Advertisement

“ಹೈಕಮಾಂಡ್‌ಗೆ ಕಪ್ಪ’ಚರ್ಚೆಗೆ ಬಿಜೆಪಿ ಪಟ್ಟು

03:45 AM Feb 15, 2017 | Harsha Rao |

ವಿಧಾನ ಪರಿಷತ್‌: ಸಚಿವರು ಹಾಗೂ ಶಾಸಕರ ನಿವಾಸದ ಮೇಲೆ ಐಟಿ ದಾಳಿ, ಹೈಕಮಾಂಡ್‌ಗೆ ಕಪ್ಪ, ಕಿಕ್‌ಬ್ಯಾಕ್‌ ಆರೋಪ ಸಂಬಂಧ ನಿಲುವಳಿ ಸೂಚನೆಯಡಿ ಚರ್ಚಿಸಲು ಬಿಜೆಪಿ ಸದಸ್ಯರು ಅವಕಾಶ ಕೋರಿದಾಗ, ಇದಕ್ಕೆ ಆಡಳಿತಾರೂಢ ಕಾಂಗ್ರೆಸ್‌ ಸದಸ್ಯರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ಆರೋಪ- ಪ್ರತ್ಯಾರೋಪಗಳು ನಡೆದು, ಸದನದಲ್ಲಿ ಕೆಲಕಾಲ ಕೋಲಾಹಲ ಉಂಟಾಯಿತು.
ಅಂತಿಮವಾಗಿ ನಿಲುವಳಿ ಸೂಚನೆಗೆ ಅವಕಾಶ ಸಿಗದಿದ್ದಾಗ, ಅದನ್ನು ವಿರೋಧಿಸಿ ಪ್ರತಿಪಕ್ಷ ಬಿಜೆಪಿ ಸಭಾತ್ಯಾಗ ಮಾಡಿತು. ಚರ್ಚೆ ಸಂಬಂಧ ಬಿಜೆಪಿ-ಕಾಂಗ್ರೆಸ್‌ ಪಟ್ಟು ಹಿಡಿದಿದ್ದರಿಂದಾಗಿ ಸದನವನ್ನು ಮುಂದೂಡಲಾಯಿತು. ಮತ್ತೂಮ್ಮೆ ಸದನ ಆರಂಭವಾದಾಗಲೂ ಗದ್ದಲ ಮುಂದುವರಿಯಿತು.

Advertisement

ಹೀಗಾಗಿ, ಸಭಾಪತಿ ಡಿ.ಎಚ್‌.ಶಂಕರಮೂರ್ತಿ ನಿಲುವಳಿ ಸೂಚನೆಯನ್ನೇ ತಿರಸ್ಕರಿಸಿದರು. ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರೆ, ಜೆಡಿಎಸ್‌ ಸದಸ್ಯರು ಕಾಂಗ್ರೆಸ್‌ ಹೈಕಮಾಂಡ್‌ ಕಪ್ಪ ನೀಡಿರುವ ಬಗ್ಗೆ ಡೈರಿ ಉಲ್ಲೇಖ ಹಾಗೂ ಸಿಡಿ ಕುರಿತು ತನಿಖೆಯಾಗಬೇಕು ಎಂದು ಆಗ್ರಹಿಸಿ ಧರಣಿ ನಡೆಸಿದರು. ತಾಂತ್ರಿಕ ದೋಷ ಕಾರಣಕ್ಕೆ ಸೋಮವಾರ
ನಿಲುವಳಿ ಸೂಚನೆ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿಯ ಬಿ.ಜೆ.ಪುಟ್ಟಸ್ವಾಮಿ, ಅದೇ ವಿಷಯ ಪ್ರಸ್ತಾಪಿಸಿದಾಗ ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಮಾತನಾಡಿ, “ಸಚಿವರ ಮನೆ, ಕಚೇರಿ ಮೇಲೆ ಐಟಿ ದಾಳಿ ನಡೆದಿದ್ದು, ಈ ವೇಳೆ 13 ಕೆ.ಜಿ.ಚಿನ್ನ, 162 ಕೋಟಿ ರೂ.ಹಣ ಪತ್ತೆಯಾಗಿದ್ದು ಸಚಿವರು ಕೂಡಲೇ ರಾಜಿನಾಮೆ ನೀಡಬೇಕು’ ಎಂದರು.

ಆಗ ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ ಸೀಡಿ ತೋರಿಸುತ್ತಾ “ಸೀಡಿ ಬಗ್ಗೆಯೂ ಚರ್ಚೆ ನಡೆಯಬೇಕು’ ಎಂದು ಟಾಂಗ್‌ ನೀಡಿದರು. ಆಗ, ಕಾಂಗ್ರೆಸ್‌- ಬಿಜೆಪಿ ಸದಸ್ಯರ ಆರೋಪಗಳಿಂದ ಗದ್ದಲ ಸೃಷ್ಟಿಯಾಗಿದ್ದರಿಂದ ಸಭಾಪತಿ ಸ್ಥಾನದಲ್ಲಿದ್ದ
ಉಪಸಭಾಪತಿ ಮರಿತಿಬ್ಬೇಗೌಡ ಎದ್ದು ನಿಲ್ಲುವ ಮೂಲಕ ಸದನವನ್ನು ನಿಯಂತ್ರಿಸಬೇಕಾಯಿತು. ಗದ್ದಲ ಹೆಚ್ಚಾಗಿದ್ದರಿಂದ ಸದನವನ್ನು ಮುಂದೂಡಲಾಯಿತು.

ಮಧ್ಯಾಹ್ನ 12.25ರ ಹೊತ್ತಿಗೆ ಮತ್ತೆ ಕಲಾಪ ಆರಂಭವಾದಾಗ ಸಭಾಪತಿ ಡಿ.ಎಚ್‌. ಶಂಕರಮೂರ್ತಿ, ಎರಡು- ಮೂರು ನಿಮಿಷದಲ್ಲಿ ಪೂರ್ವಭಾವಿಯಾಗಿ ಪ್ರಸ್ತಾಪಿಸುವಂತೆ ಪುಟ್ಟಸ್ವಾಮಿ ಅವರಿಗೆ ಸೂಚಿಸಿದರು. ಇದಕ್ಕೆ ಆಕ್ಷೇಪಿಸಿದ
ಸಭಾನಾಯಕ ಡಾ.ಜಿ.ಪರಮೇಶ್ವರ್‌, “ದಿನಾಂಕ ದಾಖಲಿಸಿರುವುದನ್ನು ಹೊರತುಪಡಿಸಿದರೆ ಮಂಗಳವಾರದ ನಿಲುವಳಿ ಸೂಚನೆಯಲ್ಲೂ ಅದೇ ವಿಚಾರವಿದ್ದು ವ್ಯತ್ಯಾಸವಿಲ್ಲ. ಸದನದ ಹೊರಗೆ ನಡೆದ ಸಂಗತಿ ಬಗ್ಗೆ ನೇರವಾಗಿ ಚರ್ಚಿಸಲು
ಅವಕಾಶವಿಲ್ಲವೆಂದ ಮೇಲೆ ಅದೇ ವ್ಯಕ್ತಿ ಅದೇ ವಿಚಾರ ಮಂಡಿಸಲು ಅವಕಾಶ ನೀಡುವುದು ಸರಿಯಲ್ಲ’ ಎಂದರು.

ರಾಜಕಾರಣ ಬೇಡ: ಪುಟ್ಟಸ್ವಾಮಿ ಮಾತು ಮುಂದುವರಿಸಿದಾಗ, ಕಾಂಗ್ರೆಸ್‌ನ ಬಸವರಾಜ ಪಾಟೀಲ್‌ ಇಟಗಿ, ಐವಾನ್‌ ಡಿಸೋಜಾ, ನಾರಾಯಣಸ್ವಾಮಿ ಇತರರು ಸೀಡಿ ಪ್ರದರ್ಶಿಸಿದರು. “ಸದಸ್ಯರು ಪ್ರಸ್ತಾಪಿಸಿರುವ ವಿಷಯ ವ್ಯಕ್ತಿ ಹಾಗೂ
ಐಟಿ, ಇಡಿಗೆ ಸಂಬಂಧಪಟ್ಟಿದ್ದಾಗಿದೆ. ಆರ್ಥಿಕ ಅಪರಾಧಗಳಲ್ಲಿ ತಪ್ಪಾಗಿದ್ದರೆ ದಂಡ ಪಾವತಿಸುತ್ತಾರೆ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ಈ ವಿಷಯ ಪ್ರಸ್ತಾಪಿಸಿ ರಾಜಕಾರಣ ಮಾಡಬಾರದು.

Advertisement

ಬಿಜೆಪಿ ಮುಖಂಡರ ಆರೋಪಗಳಿಗೆ ಸೀಡಿಯಲ್ಲಿ ಉತ್ತರವಿದೆ’ ಎಂದು ಕೆಲ ಸಚಿವರು ಸೋಮವಾರ ಬಿಡುಗಡೆ ಮಾಡಿದ ಸೀಡಿ ಬಗ್ಗೆ ಪರೋಕ್ಷವಾಗಿ ಉಲ್ಲೇಖೀಸಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಧೋರಣಿ ಖಂಡಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಗದ್ದಲದ ನಡುವೆಯೇ ಸಭಾಪತಿ ಶಂಕರಮೂರ್ತಿ, “ಚರ್ಚೆ ಕುರಿತಂತೆ ಎರಡೂ ಪಕ್ಷಗಳ ಅಭಿಪ್ರಾಯ ಆಲಿಸಲಾಗಿದ್ದು ನಿಯಮ 59ರಡಿ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದ್ದೇನೆ’ ಎಂದು ಪ್ರಕಟಿಸಿ ವಿಷಯಕ್ಕೆ ತೆರೆ ಎಳೆದರು.

Advertisement

Udayavani is now on Telegram. Click here to join our channel and stay updated with the latest news.

Next