ಉಡುಪಿ: ಕುಂದಾಪುರದ ಶಾಸ್ತ್ರಿ ಪಾರ್ಕ್ ಮೇಲ್ಸೇತುವೆ, ಉಡುಪಿಯ ಕರಾವಳಿ ಬೈಪಾಸ್ ಕಾಮಗಾರಿ, ಪಡುಬಿದ್ರಿಯಲ್ಲಿ ರಾ.ಹೆ. ಕಾಮಗಾರಿ ಮುಂದಿನ ಮಾರ್ಚ್ ಕೊನೆಯೊಳಗೆ ಪೂರ್ಣಗೊಳ್ಳಲಿದೆ ಎಂದು ನವಯುಗ ಕಂಪೆನಿ ತಿಳಿಸಿದೆ. ಏತನ್ಮಧ್ಯೆ ಕಾಮಗಾರಿ ವಿಳಂಬವಾಗಿ ಅಪಘಾತಗಳು ಹೆಚ್ಚಿವೆ, ಕಾಮಗಾರಿ ಅಪೂರ್ಣವಾಗಿದ್ದರೂ ಏಕೆ ಟೋಲ್ ಸಂಗ್ರಹ ಮಾಡುತ್ತಿದ್ದೀರಿ ಎಂದು ಕುಂದಾಪುರ ಸಹಾಯಕ ಕಮಿಷನರ್ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ತಲಪಾಡಿಯಿಂದ ನಂತೂರು, ಸುರತ್ಕಲ್‌ನಿಂದ ಕುಂದಾಪುರ ವರೆಗೆ 90 ಕಿ.ಮೀ. ಕಾಮಗಾರಿ 2013ರಲ್ಲಿ ಮುಗಿಯಬೇಕಿತ್ತು. ಅವಧಿ ವಿಸ್ತರಣೆಯಾಗುತ್ತ ಹೋಗಿ 2018ರ ಮಾರ್ಚ್‌ನಲ್ಲಿ ಮುಗಿಸುತ್ತೇವೆಂದು ಹೇಳಿದ್ದರೂ ಈಗ 2019ರ ಮಾರ್ಚ್ ವರೆಗೆ ವಿಸ್ತರಿಸಿದ್ದಾರೆ.
ವಿಳಂಬಕ್ಕೆ ಕಾರಣವೇನು ?
ಕುಂದಾಪುರ ಮೇಲ್ಸೇತುವೆ ಕಾಮಗಾರಿ ಹೆಚ್ಚುವರಿ ಕೆಲಸವಾಗಿದೆ. ಉಡುಪಿ ಕರಾವಳಿ ಬೈಪಾಸ್ ಕಾಮಗಾರಿ ಮೂಲ ನಕಾಶೆಯಲ್ಲಿರಲಿಲ್ಲ. ಸಾರ್ವಜನಿಕರ ಮನವಿ ಮೇರೆಗೆ ಹೊಸ ವಿನ್ಯಾಸದಂತೆ ಸೇರ್ಪಡೆಯಾಗಿದೆ. ಮೂಲ ನಕಾಶೆಯಲ್ಲಿ ಪಡುಬಿದ್ರಿಯಲ್ಲಿ ಬೈಪಾಸ್ ನಿರ್ಮಿಸುವುದೆಂದು ಇತ್ತು. ರಾಜ್ಯ ಸರಕಾರ ಇದಕ್ಕೆ ಒಪ್ಪಿಗೆ ಕೊಡದೆ ಈಗಾಗಲೇ ಇರುವ ಸ್ಥಳದಲ್ಲಿ ಅಗಲಗೊಳಿಸಲು ಸೂಚನೆ ನೀಡಿದ ಕಾರಣ ಈಗ ಕಾಮಗಾರಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಭೂಸ್ವಾಧೀನ ನಡೆದು ಕಾಮಗಾರಿ ಆರಂಭವಾಗಿದೆ.
ಕುಂದಾಪುರ ಮೇಲ್ಸೇತುವೆ ಕಾಮಗಾರಿ ಮುಂದಿನ ಮಾರ್ಚ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಉಡುಪಿ ಕರಾವಳಿ ಬೈಪಾಸ್‌ನಲ್ಲಿ ಬಾರಿಯರ್ ಕೆಲಸ ಮಾತ್ರ ಬಾಕಿ ಇದೆ. ಸಾರ್ವಜನಿಕ ಬಳಕೆಗೆ ಇದು ಅಕ್ಟೋಬರ್-ನವೆಂಬರ್‌ನಲ್ಲಿ ಮುಕ್ತಾಯಗೊಳ್ಳಬಹುದು. ಪಡುಬಿದ್ರಿಯಲ್ಲಿ 1.3 ಕಿ.ಮೀ. ಕಾಮಗಾರಿ ಮಾತ್ರ ಬಾಕಿ ಇದ್ದು ಸರ್ವಿಸ್ ರಸ್ತೆ ಹೊರತುಪಡಿಸಿ ನವೆಂಬರ್‌ನಲ್ಲಿಯೂ ಸರ್ವಿಸ್ ರಸ್ತೆ ಸೇರಿಸಿ ಮಾರ್ಚ್‌ನಲ್ಲಿಯೂ ಮುಕ್ತಾಯಗೊಳ್ಳಬಹುದು ಎನ್ನುತ್ತಾರೆ ನವಯುಗ ಕಂಪೆನಿ ಮುಖ್ಯ ಯೋಜನಾ ನಿರ್ದೇಶಕ ಶಂಕರ್. ತಲಪಾಡಿ ಸಮೀಪ ತೊಕ್ಕೊಟ್ಟಿನಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಇದು ಮೂಲ ಒಪ್ಪಂದದಲ್ಲಿ ಇರಲಿಲ್ಲ. ಇದರ ವಿನ್ಯಾಸವೂ ಬದಲಾಗಿದೆ. ಗುತ್ತಿಗೆದಾರ ಕಂಪೆನಿಯವರಿಗೆ ಹಣಕಾಸು ಮುಗ್ಗಟ್ಟು ಇರಬಹುದು. ನಿರೀಕ್ಷಿತ ವೇಗದಲ್ಲಿ ಕಾಮಗಾರಿ ನಡೆಯುತ್ತಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.
ನಡೆದ ಕಾಮಗಾರಿಗೆ ಟೋಲ್ ಸಂಗ್ರಹ
ಒಟ್ಟು ಕಾಮಗಾರಿಯಲ್ಲಿ 8.3 ಕಿ.ಮೀ. ಮಾತ್ರ ಕೆಲಸ ಪೂರ್ಣವಾಗಿಲ್ಲ. ಎಷ್ಟು ಕಾಮಗಾರಿ ನಡೆದಿದೆಯೋ ಅಷ್ಟಕ್ಕೆ ಮಾತ್ರ ಟೋಲ್ ಸಂಗ್ರಹ ಮಾಡುತ್ತಿದ್ದೇವೆ. ಇದು ಟೋಲ್ ನೀತಿಯನುಸಾರವೇ ನಡೆಯುತ್ತಿದೆ.
ಶಂಕರ್, ಮುಖ್ಯ ಯೋಜನಾ ನಿರ್ದೇಶಕ, ನವಯುಗ ಕಂಪೆನಿ