ವಿಜಯಪುರ: ಶಾಲಾ ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ಹೋಗಲು ಬಸ್ ವ್ಯವಸ್ಥೆ ಇಲ್ಲದ್ದನ್ನು ವಿರೋಧಿಸಿ ಹಡಗಲಿ ಗ್ರಾಮದ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ಆರಂಭಿಸಿದ್ದಾರೆ. ಇದರಿಂದ ಹೆದ್ದಾರಿಯ ಇಕ್ಕೆಲಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದೆ.
ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಕಲಬುರಗಿ ಮಾರ್ಗದಲ್ಲಿರುವ ವಿಜಯಪುರ ತಾಲೂಕಿನ ಹಡಗಲಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ- 50 ತಡೆದು ಹೋರಾಟಕ್ಕೆ ಇಳಿದಿರುವ ಹಡಗಲಿ ಗ್ರಾಮದ ವಿದ್ಯಾರ್ಥಿಗಳು ಸಮಸ್ಯೆ ಇತ್ಯರ್ಥ ಆಗುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ತಮ್ಮೂರಿನ ಮಕ್ಕಳ ಹೋರಾಟಕ್ಕೆ ಗ್ರಾಮಸ್ಥರ ಕೈ ಜೋಡಿಸಿದ್ದಾರೆ.
ಏಕಾಏಕಿ ವಿದ್ಯಾರ್ಥಿಗಳು ರಸ್ತೆ ಸಂಚಾರ ತಡೆದು ಹೋರಾಟಕ್ಕೆ ಇಳಿದಿರುವ ಕಾರಣದಿಂದ ಸಿಂದಗಿ-ವಿಜಯಪುರ ಮಾರ್ಗದಲ್ಲಿ ನೂರಾರು ವಾಹನಗಳು ರಾಷ್ಟ್ರೀಯ ಹೆದ್ದಾರಿ ಮೇಲೆ ಸಾಲುಗಟ್ಟಿ ನಿಂತಿದೆ.
ಸುಮಾರು 3 ಗಂಟೆಗಳಿಂದ ರಾಷ್ಟ್ರೀಯ ಹೆದ್ದಾರಿ-50 ರ ಸಂಚಾರ ಬಂದ್ ಮಾಡಿರುವ ಶಾಲಾ ಕಾಲೇಜುಗಳಿಗೆ ತೆರಳಲು ಮುಂದಾಗಿರುವ ವಿದ್ಯಾರ್ಥಿಗಳು, ಶಾಲಾ ಕಾಲೇಜುಗಳಿಗೆ ತೆರಳಲು ನಿತ್ಯವೂ ಸಮಯಕ್ಕೆ ಸರಿಯಾಗಿ ಸೂಕ್ತ ಬಸ್ ಬಿಡುವ ಭರವಸೆ ಖಚಿತವಾಗುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲವೆಂದು ವಿದ್ಯಾರ್ಥಿಗಳ ಪಟ್ಟು ಹಿಡಿದಿದ್ದಾರೆ.
ನಿತ್ಯವೂ ಸಮಯಕ್ಕೆ ಸರಿಯಾಗಿ ಹಾಗೂ ಅಗತ್ಯ ಪ್ರಮಾಣ ಬಸ್ ಸೌಲಭ್ಯ ಇಲ್ಲದ ಕಾರಣ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ. ಇದರಿಂದಾಗಿ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಡಗಲಿ ಗ್ರಾಮದ ವಿದ್ಯಾರ್ಥಿಗಳು ಆರಂಭಿಸಿರುವ ರಸ್ತೆ ಸಂಚಾರ ತಡೆ ಹೋರಾಟದಿಂದಾಗಿ ವಿಜಯಪುರ-ಕಲಬುರಗಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳ ಪ್ರಯಾಣಿಕರು ಮುಂದೆ ಸಾಗಲಾಗದೇ ಪರದಾಡುವಂತಾಗಿದೆ. ಸ್ಥಳಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ವಿಜಯಪುರ ಗ್ರಾಮೀಣ ಪೊಲೀಸರ ಭೇಟಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು, ಗ್ರಾಮಸ್ಥರ ಮನವೊಲಿಕೆಗೆ ಯತ್ನ ನಡೆಸಿದ್ದರೂ ಪ್ರತಿಭಟನಾ ನಿರತರು ಪಟ್ಟು ಸಡಿಲಿಸುತ್ತಿಲ್ಲ.