ಲಾಹೋರ್ : ಪಾಕ್ ಸರಕಾರದ ಎಲ್ಲ ಎಚ್ಚರಿಕೆಗಳನ್ನು ಕಡೆಗಣಿಸಿ, ಮುಂಬಯಿ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಲಾಹೋರ್‌ನಲ್ಲಿ ತನ್ನ ರಾಜಕೀಯ ಕಚೇರಿಯನ್ನು ತೆರೆದಿದ್ದಾನೆ. ಆತನ ರಾಜಕೀಯ ಪಕ್ಷದ ಹೆಸರು ಮಿಲ್ಲಿ ಮುಸ್ಲಿಮ್ ಲೀಗ್ (ಎಂಎಂಎಲ್).
ಲಷ್ಕರ್ ಎ ತಯ್ಯಬ ಉಗ್ರ ಸಂಘಟನೆ ಸಹ ಸಂಸ್ಥಾಪಕ ಮತ್ತು ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥನಾಗಿರುವ ಹಫೀಜ್ ಸಯೀದ್‌ನನ್ನು 297 ದಿನಗಳ ಗೃಹಬಂಧನದ ಬಳಿಕ ಪಾಕ್ ನ್ಯಾಯಾಲಯ ಬಿಡುಗಡೆ ಮಾಡಿತ್ತು.
ಸಯೀದ್ ನ ಬಿಡುಗಡೆಗೆ ಜಾಗತಿಕ ಆಕ್ರೋಶ ವ್ಯಕ್ತವಾಗಿತ್ತು. ಸಯೀದ್ ನನ್ನು ಈ ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸುವಂತೆ ಪಾಕ್ ಸರಕಾರವನ್ನು ಅಮೆರಿಕ ಮುಲಾಜಿಲ್ಲದೆ ಕೇಳಿಕೊಂಡಿತ್ತು.
ಸಯೀದ್‌ನ ಎಂಎಂಎಲ್ ಪಕ್ಷವನ್ನು ಆತನ ನಿಷೇಧಿತ ಉಗ್ರ ಸಂಘಟನೆಯಾಗಿರುವ ಜೆಯುಡಿ ಇದರ ರಾಜಕೀಯ ಮುಖವೆಂದು ತಿಳಿಯಲಾಗಿದೆ. ಪಾಕ್ ಒಳಾಡಳಿತ ಸಚಿವಾಲಯವು ಎಂಎಂಎಲ್ ನಿಷೇಧಿತ ಲಷ್ಕರ್ ಎ ತಯ್ಯಬ ಉಗ್ರ ಸಂಘಟನೆಯ ಒಂದು ಟಿಸಿಲೆಂದು ಬಣ್ಣಿಸಿದೆ.
ಲಾಹೋರ್‌ನ ಮೊಹ್‌ನೀ ರಸ್ತೆಯಲ್ಲಿನ ಕಟ್ಟಡದಲ್ಲಿ ತನ್ನ ನೂತನ ರಾಜಕೀಯ ಪಕ್ಷದ ಕಾರ್ಯಾಲಯವನ್ನು ಉದ್ಘಾಟಿಸಿದ ಹಫೀಜ್ ಸಯೀದ್, ಆ ಬಳಿಕ ಆ ಪ್ರದೇಶದ ಪೌರರ ಸಮಸ್ಯೆಗಳನ್ನು ಆಲಿಸಿದ್ದಾನೆ ಎಂದು ಪಾಕ್ ದೈನಿಕ ಡಾನ್ ವರದಿ ಮಾಡಿದೆ.