Advertisement

ಹಾರಾಡಿ ಶಾಲಾ ಹೇಮಂತದ ಸಂಭ್ರಮ

02:10 PM Nov 24, 2017 | |

ಪುತ್ತೂರು: ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕುಸಿತವಾಗುತ್ತಿದೆ ಎಂಬ ಅಂಕಿ-ಅಂಶ ಇದ್ದರೂ ವರ್ಷಂಪ್ರತಿ ಮಕ್ಕಳ ದಾಖಲಾತಿಯಲ್ಲಿ ಏರಿಕೆ ಕಂಡಿರುವುದಲ್ಲದೇ, ಮಕ್ಕಳ ಶ್ರೇಯೋಭಿವೃದ್ಧಿಗೆ ಪೂರಕ ಕಾರ್ಯಚಟುವಟಿಕೆ ಹಮ್ಮಿಕೊಳ್ಳುತ್ತಿರುವ ಹಾರಾಡಿ ಸರಕಾರಿ ಪ್ರಾಥಮಿಕ ಶಾಲೆ ಪ್ರಗತಿಯ ದಿಶೆಯಲ್ಲಿ ಮಾದರಿಯಾದದು ಎಂದು ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ಹೇಳಿದರು. 

Advertisement

ಹಾರಾಡಿ ಉನ್ನತ ಹಿ.ಪ್ರಾ.ಶಾಲೆಯಲ್ಲಿ ಗುರುವಾರ ನಡೆದ ಹೇಮಂತದ ಸಂಭ್ರಮ-2017-18ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಗರಸಭೆ ವತಿಯಿಂದ ಶಾಲೆಯ ಮೂಲ ಸೌಕರ್ಯ ಒದಗಿಸಲು ಪೂರ್ಣ ಸಹಕಾರ ನೀಡಿದ್ದು, ಅಗತ್ಯ ಬೇಡಿಕೆಗೆ ಮುಂದೆಯು ಸ್ಪಂದಿಸಲಾಗುತ್ತದೆ ಎಂದು ಅವರು ಹೇಳಿದರು.

ಕಲಿಕೆ ಸ್ವಾಭಾವಿಕ ಪ್ರಕ್ರಿಯೆ
ವಿಶ್ರಾಂತ ಪ್ರಾಂಶುಪಾಲ ಡಾ| ಎಚ್‌. ಮಾಧವ ಭಟ್‌ ಮಾತನಾಡಿ, ಕಲಿಕೆ ಸ್ವಾಭಾವಿಕ ಪ್ರಕ್ರಿಯೆ. ಕಲಿಯುತ್ತಿರುವ ಮಕ್ಕಳಿಗೆ ಅದರ ವೇಗವನ್ನು ಹೆಚ್ಚಿಸುವ, ವಿನ್ಯಾಸವನ್ನು ವೃದ್ಧಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದ ಅವರು, ಮಕ್ಕಳಿಗೆ ಮನೆಯಲ್ಲಿರುವಾಗ ಮನೆಯ, ಶಾಲೆಯಲ್ಲಿರುವಾಗ ಶಾಲೆಯ ಅನುಭವ ಕೊಡುವ ಶಿಕ್ಷಣದ ಅಗತ್ಯವಿದೆ ಎಂದರು.

ಶಿಕ್ಷಕರ ಕೆಲಸ ಪಾಠ ಹೇಳುವುದು ಎಂಬ ಭಾವನೆ ಇದೆ. ಅದು ಅಲ್ಲ. ಹೇಗೆ ಕಲಿಯಬೇಕು ಅನ್ನುವುದನ್ನು ತಿಳಿಸುವುದು. ಪರಿಸ್ಥಿತಿಯನ್ನು ನಿಭಾಯಿಸುವುದು, ಪ್ರತಿ ಸ್ಪಂದಿಸುವುದು ಹೇಗೆ ಎನ್ನುವುದರ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕಿದೆ ಎಂದು ಅವರು ವಿಶ್ಲೇಷಿಸಿದರು.

ಸಭಾಧ್ಯಕ್ಷತೆ ವಹಿಸಿದ್ದ ನಗರಸಭೆ ಸದಸ್ಯೆ ಜಯಲಕ್ಷ್ಮೀ ಸುರೇಶ್‌ ಮಾತನಾಡಿ, ಶಾಲಾ ಪ್ರಗತಿಗೆ, ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉದ್ಯಮಿ ರಮಾನಂದ ನಾಯಕ್‌, ಪ್ರಗತಿ ಎಜುಕೇಶನಲ್‌ ಫೌಂಡೇಶನ್‌ ಸ್ಥಾಪಕಾಧ್ಯಕ್ಷ ಗೋಕುಲ್‌ನಾಥ್‌ ಪಿ.ವಿ ಶುಭಕೋರಿದರು.

Advertisement

ಕ್ಷೇತ್ರ ಸಂಪನ್ಮೂಲ ಕೇಂದ್ರದ ಸವಿತಾ ಜಿ., ಸಿಆರ್‌ಪಿ ನಾರಾಯಣ ಡಿ. ಪುಣಚ, ವಿಜಯ ಕುಮಾರ್‌, ಶಾಲಾ ನಾಯಕಿ ದಿಶಾಪರ್ಲ್ ಮಸ್ಕರೇನ್ಹಸ್‌ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಮುದರ ಎಸ್‌. ವರದಿ ವಾಚಿಸಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಪ್ರತಿಮಾ ಯು.ರೈ ಸ್ವಾಗತಿಸಿ, ಶಿಕ್ಷಕ ರಾಮಣ್ಣ ರೈ ವಂದಿಸಿದರು. ಸಹ ಶಿಕ್ಷಕ ಪ್ರಶಾಂತ್‌ ಪಿ.ಎಲ್‌ ನಿರೂಪಿಸಿದರು.

ಶಿಕ್ಷಕರಾದ ಪ್ರಿಯಾ ಕುಮಾರಿ, ಶುಭಲತಾ, ಯಶೋದಾ ಐ., ಲಲ್ಲಿ ಡಿ’ಸೋಜಾ, ವಿಜಯ ಕೆ., ಯುಮುನಾ ಬಿ., ಗಂಗಾವತಿ ಪಿ., ಸರೋಜಿನಿ ಎನ್‌., ಸೆಲಿನ್‌ ಡಿ’ಸೋಜಾ, ಮಹಾಲಕ್ಷ್ಮೀ ಭಟ್‌, ಶುಭಲತಾ ಕೆ., ಅಶ್ವಿ‌ತಾ ಎ.ಎಸ್‌. ಅವರು ವಿವಿಧ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಅನಂತರ ಶಾಲಾ ಮಕ್ಕಳಿಂದ ನೃತ್ಯ ಸಂಭ್ರಮ, ಗಾನ ಸಂಭ್ರಮ, ನಾಟ್ಯ ಸಂಭ್ರಮ, ನಾಟಕ ಸಂಭ್ರಮ ನಡೆಯಿತು.

ಮಕ್ಕಳ ಬಾಲ್ಯ ಕಸಿಯದಿರಿ
ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಬಾರದು. ಹೆತ್ತವರು ಅಂಕ ಗಳಿಕೆಯ ಹಪಾಹಪಿಕೆಯನ್ನು ಹೇರಬಾರದು. ಮಕ್ಕಳ ಮನಸ್ಸಿನಲ್ಲಿ ಬಲತ್ಕಾರದ ಮನೋಭಾವವನ್ನು ಮೂಡಿಸಿದರೆ, ಅದು ಹೆಮ್ಮರವಾಗಿ ಬೆಳೆದು ಸಮಾಜ ವಿದ್ರೋಹಿಗಳಾಗುವ ಅಪಾಯವಿದೆ. ಮಗು ಸೋತಿದೆ ಎಂದರೆ ಆಗ ಹೆತ್ತವರ ಅಗತ್ಯ ಹೆಚ್ಚು ಬೇಕು ಎಂದರ್ಥ. ಸೋತಾಗ ಹೇಗಿರಬೇಕು ಅನ್ನುವುದನ್ನು ಹೆತ್ತವರು ಕಲಿಸಬೇಕು. ಹಾಗಾಗಿ ಮನೆ ಡೆಮೋಕ್ರಾಟಿಕ್‌ ಸೊಸೈಟಿಯಂತಿರಬೇಕು ಎಂದು ಡಾ| ಎಚ್‌. ಮಾಧವ ಭಟ್‌ ಅಭಿಪ್ರಾಯಿಸಿದರು.

ಶ್ಲಾಘನೀಯ
ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್‌. ಮಾತನಾಡಿ, ಊರಿನ ಸಹಕಾರ, ಶಿಕ್ಷಕರ ಪ್ರಯತ್ನ ಇದ್ದಲ್ಲಿ ಶಾಲೆ ಪ್ರಗತಿ ಕಾಣಲು ಸಾಧ್ಯವಿದೆ. ಸರಕಾರಿ ಶಾಲೆಯಲ್ಲಿಯೇ 400ಕ್ಕೂ ಮಿಕ್ಕಿ ಮಕ್ಕಳಿದ್ದು, ಪ್ರತಿ ವರ್ಷ ಪ್ರಗತಿಯತ್ತ ದಾಪುಗಾಲಿಡುತ್ತಿರುವುದು ಶ್ಲಾಘನೀಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next