ಕಲಬುರಗಿ: ಸೂರ್ಯನಗರಿ ಎಂದೇ ಖ್ಯಾತಿ ಗಳಿಸಿರುವ ಕಲಬುರಗಿ ನಗರ ಕಳೆದೆರಡು ದಿನಗಳಿಂದ ಬಿಸಿಲಿನ ತಾಪಕ್ಕೆ ಕಾದು ಹೆಂಚಾದಂತಾಗಿದೆ. ಬಿಸಿಲಿನ ತಾಪ, ಝಳಕ್ಕೆ ಜನರು ತೀವ್ರ ತೊಂದರೆ ಪಡುವಂತಾಗಿದೆ. ಉಷ್ಣಗಾಳಿ ಇಲ್ಲಿನ ಜನರ ಜೀವನವನ್ನೇ ಹಿಂಡಿ ಹಿಪ್ಪೆ ಮಾಡಿದೆ.
ಕಲಬುರಗಿ ಸೇರಿ ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ಬಿಸಿಲಿನ ಪ್ರಖರತೆ 40ರಿಂದ 44 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಿದೆ. ಏಪ್ರಿಲ್‌ನಲ್ಲಿಯೇ ಈ ಗತಿಯಾದರೇ ಮೇ ತಿಂಗಳಲ್ಲಿ ಈ ಬಾರಿ 46 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಮೀರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಈ ಮಧ್ಯೆ, ಅಕಾಲಿಕ ಮಳೆ ಏನಾದರೂ ಸುರಿದರೆ ಬಿಸಿಲಿನ ಪ್ರಖರತೆ ಕೊಂಚ ಕಡಿಮೆಯಾಗಬಹುದು.
ಕಲಬುರಗಿಯಲ್ಲಿ ಶನಿವಾರದಂದು ರಾಜ್ಯದಲ್ಲಿಯೇ ಅತ್ಯಧಿಕ 44.3 ಡಿಗ್ರಿ ಸೆಲ್ಸಿಯಸ್ ಸರಾಸರಿ ಉಷ್ಣತೆ ದಾಖಲಾಗಿದ್ದರೆ, ಭಾನುವಾರದಂದು 42.5 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿದೆ. ಇದು ಕಳೆದ ವರ್ಷಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.
ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ರಾತ್ರಿಯ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇದ್ದು, ರಾತ್ರಿ ಹೊತ್ತಲ್ಲೂ ಉಷ್ಣತೆ ಪ್ರಮಾಣ ಗಣನೀಯವಾಗಿ ಏರಿಕೆ ಆಗಿರುವುದರಿಂದ ಜನರ ಬದುಕು ದುರ್ಬರ ಎನಿಸಿದೆ. ಭಾನುವಾರ ರಾಯಚೂರಿನಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚಿನ ಉಷ್ಣಾಂಶ 43 ಡಿ.ಸೆ. ದಾಖಲಾಗಿತ್ತು. ಇದು ಕಳೆದ ವರ್ಷಕ್ಕಿಂತ 2.3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.
ಭಾನುವಾರ ದಾಖಲಾದ ಉಷ್ಣಾಂಶ(ಡಿ.ಸೆ.)
ರಾಯಚೂರು: 43.0
ಕಲಬುರಗಿ: 42.5
ಬಳ್ಳಾರಿ: 42.0
ಕೊಪ್ಪಳ: 41.2
ಬೀದರ: 40.4
ವಿಜಯಪುರ: 40.6
ಬಾಗಲಕೋಟೆ: 40.6
ದಾವಣಗೆರೆ: 38.5
ಧಾರವಾಡ: 39.2
ಗದಗ: 39.7
ಹಾವೇರಿ: 39.4