ಲಾಹೋರ್ : ದೇಶದ ಭದ್ರತೆಗೆ ಅಪಾಯ ಇದೆ ಎಂಬ ಕಾರಣಕ್ಕೆ ಗೃಹ ಬಂಧನಕ್ಕೆ ಗುರಿಯಾಗಿರುವ ಮುಂಬಯಿ ದಾಳಿಯ ಮಾಸ್ಟರ್ ಮೈಂಡ್, ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಇತರ ನಾಲ್ವರು ತಮ್ಮ ಗೃಹ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಲಾಹೋರ್ ಹೈಕೋರ್ಟ್ ಇಂದು ವಿಚಾರಣೆಗೆ ಎತ್ತಿಕೊಳ್ಳಲಿದ್ದು ಇವರನ್ನು ಬಂಧಮುಕ್ತಗೊಳಿಸಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸಲಿದೆ.
ಲಾಹೋರ್ ಹೈಕೋರ್ಟಿನ ಜಸ್ಟಿಸ್ ಸರ್ದಾರ್ ಮುಹಮ್ಮದ್ ಶಮೀಮ್ ಖಾನ್ ಅವರು ಅರ್ಜಿಗಳ ವಿಚಾರಣೆಯನ್ನು ನಡೆಸಲಿದ್ದಾರೆ.
ಹಾಫೀಜ್ ಜತೆಗೆ ತಮ್ಮ ಗೃಹ ಬಂಧನವನ್ನು ಪ್ರಶ್ನಿಸಿರುವ ಇತರ ಮೂವರೆಂದರೆ ಅಬ್ದುರ್ ರೆಹಮಾನ್ ಅಬೀದ್, ಅಜಿ ಕಾಶೀಫ್ ಹುಸೇನ್ ಮತ್ತು ಅಬ್ದುಲ್ಲಾ ಉಬೇದ್. ಇವರ ವಕೀಲರು ಎ ಕೆ ಡೋಗಾರ್.
ಈ ಮೊದಲು ಲಾಹೋರ್ ಹೈಕೋರ್ಟ್, ಸಯೀದ್ ಗೃಹ ಬಂಧನದ ಅಧಿಸೂಚನೆಯನ್ನು ತನ್ನ ಮುಂದೆ ಮಂಡಿಸಲಾಗಿಲ್ಲ ಎಂಬ ತಾಂತ್ರಿಕ ಕಾರಣದ ನೆಲೆಯಲ್ಲಿ ಹಿರಿಯ ವಕೀಲ ಎರೂಮ್ ಸಜ್ಜದ್ ಗುಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತ್ತು.
ಹಫೀಜ್ ಸಯೀದ್ ಮತ್ತು ಇತರ ನಾಲ್ವರನ್ನು ಪಾಕ್ ಸರಕಾರ ಕಳೆದ ಜನವರಿ 30ರಂದು ದೇಶದ ಉಗ್ರ ನಿಗ್ರಹ ಕಾಯಿದೆಯಡಿ ಗೃಹ ಬಂಧನದಲ್ಲಿ ಇರಿಸಿದೆ.