ಮುಂಬಯಿ: ದೇಶಿಯ ಕ್ರಿಕೆಟ್ ನಲ್ಲಿ ತನ್ನ ವೇಗದ ಬೌಲಿಂಗ್ ನಿಂದ ಮಿಂಚಿದ್ದ ಮಧ್ಯ ಪ್ರದೇಶದ ವೇಗಿ ಈಶ್ವರ್ ಪಾಂಡೆ ಅಂತಾರಾಷ್ಟ್ರೀಯ ಹಾಗೂ ಎಲ್ಲಾ ಮಾದರಿಯ ಕ್ರಿಕೆಟ್ ಗೆ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ.
75 ಪ್ರಥಮ ದರ್ಜೆ ಪಂದ್ಯವನ್ನಾಡಿ 263 ವಿಕೆಟ್ ಗಳನ್ನು ಪಡೆದಿದ್ದಾರೆ. ಮಧ್ಯ ಪ್ರದೇಶದ ಪರವಾಗಿ ದೇಶಿಯ ಕ್ರಿಕೆಟ್ ನ್ನು ಆಡಿರುವ ಅವರು, 2013 ರಲ್ಲಿ ಪುಣೆ ವಾರಿಯರ್ಸ್ ತಂಡದಲ್ಲಿ ಅವಕಾಶ ಪಡೆಯುವ ಮೂಲಕ ಐಪಿಎಲ್ ಗೆ ಎಂಟ್ರಿಯಾಗಿದ್ದರು. ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿಯೂ ಅವರು ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ತೋರಿಸಿದ್ದರು. ಐಪಿಎಲ್ ನಲ್ಲಿ ಒಟ್ಟು 25 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ.
ನಿವೃತ್ತಿ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿರುವ ಈಶ್ವರ್ ಪಾಂಡೆ, ಒಂದು ವೇಳೆ ಅಂದು ಧೋನಿ ನನಗೆ ಆಡಲು ಅವಕಾಶ ನೀಡಿದ್ದರೆ, ಇಂದು ನನ್ನ ಕೆರಿಯರ್ ಉತ್ತಮವಾಗಿರುತ್ತಿತ್ತು. ಆಗ ನಾನು 23-24ರ ಹರೆಯದವನಾಗಿದ್ದೆ, ಫಿಟ್ ಕೂಡ ಆಗಿದ್ದೆ. ಆ ಸಮಯದಲ್ಲಿ ಧೋನಿ ನನಗೆ ಒಂದು ಅವಕಾಶ ನೀಡುತ್ತಿದ್ದರೆ, ಭಾರತ ತಂಡದಲ್ಲಿ ಆಡಬಹುದಿತ್ತು. ನನ್ನ ವೃತ್ತಿ ಜೀವನ ಭಿನ್ನವಾಗಿರುತ್ತಿತ್ತು ಎಂದು ತನ್ನ ನೋವನ್ನು ತೋಡಿಕೊಂಡಿದ್ದಾರೆ.
2014 ರಲ್ಲಿ ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಈಶ್ವರ್ ಪಾಂಡೆ ಆಯ್ಕೆಯಾಗಿದ್ದರು. ಆ ಸಮಯದಲ್ಲಿ ಧೋನಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದರು. ಆ ವೇಳೆ ಈಶ್ವರ್ ಪಾಂಡೆಗೆ ಟೆಸ್ಟ್ ನಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.
ನಿವೃತ್ತಿ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಈಶ್ವರ್ ಪಾಂಡೆ, ʼಈ ದಿನ ತುಂಬಾ ಕಷ್ಟದಿಂದ ಈ ನಿರ್ಧಾರವನ್ನು ಕೈಗೊಂಡಿದ್ದೇನೆ. ಅಂತಾರಾಷ್ಟ್ರೀಯ ಹಾಗೂ ಪ್ರಥಮ ದರ್ಜೆಯ ಕ್ರಿಕೆಟ್ ಗೆ ವಿದಾಯ ಹೇಳುತ್ತಿದ್ದೇನೆ. 2007 ರಲ್ಲಿ ಆರಂಭವಾದ ಜರ್ನಿ ನಿಜಕ್ಕೂ ಅಸಾಧಾರಣ ಹಾಗೂ ಅವಿಸ್ಮರಣಿಯವಾದದು ಎಂದಿದ್ದಾರೆ.
ನ್ಯೂಜಿಲ್ಯಾಂಡ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾದ ಕ್ಷಣ ಅದ್ಭುತ. ಆದರೆ ಆಡಲು ಅವಕಾಶ ಸಿಕ್ಕಿಲಿಲ್ಲ ಎಂಬ ಬೇಸರವಿದೆ. ತಂಡದ ಸದಸ್ಯನಾಗಿದ್ದೆ ಎನ್ನುವ ಸಂತೃಪ್ತಿಯಿದೆ ಎಂದಿದ್ದಾರೆ.
ಡ್ರೆಸ್ಸಿಂಗ್ ರೂಮ್ ನಲ್ಲಿ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಇಶಾಂತ್ ಶರ್ಮಾ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್ ಅವರೊಂದಿಗೆ ಕಳೆದ ಕ್ಷಣ ಸ್ಮರಣೀಯ. ಸಚಿನ್ ತೆಂಡೂಲ್ಕರ್ ಅವರ ವಿರುದ್ಧ ಆಡಿದ್ದು ನನ್ನ ಪಾಲಿಗೆ ವಿಶೇಷ ನೆನಪು ಎಂದು ಹೇಳಿದ್ದಾರೆ.ಐಪಿಎಲ್ ನಲ್ಲಿ ಆಡಲು ಅವಕಾಶ ಕೊಟ್ಟ ಚೆನ್ನೈ, ಪುಣೆ ತಂಡಕ್ಕೂ ಈ ಸಂದರ್ಭದಲ್ಲಿ ಅವರು ಧನ್ಯವಾದವನ್ನು ಹೇಳಿದ್ದಾರೆ.