Advertisement
ಇದು ನಿಜವಾಗಿಯೂ ಒಂಟಿ ಬಾಳ ನೌಕೆಯೇ ಸರಿ. ಗಂಡ ಎಂಬ ಪ್ರಾಣಿ ಕೆಲಸ ಕೆಲಸ ಎಂದು ಬರೀ 18ಕ್ಕೂ ಹೆಚ್ಚು ಗಂಟೆಗಳು ಕೆಲಸದಲ್ಲಿ ಮುಳುಗೇಳುವಂತಹ ಪ್ರಾಜೆಕ್ಟ್ ಸಿಕ್ಕಿದರೇ.. ಹೆಂಡತಿ ನೀ ನನಗೆ ಬೆಂಡು ಎತ್ತುತೀ ..ಎಂದೇ ಹೇಳುತ್ತಾರೆ ಇಲ್ಲಿಯ ಗಂಡುಗಳು.ಸತ್ಯವಾಗಿ ಮನಸ್ಸುಗಳು ಪರಸ್ಪರ ಪ್ರೀತಿಯಿಂದ ಆರಾಮಾಗಿ ಮಾತನಾಡುವ ಅವಕಾಶವೇ ಇಲ್ಲಿ ಇಲ್ಲವೆಂದು ಅನಿಸುತ್ತದೆ. ಇಲ್ಲಿ ಎಲ್ಲಾ ಇದೆ. ಕಾರು ಇದೆ, ದೊಡ್ಡ ಮನೆಯಿದೆ, ಬಹು ಬೇಗ ಆಫೀಸ್‌ಗೆ ಹೋಗುತ್ತಾರೆ. ಸಂಜೆಯ ಟ್ರಾಫಿಕ್ ಜಂಜಾಟವಿಲ್ಲದೇ ಬೇಗ ಮನಗೆ ಬರುತ್ತಾರೆ ಎಂದು ಖುಷಿಪಡುವ ಪಾಡು ನಮಗಿಲ್ಲ. ಪುನಃ ಸರಿ ರಾತ್ರಿಯವರೆಗೂ ಆಪಶೂರ್ ಮೀಟಿಂಗ್. ಅದು ಇದು ಎಂದು ಲ್ಯಾಪ್‌ಟಾಪ್‌ನಲ್ಲಿ ತಲ್ಲಿನ ಮೂರ್ತಿಗಳಾಗುತ್ತಾರೆ ನಮ್ಮವರು.
Related Articles
Advertisement
ಹೆಂಡತಿಯರಾಗಿ ಬಂದಿರುವ ನಮ್ಮಂತವರ ಮನಸ್ಸಿನ ತಳಮಳ ಕೇಳುವ ಮನಸ್ಸುಗಳು ಇಲ್ಲ! ಇಲ್ಲಿ ಎಲ್ಲಾ ಇದೆ. ವಾಟ್ಸ್‌ಆ್ಯಪ್, ಫೇಸ್‌ಬುಕ್ ಇತ್ಯಾದಿಗಳೇ ನಿತ್ಯ ನಿರಂತರ ಸಂಗಾತಿಗಳು. ಇಲ್ಲಿ ನೆಟ್ ಯಾವಾಗಲು ಇರುತ್ತದೆ. ನಮ್ಮೂರಲ್ಲಿ ಇವುಗಳ ಬಳಕೆಯನ್ನು ಮಾಡುವುದೇ ಖುಷಿಯಾಗುತ್ತಿರುತ್ತಿತ್ತು. ಆದರೇ ಇಲ್ಲಿ ಇದು ಸಹ ಮಹಾಬೋರು. ಒಂದೇ ಒಂದು ಖುಷಿಯ ವಿಚಾರ ಎಂದರೇ ಇಲ್ಲಿಗೆ ಬರುವುದಕ್ಕೂ ಮೊದಲು ಅಡುಗೆ ಮನೆಯ ದಿಕ್ಕು ಕಾಣದ ನನ್ನ ಕೈಗಳು ಈಗ ಎಲ್ಲದರಲ್ಲೂ ನಿಪುಣತೆಯನ್ನು ಕಂಡಿವೆ. ಇದರಲ್ಲಾದರೂ ಸ್ವಲ್ಪ ನನ್ನನ್ನು ನಾನು ಮರೆತು ತರಾವೇರಿ ಖಾದ್ಯಗಳನ್ನು ತಯಾರು ಮಾಡುವುದನ್ನು ಕಲಿಯಲು ಅನುಕೂಲವಾಗಿದೆ. ಇದಕ್ಕೆ ನಾನು ಮತ್ತೇ ಇಂಟರ್‌ನೆಟ್‌ಗೆ ಥ್ಯಾಂಕ್ಸ್ ಹೇಳಬೇಕು.
ಎಷ್ಟೇ ಓದಿದ್ದರೂ ಸೌಟು ಹಿಡಿಯುವುದು ತಪ್ಪುವುದಿಲ್ಲ ಎಂಬಂತೆ, ಯಾವುದೇ ಕೆಲಸ ಮಾಡುತ್ತಿದ್ದರೂ ಎಚ್4 ಮೇಲೆ ಬಂದರೇ ಮಕ್ಕಳನ್ನು ಸಂಭಾಳಿಸುವುದು ತಪ್ಪುವುದಿಲ್ಲ! ಇವುಗಳ ಕಾರ್ಯ ಮಾಡುವುದರಲ್ಲಿಯೇ ಅರ್ಧ ಆಂಟಿಗಳಾಗಿದ್ದೇವೆ ಅನಿಸುತ್ತದೆ. ಮಕ್ಕಳಿಗಾದರೂ ಯಾರಿದ್ದಾರೇ ನಾನೇ ಅಜ್ಜಿ/ಅಮ್ಮ ಎಲ್ಲ ತಾನೇ. ಆದರೂ ಮಕ್ಕಳಿರುವುದು ಶೇ.80ರಷ್ಟು ಮನಸ್ಸಿಗೆ ಖುಷಿ ಕೊಟ್ಟಿದೆ. ಇದರ ಮೂಲಕವಾದರೂ ನಮ್ಮ ಮನಸ್ಸುಗಳು ಸ್ವಲ್ಪ ಬ್ಯುಸಿಯಾಗಿವೆ. ಇಲ್ಲದಿದ್ದರೇ ಸೋಮಾರಿಗಳಾಗುತ್ತಿದ್ದವು. ನಾನೇಷ್ಟು ಖುಷಿ ಪಟ್ಟಿದ್ದೆ , ವಿದೇಶಕ್ಕೆ ಹೋಗಲು ಸಿದ್ಧತೆ ಮಾಡಿಕೊಳ್ಳುವಾಗ. ಪಾಸ್‌ಪೋರ್ಟ್ ಮಾಡಿಸುವುದರಿಂದ ಹಿಡಿದು, ಏರ್ ಟಿಕೆಟ್ ಬುಕ್ ಮಾಡುವವರೆಗೂ. ನಾ ವಿದೇಶಕ್ಕೆ ಹೋಗುವೆನು ಎಂದು ತಿಳಿದು ಅಕ್ಕಪಕ್ಕದ ಮನೆಯವರು, ಬಂಧು ಬಳಗದವರು ನನ್ನಡೆಗೆ ನೋಡುವ ನೋಟವೇ ಬದಲಾಗಿದ್ದು. ಅದನ್ನು ಕಂಡು ಮನದಲ್ಲಿಯೇ ನಕ್ಕಿದ್ದು. ವಿದೇಶಕ್ಕೆ ಹೋಗುತ್ತಿದ್ದೇನೆ ಎಂದು 3 ಬಾರಿ ಸೂಟ್‌ಕೇಸ್ ತುಂಬುವಷ್ಟು ಶಾಪಿಂಗ್ ಮಾಡಿದ್ದು. ನೆನಸಿಕೊಂಡರೇ ಈಗ ಅಯ್ಯೋ ಅನಿಸುತ್ತಿದೆ. ಆ ಸಂಭ್ರಮ ಇದ್ದಿದ್ದು ನಾಲ್ಕು ದಿನ ಮಾತ್ರ. ಆ ಒಂದು ವಾರ ನಿತ್ಯ ನೋಡುವ ಪ್ರತೀ ನೋಟವನ್ನು ಕೆಮರಾದಲ್ಲಿ ಸೆರೆ ಹಿಡಿದು ಫೇಸ್‌ಬುಕ್‌ಗೆ ತುರಕಿ ಲೈಕ್ ಗಳಿಗೆ ಕಾಯುತ್ತಿದ್ದುದ್ದೇ ಬಂತು.
ನಮ್ಮ ದೇಶದಲ್ಲಿರುವ ಅತ್ಯುತ್ತಮ ಸ್ಥಳಗಳ ಪರಿಚಯ ಮಾಡಿರದಿದ್ದರೂ ವಿದೇಶ ಸ್ಥಳಗಳನ್ನು ನೋಡಬೇಕು ತಿರುಗಾಡಬೇಕು ಎಂಬ ಹಪಿಹಪಿತನ ಎಲ್ಲಿಂದ ಬರುತ್ತದೆ? ಏನು ಮಾಡುವುದು ಅದೇ ಒಂದು ರೀತಿಯ ಬೋರು ಮನಸ್ಸಿಗೆ ಕನಿಷ್ಠ ಬದಲಾವಣೆಯಾಗಿದೆ ಇಲ್ಲಿ!! ಬದಲಾಗುತ್ತಿರುವುದು ನಾವುಗಳ ಅಥವಾ ನಮ್ಮ ವ್ಯವಸ್ಥೆಯಾ? ಹುಟ್ಟಿ ಬೆಳೆದು, ಓದಿದ ದೇಶದಲ್ಲಿಯೆ ಇದ್ದು ಏನಾದರೂ ಮಾಡುವ ಬದಲು, ಇಲ್ಲಿಗೆ ಹೀಗೆ ಬಂದು ಯಾಕೆ ಹೊಸ ರೀತಿಯ ಬದುಕಿಗಾಗಿ ಕಷ್ಟಪಡುವುದು ಯಾವ ಸುಖ? ಗೊತ್ತಾಗುತ್ತಿಲ್ಲ!
ಇರುವ ಒಂದು ಎರಡು ಮಕ್ಕಳನ್ನು ಕಟ್ಟಿಕೊಂಡು ಇಬ್ಬರು ದುಡಿಯಲು ತೊಡಗಿದರೇ ಅದು ಹೇಗೆ ಸ್ವಾಸ್ಥ್ಯ ಕುಟುಂಬವೆಂದೆನಿಸುತ್ತದೆ? ಆದರೂ ದಿನ ಕಳೆದರೇ ಎಂಥವರೂ ಎಂಥ ಸನ್ನಿವೇಶಕ್ಕಾದರೂ ಒಗ್ಗಿ ಕೊಳ್ಳುತ್ತಾರೇ ಅನ್ನುವಂತೆ ಇಲ್ಲಿರುವುದೇ ಮೇಲು ಅನಿಸುತ್ತದಲ್ಲ ಯಾಕೆ? ನಾವು ಹುಟ್ಟಿದ ಊರೇ ಪರಕೀಯ ಅನಿಸುತ್ತದಲ್ಲ ಯಾಕೇ?
ಇದೇ ಕಾಲ ನಿಯಮವಾ? *ಎಚ್. ಈ . ತಿಪ್ಪೇರುದ್ರಪ್ಪ , ಮಿಯಾಮಿಸ್ಬರ್ಗ್