ನಾವಿಬ್ಬರೂ ಪ್ರೀತಿಸಿ ಮದುವೆಯಾದವರು. ಇಬ್ಬರಿಗೂ ನಮ್ಮದೇ ಆದ ಕಂಡೀಶನ್‌ಗಳಿದ್ದವು. ಯಾವುದೇ ಹುಡುಗನ ಮುಂದೆ ಸಿಂಗರಿಸಿಕೊಂಡು ನಿಂತು, ಉಪ್ಪಿಟ್ಟು ಹಂಚದೇ, ಮದುವೆಯಾಗಬೇಕು ಎಂಬುದು ಅವಳ ಆಸೆ. ಯಾವ ಹುಡುಗಿಯನ್ನು ಮೊದಲು ನೋಡುತ್ತೇನೋ ಅವಳನ್ನೇ ಮದುವೆಯಾಗಬೇಕು ಎಂಬುದು ನನ್ನ ನಿಲುವಾಗಿತ್ತು. ನಾನಂದುಕೊಂಡಂತೆ, ನಮ್ಮ ಮನೆಯವರೊಂದಿಗೆ ಆಕೆಯನ್ನು ನೋಡಲು ಅವರ ಮನೆಗೆ ಹೋಗಿದ್ದೆ. ಅವಳಂದುಕೊಂಡಂತೆ ಅವಳು “ವಿಚಾರಣೆ’ಗೆ ಸಿಂಗಾರವಾಗಿರಲೂ ಇಲ್ಲ. ನಂತರ ಶತಾಯಗತಾಯ ಎರಡೂ ಮನೆಯವರನ್ನು ಒಪ್ಪಿಸಿ ಶಾಸ್ತ್ರೋಕ್ತವಾಗಿ ಮದುವೆಯೂ ಆಯಿತು. ಅದರಲ್ಲಿಯೂ ಅಪ್ಪನ ಆಸೆಯಂತೆಯೇ ಮದುವೆ ನಡೆದದ್ದು ಜಗತ್ತು ಗೆದ್ದ ಖುಷಿ.
ಮದುವೆ ಮುಗಿದು ಎಂಟು ತಿಂಗಳಾಗಿತ್ತು. ನನ್ನ ಶ್ರೀಮತಿ ಕಡೆಯ ಸಂಬಂಧಿಯೊಬ್ಬರು ನಮ್ಮ ಮನೆಗೆ ವಧು ಪರೀಕ್ಷೆಗೆಂದು ಬಂದಿದ್ದರು. ಅಂದರೆ, ನಮ್ಮ ಸಂಬಂಧಿಯೊಬ್ಬರ ಮಗಳನ್ನು ನಮ್ಮ ಮನೆಯಲ್ಲಿ ಗಂಡಿನ ಕಡೆಯವರು ನೋಡಿ ಹೋಗುವುದೆಂದು ನಿರ್ಧಾರವಾಗಿತ್ತು. ಹುಡುಗನ ಕಡೆಯವರು ಹುಡುಗಿಯನ್ನು ಹೆಸರು ಕೇಳುವುದು, ವಿದ್ಯಾಭ್ಯಾಸ, ಮನೆದೇವರು, ಕೈಬೆರಳು, ಕಾಲು ಹಿಮ್ಮಡಿ ಇತ್ಯಾದಿ ನೋಡುವ ಅಪ್ಪಟ ಪರೀಕ್ಷೆಯೇ ಅದಾಗಿತ್ತು. ಒಬ್ಬ ಹೆಣ್ಣುಮಗಳನ್ನು ಹೀಗೂ ಒರೆಹಚ್ಚಿ ಪರೀಕ್ಷಿಸುವ ಕಾಲ ಇನ್ನೂ ಇದೆಯಲ್ಲ? ಇದರಿಂದ ಯಾವ ಗುಣಾವಗುಣಗಳ ಅಳತೆ ಸಿಕ್ಕೀತು? ಎಂಬ ಪ್ರಶ್ನೆಗಳು ನನ್ನಲ್ಲಿ ಮೂಡಿ ಒಂಥರಾ ಬೇಜಾರು ಮತ್ತು ನಗು ಮಿಶ್ರಿತ ಭಾವ ಜೊತೆಯಾಯಿತು.
ನಗುವಿಗೆ ಕಾರಣವಾದದ್ದು ನಮ್ಮ ಮದುವೆಯ ಕ್ಷಣಗಳನ್ನು ನೆನಪಿಸಿಕೊಂಡು. ಮದುವೆಗೂ ಮೊದಲು ನನ್ನವಳಿಗೆ ಒಂದೆರಡು ಮೆಸೇಜ್ ಕಳಿಸಿದ್ದೆ. “ಏನೇ ನಿನಗೆ ಹಾಡಾಕ್ ಬರುತ್ತಾ? ಕೈಕಾಲು ನೆಟ್ಟಿಗಿದಾವಾ?’ ಅಂತ. ಅದಕ್ಕವಳು “ಓಹೋ, ಹಾಡೋದಷ್ಟೇ ಯಾಕೆ ಡ್ಯಾನ್ಸು ಕೂಡ ಬರುತ್ತೆ. ಸ್ಟೆಪ್ ಹಾಕ್ಲಾ? ಕೈಕಾಲು ಅಷ್ಟೆ ಅಲ್ಲ ಕಣಪ್ಪಾ, ಕಣ್ಣು ಮೂಗೂ ನೆಟ್ಟಗಿದಾವೆ’ ಎಂಬ ಪಂಚಿಂಗ್ ಮೆಸೇಜ್ ಪ್ರತಿಕ್ರಿಯಿಸಿ ಸೆಲ್ಫಿ ಕ್ಲಿಕ್ಕಿಸಿ ಫೊಟೋನೂ ಕಳಿಸಿದ್ದಳು. ಆಮೇಲೆ ಇಬ್ಬರೂ ಕೆಲಸದಲ್ಲಿ ತೊಡಗಿಕೊಂಡು, ಅವರೆಲ್ಲ ಹೋದ ಮೇಲೆ ಮತ್ತೆ ಶುರುವಾಗಿತ್ತು ನಮ್ಮ ಕೀಟಲೆ. ನಮ್ಮ ಮೆಸೇಜ್‌ಗಳ ಈ ವಿಷಯ ಮನೆಯವರಿಗೆ ಗೊತ್ತಾಗಿ ಅವರೂ ಈ ತಮಾಷೆಯಾಟದಲ್ಲಿ ಭಾಗಿಯಾದರು. ಶಾಸ್ತ್ರಕ್ಕೆಂಬಂತೆ ನನ್ನ ಕಡೆ ಒಂದಿಬ್ಬರು ಸೇರಿಕೊಂಡರು. ಅವಳ ಕಡೆ ನಾಲ್ಕಾರು ಜನ. ಅವಳು ಸೀರೆ ಉಟ್ಕೊಂಡು ಕಾಫಿ ತರೋದಂತೆ. ನಾನು ಕಿರುಗಣ್ಣಲ್ಲಿ ಅವಳನ್ನು ನೋಡೋದಂತೆ. ಅವಳು ತುಟಿಯಂಚಲ್ಲಿ ನಗೋದಂತೆ. ಹೆಸರು ಕೇಳ್ಳೋದು. ಹಾಡೋಕೆ ಬರುತ್ತೇನಮ್ಮ? ಅಂತ ಕೇಳಿದ್ದೆ ತಡ “ಬಾರೊ ಬಾರೊ ಕಲ್ಯಾಣ ಮಂಟಪಕ್ಕೆ ಬಾ..’ ಅಂತ ಹಾಡಿದ್ದು. ನಾನು ಯಾವಾಗಲೋ ರೆಡಿ ಕಣೇ, ಬರದಿದ್ದರೂ ಕರೆದುಕೊಂಡು ಹೋಗ್ತಿàನಿ ಅಂದಿದ್ದಕ್ಕೆ ಹೋಗೋದು ಹೋಗ್ತಿàರಿ, ಜ್ಯೂಸ್ ಕುಡ್ಕೊಂಡು ಹೋಗಿ ಅಂತ ಹೇಳಿ ಉಪ್ಪು ಹಾಕಿದ ಜ್ಯೂಸ್ ಕೊಟ್ಟು, ನಾನದನ್ನು ಗಟಗಟ ಕುಡಿದು, ಸಿಕ್ಕಾಪಟ್ಟೆ ಕೆಮ್ಮಿದ್ದಕ್ಕೆ ಹುಡುಗನಿಗೆ ಕೆಮ್ಮು ಕಾಯಿಲೆ, ನಾನು ಮದುವೆಯಾಗಲ್ಲ ಅಂದದ್ದು.. ಅಯ್ಯೋ ಅಯ್ಯೋ ನಕ್ಕೂ ನಕ್ಕೂ ಸಾಕಾಗಿತ್ತು.
– ಸೋಮು ಕುದರಿಹಾಳ