Advertisement

ಕೈಕೊಟ್ಟ ಮಳೆ: ರೈತರ ಬಾಳು ಅಧೋಗತಿ

10:42 AM Aug 09, 2018 | Team Udayavani |

ಚಿತ್ತಾಪುರ: ಆರಂಭದಲ್ಲಿ ಮುಂಗಾರು ಮಳೆ ಅಬ್ಬರಿಸಿ, ಬೊಬ್ಬರಿಸಿದ್ದನ್ನು ಕಂಡ ರೈತ ಖುಷಿಯಾಗಿದ್ದ. ಬಿತ್ತನೆಗೆ ಸಜ್ಜಾಗಬೇಕು ಎನ್ನುವಷ್ಟರಲ್ಲೇ ವರುಣನ ಅವಕೃಪೆಗೆ ಕಂಗಾಲಾಗಿದ್ದಾನೆ. ಇತ್ತ ಮೋಡಗಳು ಚದುರಿ ಹೋಗುತ್ತಿರುವುದನ್ನು ನೋಡಿದರೆ ತಾಲೂಕಿನಲ್ಲಿ ಮತ್ತೆ ಬರದ ಛಾಯೆ ಆವರಿಸುವ ಆತಂಕ ಎದುರಾಗಿದೆ.

Advertisement

ರೋಹಿಣಿ ಮತ್ತು ಮೃಗಶಿರ ಮಳೆ ಆರ್ಭಟಿಸಿದ್ದನ್ನು ಕಂಡ ರೈತರು ನಿಗದಿತ ಅವಧಿಯಲ್ಲಿ ಬಿತ್ತನೆ ಮಾಡಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಕಳೆದ ಒಂದು ತಿಂಗಳಿನಿಂದ ತಾಲೂಕಿನಲ್ಲಿ ಮಳೆಯಾಗದ ಕಾರಣ ಮುಂಗಾರು ಮುನಿಸು ಈ ವರ್ಷವೂ ಮುಂದುವರಿಯಲಿದೆ ಎನ್ನುವ ಚಿಂತೆಯಲ್ಲಿ ರೈತರು ಆಕಾಶದತ್ತ ಮುಖ ಮಾಡಿದ್ದಾರೆ.
 
ಬಿಸಿಲ ನಾಡು ಎಂದೇ ಖ್ಯಾತಿ ಪಡೆದ ತಾಲೂಕಿನಲ್ಲಿ ನಿತ್ಯ ಮೋಡ ಕವಿದ ವಾತಾವರಣ ನಿರ್ಮಾಣವಾಗಿರುತ್ತದೆ. ಮಳೆ ಸುರಿಯುತ್ತಿದೆ ಎನ್ನುವಷ್ಟರಲ್ಲಿ ಜೋರು ಗಾಳಿಗೆ ಮೋಡ ತೇಲಿ ಹೋಗುತ್ತಿವೆ. ರೈತರ ನಿರಾಸೆ ಕಂಡ ಭೂತಾಯಿ ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ ಎಂದು ರೈತ ಮಳೆರಾಯನ ಹತ್ತಿರ ಬೇಡಿಕೊಂಡರೂ ಮಳೆರಾಯ ಕೃಪೆ ತೋರುತ್ತಿಲ್ಲ.

ಮಳೆ ಕೊರತೆಯಿಂದ ಹೆಸರು ಮತ್ತು ಉದ್ದು ಬೆಳೆ ಕಾಯಿ ಕಟ್ಟುವ ಹಂತದಲ್ಲಿ ತೇವಾಂಶದ ಕೊರತೆಯಿಂದ ಬಾಡಿ ಹೋಗಿವೆ. ಹಣ ಖರ್ಚು ಮಾಡಿ ಬಿತ್ತಿದ ಬೆಳೆಗೆ ಲಾಭ ಬರೋದಿಲ್ಲ ಎನ್ನುವ ಕಾರಣಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ ಎನ್ನುವ ಆತಂಕ ರೈತರಲ್ಲಿ ಮನೆ ಮಾಡಿದೆ.

ತಾಲೂಕಿನ ಚಿತ್ತಾಪುರ, ಅಳ್ಳೋಳ್ಳಿ, ಕಮರವಾಡಿ, ಮತ್ತಿಮೂಡ್‌, ಇಂಧನಕಲ್‌, ಮಾಡಬೂಳ, ಮುಡಬೂಳ, ಮರಗೋಳ, ದಂಡೋತಿ, ಸಂಗಾವಿ, ಗುಂಡಗುರ್ತಿ, ಇವಣಿ, ಪೇಠಶಿರೂರ, ಭಾಗೋಡಿ, ಮಲಕೂಡ, ಇವಣಿ, ಮೋಗಲಾ, ಇಟಗಾ, ದಿಗ್ಗಾಂವ, ಕದ್ದರಗಿ, ಯರಗಲ್‌, ರಾವೂರ್‌ ಸೇರಿದಂತೆ ಇತರ ಗ್ರಾಮಗಳ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಕಡಿಮೆ ಆಗಿದೆ.

ಮಳೆ ಕೊರತೆಯಿಂದ ಕೆಲವು ಗ್ರಾಮಗಳಲ್ಲಿ ಮುಂಗಾರು ಬಿತ್ತನೆ ತಡವಾಗಿದೆ. ಹೆಸರು ಮತ್ತು ಉದ್ದು ಬಿತ್ತನೆಗೆ ಸಿದ್ಧತೆ ಮಾಡಿಯೂ ಬಿತ್ತನೆ ಮಾಡಲಾಗದೇ ರೈತರು ತೀವ್ರ ಹತಾಶೆಗೊಳಗಾಗಿದ್ದಾರೆ. ತೊಗರಿ ಬಿತ್ತನೆಯೂ ತಿಂಗಳ ಕಾಲ ವಿಳಂಬವಾಗಿದೆ. ತೇವಾಂಶ ಕೊರತೆಯಿಂದ ತೊಗರಿ ಬೆಳವಣಿಗೆ ಕುಂಠಿತಗೊಂಡಿದೆ.

Advertisement

ಭಂಕಲಗಾ, ಸಾತನೂರ್‌, ಹೊಸ್ಸುರ್‌, ಡೋಣಗಾಂವ, ರಾಜೋಳ್ಳಾ, ರಾಮತೀರ್ಥ, ಭೀಮನಳ್ಳಿ, ಅಲ್ಲೂರ್‌(ಕೆ), ಅಲ್ಲೂರ್‌(ಬಿ), ದಂಡಗುಂಡ, ಸಂಕನೂರ, ಯಾಗಾಪುರ, ಬೆಳಗೇರಾ ಗ್ರಾಮಗಳ ವ್ಯಾಪ್ತಿಯಲ್ಲಿ ಅಲ್ಪಸ್ವಲ್ಪ ಮಳೆ ಬಂದಿದ್ದರಿಂದ ರೈತರು ಹೆಸರು ಮತ್ತು ಉದ್ದನ್ನು ಹೆಚ್ಚು ಬಿತ್ತನೆ ಮಾಡಿದ್ದರು. ಹೂವಾಡುವ ಮತ್ತು ಕಾಯಿ ಕಟ್ಟುವ ಹಂತದಲ್ಲಿ ಮಳೆ ಬಾರದೆ ನಿರೀಕ್ಷಿತ ಫಲ ದೊರೆಯುವುದಿಲ್ಲ ಎನ್ನುವ ಆತಂಕ ರೈತರಲ್ಲಿ ಮನೆ ಮಾಡಿದೆ.

ಜುಲೈ ತಿಂಗಳ ಮಧ್ಯದಲ್ಲಿ ಸ್ವಲ್ಪ ಮಳೆ ಬಂದು ರೈತರು ತೊಗರಿ ಬಿತ್ತನೆ ಮಾಡಿದ್ದಾರೆ. ಭೂಮಿಯಲ್ಲಿ ತೇವಾಂಶದ ಅಭಾವದಿಂದ ತೊಗರಿ ಬೆಳೆಯ ಬೆಳವಣಿಗೆ ಕುಂಠಿತಗೊಂಡು ಇನ್ನೂ ಬೆಳೆ ನೆಲಮಟ್ಟದಲ್ಲೆ ಇದೆ. ಅರ್ಧದಷ್ಟು ಇಳುವರಿ
ಬಂದರೇ ಸಾಕು ಮಾಡಿದ ಖರ್ಚಿನ ಹಣ ವಾಪಾಸು ಬರುತ್ತದೆ. ಇಲ್ಲವಾದರೇ ನಷ್ಟ ಎದರಿಸಬೇಕಾಗುತ್ತದೆ ಎಂದು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಚಿತ್ತಾಪುರ, ಶಹಾಬಾದ ಮತ್ತು ಗುಂಡಗುರ್ತಿ ವಲಯಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಕಾಳಗಿ ಮತ್ತು ನಾಲವಾರ ವಲಯದಲ್ಲಿ ಅಲ್ಪಸ್ವಲ್ಪ ಮಳೆಯಾಗಿದೆ. ಅಲ್ಲಿಯೂ ಈಗ ಮಳೆ ಕೊರತೆ ಕಾಡುತ್ತಿದೆ. ಹೊಲಗಳಲ್ಲಿನ ಬೆಳೆಗಳು ಬಾಡುತ್ತಿದ್ದು, ಇಳುವರಿ ಕುಸಿಯುವ ಅಥವಾ ತೀವ್ರ ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗಿದೆ. 
 ಜಾಲೇಂದ್ರ ಗುಂಡಪ್ಪ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಮಳೆ ಬರುತ್ತೆ, ನಮ್ಮ ಬಾಳು ಈ ಬಾರಿಯಾದರೂ ಹಸನಾಗುತ್ತೇ ಎನ್ನುವ ಆಸೆ ಇಟ್ಟಿಕೊಂಡಿದ್ದೆ. ಆದರೆ
ಕಳೆದ ತಿಂಗಳಿನಿಂದ ಮಳೆ ಕೈಕೊಟ್ಟಿದ್ದರಿಂದ ಹೆಸರು ಮತ್ತು ಉದ್ದು ಕಾಯಿ ಕೊಡದೇ ಹೂವಾಗಿ ಉದರಿ ಹೋಗಿದ್ದನ್ನು ನೋಡಿ ಬರ ಸಿಡಿಲಿನಂತೆ ನೋವು ಆವರಿಸಿಕೊಂಡು ಕಣ್ಣೀರು ಸುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. 
 ಬಸವರಾಜ ಸಾತನೂರ ಗ್ರಾಮದ ರೈತ

„ಎಂ.ಡಿ ಮಶಾಖ

Advertisement

Udayavani is now on Telegram. Click here to join our channel and stay updated with the latest news.

Next