Advertisement

Pakistan Cricket; ಬಾಬರ್ ಅಜಂ- ಮಿಕ್ಕಿ ಆರ್ಥರ್ ವಿರುದ್ಧ ಆರೋಪಗಳ ಸುರಿಮಳೆಗೈದ ಹಫೀಜ್

09:45 AM Feb 22, 2024 | Team Udayavani |

ಇಸ್ಲಮಾಬಾದ್: ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ಗೆ ಮುನ್ನ ಮಾಜಿ ನಾಯಕ ಬಾಬರ್ ಅಜಂ ಮತ್ತು ವಿದೇಶಿ ಕೋಚ್‌ ಗಳಾದ ಮಿಕ್ಕಿ ಆರ್ಥರ್ ಮತ್ತು ಗ್ರಾಂಟ್ ಬ್ರಾಡ್‌ ಬರ್ನ್ ಅವರು ತಂಡದ ಫಿಟ್ನೆಸ್‌ ಗೆ ಕಡಿಮೆ ಆದ್ಯತೆ ನೀಡಿದ್ದರು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟ್ ನಿರ್ದೇಶಕ ಮುಹಮ್ಮದ್ ಹಫೀಜ್ ಆರೋಪಿದ್ದಾರೆ.

Advertisement

ಆಗಿನ ನಾಯಕ ಬಾಬರ್ ನಾಯಕತ್ವದಲ್ಲಿ ಪಾಕಿಸ್ತಾನವು ವಿಶ್ವಕಪ್ ಸೆಮಿಫೈನಲ್ ನಾಕೌಟ್ ಸುತ್ತಿಗೆ ಪ್ರವೇಶಿಸಲು ವಿಫಲವಾಯಿತು. ಒಂಬತ್ತು ಲೀಗ್ ಪಂದ್ಯಗಳಲ್ಲಿ ಐದರಲ್ಲಿ ಸೋತು ಐದನೇ ಸ್ಥಾನ ಪಡೆಯಿತು. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪ್ರವಾಸಗಳ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇತ್ತೀಚೆಗೆ ಹಫೀಜ್ ಅವರ ಒಪ್ಪಂದವನ್ನು ನವೀಕರಿಸಲಿಲ್ಲ. ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಹೀನಾಯ ಪ್ರದರ್ಶನದ ನಂತರ 2023 ರ ಕೊನೆಯಲ್ಲಿ ಹಫೀಜ್ ಅವರನ್ನು ತಂಡದ ನಿರ್ದೇಶಕರನ್ನಾಗಿ ಮಾಡಲಾಯಿತು.

ಅವರು ಅಧಿಕಾರ ವಹಿಸಿಕೊಂಡ ನಂತರ, ಪಾಕಿಸ್ತಾನವು ಮೂರು ಟೆಸ್ಟ್‌ಗಳ ಸರಣಿಯಲ್ಲಿ ವೈಟ್‌ವಾಶ್ ಆಯಿತು. ಕಿವೀಸ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಿಂದ ಕಳೆದುಕೊಂಡರು.

“ನಾನು ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡಾಗ (2023 ರಲ್ಲಿ) ಆಟಗಾರರ ಫಿಟ್ನೆಸ್ ಮಾನದಂಡಗಳ ಕುರಿತು ವರದಿಯನ್ನು ನೀಡಲು ಮತ್ತು ಹೊಸ ಫಿಟ್ನೆಸ್ ಕಟ್ಟುಪಾಡುಗಳನ್ನು ಸಿದ್ಧಪಡಿಸುವಂತೆ ನಾನು ತಂಡದ ತರಬೇತುದಾರರಿಗೆ ಹೇಳಿದ್ದೆ ಎಂದು ಹಫೀಜ್ ಹೇಳಿದರು.

“ಆರು ತಿಂಗಳ ಹಿಂದೆ ಮಾಜಿ ನಾಯಕ (ಬಾಬರ್) ಮತ್ತು ಮುಖ್ಯ ಕೋಚ್ (ಆರ್ಥರ್) ಅವರು ಫಿಟ್ನೆಸ್‌ ಗೆ ಪ್ರಸ್ತುತ ಆದ್ಯತೆಯಲ್ಲ, ಆಟಗಾರರು ಬಯಸಿದಂತೆ ಆಡಲು ಬಿಡಿ ಎಂದು ಅವರು ನನಗೆ ಹೇಳಿದ್ದರು ಎಂದು ಫಿಟ್ನೆಸ್ ಕೋಚ್ ಹೇಳಿದ್ದರು” ಎಂದು ಹಫೀಜ್ ಖಾಸಗಿ ಚಾನೆಲ್‌ ನಲ್ಲಿ ಬಹಿರಂಗಪಡಿಸಿದರು.

Advertisement

“ಆಟಗಾರರ ಫಿಟ್ನೆಸ್ ಪರೀಕ್ಷಿಸಬೇಡಿ ಎಂದು ತಂಡದ ತರಬೇತುದಾರ ನನಗೆ ಹೇಳಿದಾಗ ಇದು ನನಗೆ ಆಘಾತವಾಗಿತ್ತು” ಎಂದು ಹಫೀಜ್ ಹೇಳಿದರು.

ಹಫೀಜ್ ಅವರು ಆಟಗಾರರ ದೇಹದ ಕೊಬ್ಬಿನ ಶೇಕಡಾವಾರು ಮತ್ತು ಸಹಿಷ್ಣುತೆಯ ಮಟ್ಟವನ್ನು ಪರಿಶೀಲಿಸಿದಾಗ ಅದು ಅಂತಾರಾಷ್ಟ್ರೀಯ ಕ್ರಿಕೆಟ್ ಮಾನದಂಡಗಳಿಗಿಂತ ಕಡಿಮೆಯಿತ್ತು ಎಂದು ಹೇಳಿದರು.

“ಆಧುನಿಕ ದಿನದ ಕ್ರಿಕೆಟ್‌ ನಲ್ಲಿ ಫಿಟ್ನೆಸ್ ಎಲ್ಲಾ ತಂಡಗಳಿಗೆ ಪ್ರಮುಖ ಆದ್ಯತೆಯಾಗಿದೆ. ಆಸ್ಟ್ರೇಲಿಯಾದಲ್ಲಿ ಕೆಲವು ಆಟಗಾರರ ಮೇಲೆ ಪರೀಕ್ಷೆ ನಡೆಸಿದಾಗ ಅವರು ಎರಡು ಕಿಮೀ ಓಟವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ” ಎಂದು ಹಫೀಜ್ ಆರೋಪಿಸಿದ್ದಾರೆ.

“ಆಟಗಾರರ ಚರ್ಮದ ಪಟ್ಟು (ದೇಹದ ಕೊಬ್ಬಿನ ಮಟ್ಟ) ಸಾಮಾನ್ಯ ಮಿತಿಗಿಂತ ಒಂದೂವರೆ ಪಾಯಿಂಟ್‌ ಗಳಷ್ಟು ಹೆಚ್ಚಾಗಿದೆ” ಎಂದು ಅವರು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next