದರೆ ಬಿಚೋಲಿಯ ಲೇಬರ್ ಕ್ಯಾಂಪ್‍ನಲ್ಲಿರುವ ಸುಮಾರು 150 ಕನ್ನಡಿಗ ಕೂಲಿ ಕಾರ್ಮಿಕರು ತಮ್ಮನ್ನು ಊರಿಗೆ ಕಳುಹಿಸಿ ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂಬುದಾಗಿ ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಧಾವಿಸಿ ಬಂದ ಅಖಿಲಗೋವಾ ಕನ್ನಡ ಮಹಾಸಂಘ ಈ ಕನ್ನಡಿಗರ ಎಲ್ಲ ಬೇಡಿಕೆಯನ್ನು ಇಲ್ಲಿಯೇ ಈಡೇರಿಸುವುದಾಗಿ ಭರವಸೆ ನೀಡಿತ್ತು. ಅದರಂತೆಯೇ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್(ರೆಡ್ಡಿ) ತಮ್ಮ ಮನೆಯಿಂದಲೇ ಈ ಕನ್ನಡಿಗರಿಗೆ ಪ್ರತಿದಿನ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಇದೀಗ ಇವರಿಗೆ ಹೇರ್‍ಕಟಿಂಗ್ ಮಾಡಿಸಿಕೊಳ್ಳಲು ಕೂಡ ವ್ಯವಸ್ಥೆ ಕಲ್ಪಿಸಿದ್ದಾರೆ.

ಗೋವಾ ಸರ್ಕಾರವು ಈ ಲೇಬರ್ ಕ್ಯಾಂಪ್‍ನಲ್ಲಿರುವ ಕನ್ನಡಿಗರಿಗೆ ಊಟದ ವ್ಯವಸ್ಥೆ ಕಲ್ಪಿಸಿತ್ತಾದರೂ ಇವರಿಗೆ ಆ ಊಟ ಸೇರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದೀಗ ಈ ಕನ್ನಡಿಗರ ಎಲ್ಲ ಬೇಡಿಕೆಯನ್ನು ಪೂರೈಸಲಾಗುತ್ತಿದ್ದು, ಇವರಿಗೆ ಅಡಿಕೆ-ಎಲೆಯನ್ನು ಕೂಡ ವ್ಯವಸ್ಥೆ ಮಾಡಲಾಗಿದೆ.

ಬಿಚೋಲಿ ಲೇಬರ್ ಕ್ಯಾಂಪ್‍ನಲ್ಲಿ ಕಲಬುರ್ಗಿಯ ಚಿಂಚೋಳಿ, ಕೊಪ್ಪಳದ ಕುಷ್ಠಗಿ, ವಿಜಯಪುರ ಹೀಗೆ ಉತ್ತರ ಕರ್ನಾಟಕದ ವಿವಿದೆಡೆಯ ಸುಮಾರು 150 ಜನ ಕೂಲಿ ಕಾರ್ಮಿಕರು ತಮ್ಮ ಊರಿಗೆ ತೆರಳಲಾರದಿರುವ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಇವರಿಗೆ ಬಿಚೋಲಿಯ ಗ್ವಾಟೆ ಕಾಲೇಜಿನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿದೆ. ಸದ್ಯ ಈ ಕನ್ನಡಿಗರಿಗೆ ಬೆಳಗಿನ ಉಪಹಾರವನ್ನು ಗೋವಾ ಸರ್ಕಾರ ನೀಡುತ್ತಿದ್ದು, ಮಧ್ಯಾನ್ಹ ಮತ್ತು ಸಂಜೆಯ ಊಟಕ್ಕೆ ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್(ರೆಡ್ಡಿ) ತಮ್ಮ ಮನೆಯಿಂದಲೇ ವ್ಯವಸ್ಥೆ ಮಾಡಿದ್ದಾರೆ. ಇಷ್ಟೇ ಅಲ್ಲದೆಯೇ ಪ್ರತಿದಿನ ಈ ಕನ್ನಡಿಗರ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next