Advertisement

ಹದಿನೇಳೆಂಟು: ಹದಿಹರೆಯದವರ ಸಮಸ್ಯೆಯ ಬಗ್ಗೆ ಸಮಾಜದ ಉಪೇಕ್ಷೆಯನ್ನು ಬಿಂಬಿಸುವ ಚಿತ್ರ

03:14 PM Nov 23, 2022 | Team Udayavani |

ಪಣಜಿ: ಕನ್ನಡದ ‘ಹದಿನೇಳೆಂಟು’ ಇಫಿ ಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗದ ಉದ್ಘಾಟನಾ ಚಿತ್ರವಾಗಿ ಪ್ರದರ್ಶಿತವಾದ ಪೃಥ್ವಿ ಕೊಣನೂರು ಅವರ ಚಿತ್ರ.

Advertisement

ಚಿತ್ರದ ಕಥಾವಸ್ತು ಹದಿಹರೆಯದ ಇಬ್ಬರು ವಿದ್ಯಾರ್ಥಿಗಳು ತಮ್ಮ ಕೆಲವು ಖಾಸಗಿ ಗಳಿಗೆಗಳನ್ನು ವಿಡಿಯೋ ಮಾಡಿಕೊಂಡಿರುತ್ತಾರೆ. ಅದು ಇಂಟರ್‌ ನೆಟ್‌ ನಲ್ಲಿ ಸಿಗತೊಡಗಿದಾಗ ಸಮಸ್ಯೆ ಟಿಸಿಲೊಡೆಯುತ್ತದೆ. ಸಂಬಂಧಪಟ್ಟ ಶಾಲೆಯ ಆಡಳಿತ ಮಂಡಳಿ ತಮ್ಮ ಶಾಲೆಯ ಹೆಸರು ಕೆಡುತ್ತದೆಂದು ಅವರಿಬ್ಬರ ಮೇಲೂ ಕ್ರಮ ಕೈಗೊಳ್ಳಲು ನಿರ್ಧರಿಸುತ್ತಾರೆ. ಆ ಸಂದರ್ಭದಲ್ಲಿ ಜಾತಿ, ಆರ್ಥಿಕ ಸ್ಥಿತಿಗತಿ ಎಲ್ಲವೂ ಚರ್ಚೆಗೆ ಬಂದು ಒಟ್ಟೂ ಪರಿಸ್ಥಿತಿಯನ್ನು ಅಸಹನೀಯಗೊಳಿಸುತ್ತದೆ. ಸಮಾಜದ ಬೇಜವಾಬ್ದಾರಿತನಕ್ಕೂ ಇಲ್ಲಿ ಪಾತ್ರವಿದೆ. ಮುಖ್ಯವಾಗಿ ವಿದ್ಯಾರ್ಥಿಗಳಿಬ್ಬರ ಬದುಕನ್ನು ಸಂಕಷ್ಟಕ್ಕೀಡು ಮಾಡುತ್ತದೆ.

ಇಂದಿನ ಸಾಮಾಜಿಕ ಮಾಧ್ಯಮಗಳ ಜಗತ್ತಿನಲ್ಲಿ ಆಗುತ್ತಿರುವ ಪ್ರಮಾದಗಳ ಹಾಗೂ ಹದಿಹರೆಯದ ಮನಸ್ಸುಗಳಿಗೆ ದೊರಕಬೇಕಾದ ಸರಿಯಾದ ಸಲಹೆ, ಸಮಾಲೋಚನೆಗಳ ಕೊರತೆಯನ್ನೂ ಎತ್ತಿ ಹಿಡಿಯುವಂಥ ಚಿತ್ರವಿದು. ಈ ಚಿತ್ರದ ಕುರಿತಾಗಿ ಇಫಿ ಚಿತ್ರೋತ್ಸವದಲ್ಲಿ ಮಾತನಾಡಿದ ಪೃಥ್ವಿ ಕೊಣನೂರು,  ʼನನ್ನ ಚಿತ್ರ ಸಮಾಜದ ಅಜಾಗರೂಕತೆ, ಉಪೇಕ್ಷೆಯ ದೆಸೆಯಿಂದ ಇಬ್ಬರು ಹದಿಹರೆಯದವರ ಬದುಕನ್ನು ಅಸಹನೀಯಗೊಳಿಸುವುದರ ಕುರಿತಾದದ್ದುʼ ಎಂದರು.

ʼಇಂಥ ಸಮಸ್ಯೆಗಳಿಗೆ ನಾವು ತತ್‌ ಕ್ಷಣ ಪರಿಹಾರಕ್ಕೆ ಪ್ರಯತ್ನಿಸುವ ಬದಲು ಹೊಣೆಗಾರಿಕೆಯನ್ನು ಒಬ್ಬರಿಂದ ಒಬ್ಬರಿಗೆ ವರ್ಗಾಯಿಸುತ್ತಾ ಹೋಗುತ್ತೇವೆ. ಅದರಿಂದ ಹಲವರು ಬದುಕು ಸಂಕಷ್ಟಕ್ಕೀಡಾಗುತ್ತದೆ. ಇದನ್ನು ಹೇಳುವುದೇ ಈ ಸಿನಿಮಾ. ಇದಲ್ಲದೇ ನನ್ನ ಸಿನಿಮಾ ಪಿತೃಪ್ರಧಾನ ವ್ಯವಸ್ಥೆ, ಜಾತಿ ಪದ್ಧತಿ, ಆರ್ಥಿಕ ಅಸಮಾನತೆ, ಸಮಾಜದಲ್ಲಿನ ಸಂಕೀರ್ಣತೆ ಎಲ್ಲವನ್ನೂ ಹೇಳುತ್ತದೆʼ ಎನ್ನುತ್ತಾರೆ ಪೃಥ್ವಿ ಕೊಣನೂರು.

ನಾನು ಯಾರ ಪರವೂ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಅದನ್ನು ಪ್ರೇಕ್ಷಕರಿಗೇ ಬಿಟ್ಟಿದ್ದೇನೆ ಎನ್ನುವ ಅವರು, ಜನಸಾಮಾನ್ಯರು ಕೆಲವೊಮ್ಮೆ ಇಂಥ ಸನ್ನಿವೇಶಗಳಿಗೆ ತೆರೆದುಕೊಂಡಾಗ ಎದುರಿಸುವ ಅನಿರೀಕ್ಷಿತ ಸನ್ನಿವೇಶ ಕಟ್ಟಿಕೊಡಲು ಯತ್ನಿಸಿದ್ದೇನೆ ಎನ್ನುತ್ತಾರೆ.

Advertisement

ಅರ್ಜುನ್‌ ರಾಜಾ ಅವರ ಸಿನೆಛಾಯಾಗ್ರಹಣ, ಶಿವಕುಮಾರ ಸ್ವಾಮಿಯವರ ಸಂಕಲನವಿದ್ದರೆ, ಅನುಪಮಾ ಹೆಗಡೆ ಚಿತ್ರಕಥೆಗೆ ಸಹಯೋಗ ನೀಡಿದ್ದಾರೆ. ಶೆರ್ಲಿನ್‌ ಭೋಸಲೆ, ನೀರಜ್‌ ಮ್ಯಾಥ್ಯೂ, ರೇಖಾ ಕೂಡ್ಲಿಗಿ, ಭವಾನಿ ಪ್ರಕಾಶ್‌, ರವಿ ಹೆಬ್ಬಳ್ಳಿ ಮತ್ತಿತರರು ತಾರಾಗಣದಲ್ಲಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next