Advertisement

ಸಿಮ್‌ ಕಾರ್ಡ್‌ನ ಮೇಲೂ ಬಿದ್ದಿದೆ ಹ್ಯಾಕರ್ ಕಣ್ಣು !

01:39 AM Mar 04, 2021 | Team Udayavani |

ಇತ್ತೀಚಿನ ದಿನಗಳಲ್ಲಿ ಇ-ವಂಚನೆ ಸಂಬಂಧಿತ ಪ್ರಕರಣಗಳು ಹೆಚ್ಚುತ್ತಿವೆ. ಇಷ್ಟು ದಿನ ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ಗಳ ಮಾಹಿತಿಯನ್ನು ಪಡೆದು ಅಮಾಯಕರಿಗೆ ವಂಚಿಸುತ್ತಿದ್ದ ಹ್ಯಾಕರ್‌ಗಳು ಈಗ ಒಂದು ಹೆಜ್ಜೆ ಮುಂದೆ ಹೋಗಿ ಮೊಬೈಲ್‌ ಸಿಮ್‌ ಕಾರ್ಡ್‌ ಗಳತ್ತ ತಮ್ಮ ವಕ್ರದೃಷ್ಟಿ ಬೀರಿದ್ದಾರೆ. ಫೋನ್‌ ಕರೆ ಮಾಡಿ “ಸಿಮ್‌ ಕಾರ್ಡ್‌ ನಂಬರ್‌’ ಪಡೆದುಕೊಂಡು ಒಟಿಪಿ ಕಳುಹಿಸುತ್ತಾರೆ. ಇಲ್ಲಿಂದ ಈ ವಂಚನೆಯ ವಿವಿಧ ಮಜಲುಗಳು ಆರಂಭವಾಗುತ್ತವೆ. ಇಲ್ಲಿ 4 ಅಂಕಿ-6 ಅಂಕಿಗಳ ಒಟಿಪಿ ಕೊಟ್ಟವರು ಸಂತ್ರಸ್ತರಾಗುತ್ತಾರೆ.

Advertisement

ಹ್ಯಾಕರ್‌ಗಳ ತಂತ್ರದ ಭಾಗ ಯಾವುದು ?
ಹ್ಯಾಕರ್‌ಗಳು ಸ್ಮಾರ್ಟ್‌ಫೋನ್‌ ಬಳಕೆದಾರರ ಮೇಲೆ ಕಣ್ಣಿಡುತ್ತಾರೆ. ಅವರ ಡೆಬಿಟ್‌/ ಕ್ರೆಡಿಟ್‌ ಕಾರ್ಡ್‌ಗಳ ಮಾಹಿತಿಯನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ, ಅದರ ಮೂಲಕ ಬ್ಯಾಂಕ್‌ಗೆ ಲಿಂಕ್‌ ಆಗಿರುವ ಮೊಬೈಲ್‌ ಸಂಖ್ಯೆಗೆ ಒಟಿಪಿ ಕಳುಹಿಸುವುದರ ಮೂಲಕ ಕುಕೃತ್ಯ ಆರಂಭವಾಗುತ್ತದೆ. ಇಲ್ಲಿ ಸಿಮ್‌ ಕಾರ್ಡ್‌ಗಳನ್ನು “ಸ್ವಾಪ್‌’ ಮಾಡಲಾಗುತ್ತದೆ. ಹೀಗಾಗಿ ಸಿಮ್‌ ನಂಬರನ್ನು ಯಾವುದೇ ಕಾರಣಕ್ಕೂ ಯಾರೊಂದಿಗೂ ಹಂಚಿಕೊಳ್ಳಬೇಡಿ. ಕಾರಣ ನಿಮ್ಮ ಸಿಮ್‌ ಹಿಂಭಾಗದಲ್ಲಿರುವ ನಂಬರ್‌ ಅನ್ನು ಪಡೆದುಕೊಂಡು ನಕಲಿ ಸಿಮ್‌ ಕಾರ್ಡ್‌ ಅನ್ನು ನಿಮಗೆ ತಿಳಿಯದಂತೆ ಪಡೆದುಕೊಂಡು ಒಟಿಪಿಗಳನ್ನು ಕದಿಯುತ್ತಾರೆ.

ಸಿಮ್‌ ಸ್ವಾಪ್‌ ಹೇಗೆ ಕಾರ್ಯನಿರ್ವಹಿಸುತ್ತದೆ?
ಸಿಮ್‌ ಸ್ವಾಪ್‌ ಮೂಲಕ ನಿಮ್ಮ ಮೊಬೈಲ್‌ನಲ್ಲಿರುವ ಸಿಮ್‌ ಕಾರ್ಡ್‌ ದುರ್ಬಳಕೆ ಮಾಡಿ ಬ್ಯಾಂಕಿಂಗ್‌ ವ್ಯವಹಾರ ಪೂರೈಸಿಕೊಳ್ಳುತ್ತಾರೆ. ಒಟಿಪಿ /ಅಲರ್ಟ್‌ಗಳು ಸುಲಭವಾಗಿ ವಂಚಕರ ಕೈಸೇರುತ್ತವೆ. “ಡೂಪ್ಲಿಕೇಟ್‌ ಸಿಮ್‌’ ಪಡೆದುಕೊಂಡು ಈ ರೀತಿ ವಂಚನೆ ಮಾಡುತ್ತಾರೆ. “ಮೊಬೈಲ್‌ ಕಳೆದುಹೋಗಿದೆ’, “ಸಿಮ್‌ ಕಾರ್ಡ್‌ ಹಾಳಾಗಿದೆ’ ಎಂದು ದೂರು ನೀಡಿ ಮೊಬೈಲ್‌ ಸೇವಾ ಸಂಸ್ಥೆಯಿಂದ ನಕಲಿ ಸಿಮ್‌ ಪಡೆದುಕೊಳ್ಳುತ್ತಾರೆ.

ಏನಿದರ ಅಪಾಯ?
ಈಗಾಗಲೇ ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ ವಂಚನಾ ಜಾಲದ ಬಗ್ಗೆ ಜನರಲ್ಲಿ ಒಂದಿಷ್ಟು ಅರಿವು ಮೂಡಿದೆ. ಹೀಗಾಗಿ ಬಳಕೆದಾರರು ಯಾರಿಗೂ ತಮ್ಮ ಕಾರ್ಡ್‌ ಮಾಹಿತಿಯನ್ನು ನೀಡುತ್ತಿಲ್ಲ. ಅದರಲ್ಲಿಯೂ ಒಟಿಪಿಗಳನ್ನು ಯಾರಿಗೂ ತಿಳಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಳಕೆದಾರರ OTPಯನ್ನು ಕದಿಯುವ ಸಲುವಾಗಿ ಹ್ಯಾಕರ್ಸ್‌ ಹೊಸದೊಂದು ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಿಮ್‌ ಮೂಲಕ ನಿಮ್ಮ ವೈಯಕ್ತಿಕ ದಾಖಲೆ ಪಡೆದುಕೊಂಡು ಫಿಶಿಂಗ್‌ ಮಾದರಿಯಲ್ಲಿ ಬ್ಯಾಂಕ್‌ ಖಾತೆಗೆ ಕನ್ನ ಹಾಕಲಾಗುತ್ತದೆ.

ಸಿಮ್‌ ಯಾರಿಗೂ ಕೊಡಬೇಡಿ
ಸಿಮ್‌ ಕಾರ್ಡ್‌ ಅನ್ನು ಯಾರಿಗೂ ನೀಡಲು ಹೋಗಬೇಡಿ. ಮೊಬೈಲ್‌ ರಿಪೇರಿಗೆ ನೀಡುವ ಸಂದರ್ಭ ಸಿಮ್‌ ತೆಗೆದಿಟ್ಟುಕೊಳ್ಳುವುದು ಉತ್ತಮ. ಸಿಮ್‌ ಕಾರ್ಡ್‌ ಒಮ್ಮೆ ವಂಚಕರ ಕೈಗೆ ಸಿಕ್ಕರೆ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ. ಅದರಲ್ಲಿಯೂ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಸಲು ಹೋದಾಗ, ನಕಲಿ ಸಿಮ್‌ ಪಡೆಯಲು ಮುಂದಾದ ಸಂದರ್ಭ ದುರ್ಬಳಕೆ ಸಾಧ್ಯತೆ ಹೆಚ್ಚು. ಇಂತಹ ಸಂದರ್ಭದಲ್ಲಿ ಸಾಧ್ಯವಾದಷ್ಟು ಎಚ್ಚರದಿಂದ ಇರುವುದು ಒಳ್ಳೆಯದು.

Advertisement

ಒಟಿಪಿ ಕುರಿತು ಎಚ್ಚರ
ಇತ್ತೀಚೆಗೆ ಫೋನ್‌ ಮೂಲಕ ಬ್ಯಾಂಕಿಂಗ್‌ ಸೇವೆಗಳು ಸರಳವಾಗಿ ಗ್ರಾಹಕರಿಗೆ ಲಭ್ಯವಾಗುತ್ತಿವೆ. ಸುರಕ್ಷತೆಯ ಭೀತಿಯ ನಡುವೆ ಒನ್‌ ಟೈಮ್‌ ಪಾಸ್‌ವರ್ಡ್‌ (ಒಟಿಪಿ) ಮಾದರಿಯಲ್ಲಿ ಅನೇಕ ವಿಧಾನಗಳು ಜಾರಿಯಲ್ಲಿದ್ದರೂ ಭದ್ರತ ಲೋಪಗಳು ಆಗಾಗ ಸಂಭವಿಸುತ್ತಿರುತ್ತವೆ. ಸೈಬರ್‌ ವಂಚನೆ ಪ್ರಕರಣಗಳ ಸಾಲಿನಲ್ಲಿ ಇ-ಮೇಲ್‌ ಫಿಶಿಂಗ್‌, ಪಾಸ್‌ವರ್ಡ್‌ ಹ್ಯಾಕ್‌, ಕಾರ್ಡ್‌ ಸ್ಕಿಮ್ಮಿಂಗ್‌, ವಿಶಿಂಗ್‌, ಐಡೆಂಡಿಟಿ ಕಳ್ಳತನದ ಜತೆಗೆ ಸಿಮ್‌ (SIM) ಸ್ವಾಪ್‌ ವಂಚನೆ ಸೇರಿಕೊಂಡಿದೆ.

ಸಿಮ್‌ ಸ್ವಾಪ್‌ ಭೀತಿಗೆ ಏನು ಪರಿಹಾರ?
ಬ್ಯಾಂಕಿಂಗ್‌ ವ್ಯವಹಾರ ಮಾಡುವಾಗ ಇತರ ಯಾವುದೇ ವಿಂಡೋಸ್‌ ಓಪನ್‌ ಮಾಡಬೇಡಿ. ಕ್ಯಾಶ್‌ (Cache) ಕ್ಲಿಯರ್‌ ಮಾಡಿ. ಬ್ಯಾಂಕ್‌ನಿಂದ ಬಹಳಷ್ಟು ಸಮಯದಿಂದ ಯಾವುದೇ ಅಲರ್ಟ್‌ ಅಥವಾ ಕರೆ ಬರದಿದ್ದರೆ ತತ್‌ಕ್ಷಣವೇ ಬ್ಯಾಂಕಿಗೆ ದೂರು ನೀಡಿ. ವೈಯಕ್ತಿಕ ವಿಷಯ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ. ಬ್ಯಾಂಕಿಂಗ್‌ ವ್ಯವಹಾರಕ್ಕಾಗಿ ಪ್ರತ್ಯೇಕ ಇ-ಮೇಲ್‌ ಐಡಿ ಬಳಸಿದರೆ ಉತ್ತಮ.

ಸಿಮ್‌ ಸ್ವಾಪ್‌ ಕರೆ ಹೀಗಿರುತ್ತದೆ
ಕಸ್ಟಮರ್‌ ಕೇರ್‌ ನಿರ್ವಾಹಕ ಎಂದು ಕರೆ ಮಾಡುವ ಹ್ಯಾಕರ್‌ಗಳು ನಿಮ್ಮ ಸಿಮ್‌ ಅನ್ನು 3ಜಿಯಿಂದ 4ಜಿಗೆ ಪರಿವರ್ತಿಸಬೇಕು. ಸಿಮ್‌ ಕಾರ್ಡ್‌ ನ ಇಪ್ಪತ್ತು ಸಂಖ್ಯೆಯನ್ನು ತಿಳಿಸಿ, ಇಲ್ಲವಾದರೆ ನಿಮ್ಮ ಸಿಮ್‌ಕಾರ್ಡ್‌ ನಿಷ್ಕ್ರಿಯವಾಗಲಿದೆ. (ಯಾವುದೇ ಟೆಲಿಕಾಂ ಕಂಪೆನಿಗಳು ನಿಮಗೆ ಕರೆ ಮಾಡಿ ಈ ರೀತಿಯ ಮಾಹಿತಿಯನ್ನು ಪಡೆಯುವುದಿಲ್ಲ.) ಎಂದು ಹೇಳಿ ಸಿಮ್‌ನ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತಾರೆ. ಸಿಮ್‌ ಕಾರ್ಡ್‌ ಮೇಲಿನ 20 ಅಂಕಿ ಸಂಖ್ಯೆ ಸಿಗುತ್ತಿದ್ದಂತೆ, ನಿರ್ದಿಷ್ಟ ಸೇವೆಗಾಗಿ ಸಂಖ್ಯೆಯನ್ನು ಒತ್ತುವ ಮೂಲಕ ನಿಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿಕೊಂಡಾಗ ಮೊಬೈಲ್‌ನಿಂದ ನೆಟ್‌ವರ್ಕ್‌ ಕಣ್ಮರೆಯಾಗುತ್ತದೆ. ಇದೇ ಸಂದರ್ಭ ಅತ್ತ ಅದೇ ನಂಬರ್‌ನಲ್ಲಿ ನಕಲಿ ಸಿಮ್‌ ಕಾರ್ಡ್‌ ಸೃಷ್ಟಿಸಿಕೊಂಡು ಬ್ಯಾಂಕಿಂಗ್‌ ಮಾಹಿತಿಯನ್ನು ಕಲೆ ಹಾಕುತ್ತಾರೆ. ಇವೆಲ್ಲವನ್ನು ಹ್ಯಾಕರ್‌ಗಳು ಕೇವಲ 1-3 ಗಂಟೆಗಳ ಒಳಗೆ ನಡೆಸುತ್ತಾರೆ. ಈ ರೀತಿಯ ಹ್ಯಾಕರ್‌ಗಳು ಬ್ಯಾಂಕ್‌ ಖಾತೆ ಸಂಖ್ಯೆ ಅಥವಾ ಎಟಿಎಂ ಕಾರ್ಡ್‌ ಸಂಖ್ಯೆಯನ್ನು ಫಿಶಿಂಗ್‌ ಮೂಲಕ ಪಡೆದುಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next