ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಲಷ್ಕರ್-ಎ-ತೊಯ್ಬಾ ಉಗ್ರ, ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನ ಪುತ್ರ ಹಫೀಜ್ ತಲ್ಹಾ ಸಯೀದ್‌ನನ್ನು ಕೇಂದ್ರ ಸರ್ಕಾರ ಶನಿವಾರ “ಘೋಷಿತ ಭಯೋತ್ಪಾದಕ’ ಎಂದು ಘೋಷಿಸಿದೆ.
ಉಗ್ರ ಹಫೀಜ್ ಸಯೀದ್‌ಗೆ ಪಾಕಿಸ್ತಾನದ ಉಗ್ರ ನಿಗ್ರಹ ನ್ಯಾಯಾಲಯವು 32 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಲಷ್ಕರ್ ಉಗ್ರ ಸಂಘಟನೆಯ ಧಾರ್ಮಿಕ ಘಟಕದ ಮುಖ್ಯಸ್ಥನಾಗಿರುವ ತಲ್ಹಾ ಸಯೀದ್ ಭಾರತ ಮತ್ತು ಅಫ್ಘಾನಿಸ್ತಾನದಲ್ಲಿ ಉಗ್ರರ ನೇಮಕ, ದೇಣಿಗೆ ಸಂಗ್ರಹ, ದಾಳಿಗೆ ಸಂಚು ಮತ್ತು ದಾಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಕಾರಣ ಆತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯನ್ವಯ ಕ್ರಮವನ್ನೂ ಕೈಗೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಇದನ್ನೂ ಓದಿ:ಸೋಲಿನ ಸರಣಿಯಲ್ಲಿ ಚೆನ್ನೈ : ಹೈದರಾಬಾದ್ ಪರ ಮಿಂಚಿದ ಅಭಿಷೇಕ್ ಶರ್ಮಾ
ತಲ್ಹಾ ಸಯೀದ್ ಭಾರತ, ಇಸ್ರೇಲ್, ಅಮೆರಿಕ ಮತ್ತು ಅಫ್ಘನ್ ನಲ್ಲಿರುವ ಭಾರತದ ಹಿತಾಸಕ್ತಿಗಳ ವಿರುದ್ಧ ಜಿಹಾದ್ ಪ್ರಚಾರಕ್ಕಾಗಿ ಪಾಕಿಸ್ತಾನದಾದ್ಯಂತ ಇರುವ ಎಲ್ಲ ಲಷ್ಕರ್ ಕೇಂದ್ರಗಳಿಗೆ ಮುಕ್ತವಾಗಿ ಓಡಾಡುತ್ತಿದ್ದಾರೆ ಎಂದೂ ಆರೋಪಿಸಿರುವ ಗೃಹ ಇಲಾಖೆ, ಆತನನ್ನು “ಘೋಷಿತ ಭಯೋತ್ಪಾದಕ’ ಎಂದು ಘೋಷಿಸುತ್ತಿರುವುದಾಗಿ ಹೇಳಿದೆ.