ಚಿಕ್ಕಬಳ್ಳಾಪುರ: ಮುಂಗಾರು ಹಂಗಾಮಿನ ಹೊಸ್ತಿಲಲ್ಲಿರುವ ಜಿಲ್ಲೆಯ ರೈತರು ಮಳೆಗಾಗಿ ಎದುರು ನೋಡುತ್ತಿದ್ದ ಬೆನ್ನಲ್ಲೇ ಭಾನುವಾರ ಆಲಿಕಲ್ಲು ಸಹಿತ ಬಿದ್ದ ಭಾರೀ ಮಳೆ ದಾಳಿಂಬೆ, ದ್ರಾಕ್ಷಿ, ಮಾವು ಬೆಳೆಗೆ ಪೆಟ್ಟು ನೀಡಿದ್ದು ಅಪಾರ ನಷ್ಟ ಸಂಭವಿಸಿದೆ.
ಜಿಲ್ಲೆಯಲ್ಲಿ ಹಲವು ದಿನಗಳಿಂದ ಮೋಡ ಕವಿದ ವಾತಾವರಣ ಇತ್ತಾದರೂ ಮಳೆ ಬಿದ್ದಿರಲಿಲ್ಲ. ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಹಲವು ಭಾಗಗಳಲ್ಲಿ ಆಲಿಕಲ್ಲು ಸಹಿತ ಮಳೆ ಆಗಿರುವುದು ವಾಣಜ್ಯ ಬೆಳೆಗೆ ಸಾಕಷ್ಟು ಹಾನಿ ಮಾಡಿದೆ. ಜಿಲ್ಲಾದ್ಯಂತ ಜೂನ್ ಆರಂಭಕ್ಕೆ ಮುಂಗಾರು ಮಳೆ ಪ್ರವೇಶಿಸಲಿದ್ದು ಬಿತ್ತನೆ ಚಟುವಟಿಕೆಗೆ ರೈತರು ಸಿದ್ಧತೆ ನಡೆಸಿದ್ದಾರೆ. ಆದರೆ, ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಆಕಾಲಿಕ ಮಳೆ ವಾಣಿಜ್ಯ ಬೆಳೆ ಬೆಳೆಯುವ ರೈತರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ. ವಿಶೇಷವಾಗಿ ಇತ್ತೀಚಿನಲ್ಲಿ ಜಿಲ್ಲೆಯಲ್ಲಿ ವಾರ್ಷಿಕ ಬೆಳೆಗಳ ಬದಲಾಗಿ ವಾಣಿಜ್ಯ ಬೆಳೆಗಳ ಕಡೆ ರೈತರು ಹೆಚ್ಚು ಒಲವು ತೋರಿ ದ್ರಾಕ್ಷಿ, ದಾಳಿಂಬೆ, ಹೂ, ಹಣ್ಣು, ತರಕಾರಿ ಬೆಳೆಗಳನ್ನು ವ್ಯಾಪಕ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ.
ಹೂ, ಹಣ್ಣಿಗೂ ಹೊಡೆತ: ಚಿಕ್ಕ ಬಳ್ಳಾ ಪುರದಲ್ಲಿ ರಾತ್ರಿ ಸುರಿದ ಮಳೆಯಿಂದ ಅಪಾರ ಪ್ರಮಾಣದ ಹೂ, ಹಣ್ಣು, ತರಕಾರಿ ನೆಲ ಕಚ್ಚಿದೆ. ನಂದಿ ಹಾಗೂ ಕಸಬಾ ಹೋಬಳಿಯ ಹಲವು ಗ್ರಾಮಗಳಲ್ಲಿ ಬಿದ್ದ ಆಲಿಕಲ್ಲು ಸಹಿತ ಬಿರುಗಾಳಿ ಮಳೆ ತೋಟಗಳಲ್ಲಿನ ಹೂಗಳನ್ನು ಮಣ್ಣು ಪಾಲು ಮಾಡಿದೆ. ಇನ್ನೂ ಟೊಮೆಟೋ ಮತ್ತಿತರ ಬೆಳೆಗಳಿಗೂ ಮಳೆ ಕಾಟದ ಪರಿಣಾಮ ಹಲವು ರೋಗ ಕಾಣಿಸಿಕೊಳ್ಳುವ ಭೀತಿ ರೈತರಲ್ಲಿ ಆವರಿಸಿದೆ.
ನೆಲ ಕಚ್ಚುತ್ತಿದೆ ಮಾವು: ಮೊದಲೇ ಜಿಲ್ಲೆಯಲ್ಲಿ ಈ ವರ್ಷ ಹವಾಮಾನ ವೈಪರೀತ್ಯದ ಪರಿಣಾಮ ಮಾವು ಶೇ.30 ಮಾತ್ರ ಫಸಲು ಬಂದಿದೆ. ಈಗಷ್ಟೇ ಮಾವಿನ ಕಾಯಿಯನ್ನು ಬೆಳೆಗಾರರು ಕೊಯ್ಲು ಮಾಡಿ ಮಾರುಕಟ್ಟೆಗೆ ತರುವ ಕೆಲಸ ಮಾಡುತ್ತಿದ್ದಾರೆ. ಆದರೆ, ಶನಿವಾರ ಜಿಲ್ಲೆಯ ಹಲವು ಕಡೆ ಭಾರೀ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಬಿದ್ದಿರುವುದು ರೈತರನ್ನು ಆತಂಕಕ್ಕೀಡು ಮಾಡಿದೆ. ಆಲಿಕಲ್ಲು ಮಳೆ ಬಿದ್ದಷ್ಟು ಮಾವು ಗುಣಮಟ್ಟ ಕಳೆದುಕೊಳ್ಳಲಿದೆ. ಅದೇ ಪರಿಸ್ಥಿತಿ ಚಿಕ್ಕಬಳ್ಳಾಪುರದ ದ್ರಾಕ್ಷಿ ಬೆಳೆಗಾರರದ್ದಾಗಿದೆ. ಚಿಕ್ಕಬಳ್ಳಾಪುರದಲ್ಲಿ ದ್ರಾಕ್ಷಿ ಈಗಷ್ಟೇ ಗೊನೆ ಬಿಟ್ಟು ಕಾಯಿ ಗಟ್ಟಿಯಾಗುತ್ತಿದೆ.
ಬೆಳೆ ನಷ್ಟ ಪರಿಹಾರಕ್ಕೆ ಅಲೆದಾಟ: ಕಳೆದ ಫೆಬ್ರವರಿ, ಮಾರ್ಚ್‌ನಲ್ಲಿ ಬಿದ್ದ ಆಲಿಕಲ್ಲು ಸಹಿತ ಮಳೆಗೆ 100 ಹೆಕ್ಟೇರ್‌ಗೂ ಅಧಿಕ ಪ್ರಮಾಣದಲ್ಲಿ ಪಪ್ಪಾಯಿ, ದ್ರಾಕ್ಷಿ, ಹೂ, ಹಣ್ಣು ಮತ್ತಿತರ ವಾಣಿಜ್ಯ ಬೆಳೆಗೆ ತೀವ್ರ ಹಾನಿಯಾಗಿ 2 ಕೋಟಿ ರೂ.ಗೂ ಅಧಿಕ ಮೊತ್ತದ ಬೆಳೆ ನಷ್ಟ ಆಗಿತ್ತು. ತೋಟಗಾರಿಕಾ ಇಲಾಖೆ ಬೆಳೆ ನಷ್ಟ ರೈತರ ವಿವರ ಸರ್ಕಾರಕ್ಕೆ ಸಲ್ಲಿಸಿ ತಿಂಗಳೇಕಳೆದರೂ ಪರಿಹಾರ ಸಿಕ್ಕಿಲ್ಲ. ಬೆಳೆ ಕಳೆದುಕೊಂಡು ರೈತರು ತೋಟಗಾರಿಕಾ ಕಚೇರಿಗೆ, ಬ್ಯಾಂಕ್‌ಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಗೆ ಮುದುಡಿದ ಹಿಪ್ಪುನೇರಳೆ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ಶನಿವಾರ ವ್ಯಾಪಕ ಆಲಿಕಲ್ಲು ಮಳೆ ಬಿದ್ದು ಅಪಾರ ಪ್ರಮಾಣದ ರೇಷ್ಮೆ ಕೃಷಿಗೆ ಬಳಸುವ ಹಿಪ್ಪುನೇರಳೆ ಸೊಪ್ಪು ಮುದುಡಿ ಹೋಗಿದೆ. ಇದರಿಂದ ರೇಷ್ಮೆಹುಳು ಸಾಕಾಣಿಕೆಗೆ ಮಳೆ ಅಡ್ಡಿಯಾಗಿದ್ದು ಗುಣಮಟ್ಟದ ರೇಷ್ಮೆ ಸೊಪ್ಪು ಸಿಗದೇ ರೈತರು ಇನ್ನಿಲ್ಲದ ರೀತಿ ತೊಂದರೆ ಅನುಭವಿಸುವಂತಾಗಿದೆ.