ಮಡಿಕೇರಿ: ಎಚ್1ಎನ್1 ರೋಗ ಹರಡದಂತೆ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಚುರುಕುಗೊಳಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಇಲಾಖಾ ಅಧಿಕಾರಿಗಳ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಚ್1ಎನ್1 ರೋಗದ ಬಗ್ಗೆ ಅಲ್ಲಲ್ಲಿ ಮಾಹಿತಿ ಕೇಳಿ ಬರುತ್ತದೆ. ಆದ್ದರಿಂದ ಈ ಬಗ್ಗೆ ಜಿಲ್ಲೆಯ ಎಲ್ಲ ಕಡೆಗಳಲ್ಲಿ ವಿವಿಧ ಇಲಾಖೆಗಳ ಜತೆಗೂಡಿ ಆರೋಗ್ಯ ಶಿಕ್ಷಣ ಅರಿವು ಕಾರ್ಯಕ್ರಮ ಆಯೋಜಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಎಚ್1ಎನ್1 ಸೇರಿದಂತೆ ಯಾವುದೇ ರೀತಿಯ ಕಾಯಿಲೆಗಳ ಸಂಬಂಧ ಹತ್ತಿರದ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಮಾರ್ಗದರ್ಶನದಂತೆ ಔಷಧ ಪಡೆಯುವಂತಾಗಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ನಾಗರಿಕರಿಗೆ ಮಾಹಿತಿ ನೀಡು ವಂತಾಗಬೇಕು ಎಂದರು.
ಯಾವುದೇ ರೋಗದಿಂದ ದೂರವಿ ರುವಂತಾಗಲು ವೈಯಕ್ತಿಕ ಸ್ವಚ್ಛತೆ, ಸಮುದಾಯ ಶುಚಿತ್ವ ಹಾಗೂ ಉತ್ತಮ ಪರಿಸರ ಅಗತ್ಯ. ಆ ನಿಟ್ಟಿನಲ್ಲಿ ಶುದ್ದ ಕುಡಿಯುವ ನೀರು ಬಳಸುವುದು, ನೀರನ್ನು ಕುದಿಸಿ ಬಳಸುವಂತಾಗಬೇಕು. ಹೀಗೆ ನಾನಾ ಮುನ್ನೆಚ್ಚರಿಕೆಗಳನ್ನು ವಹಿಸಬೇಕಿದೆ. ಆ ನಿಟ್ಟಿನಲ್ಲಿ ಮಾಹಿತಿ, ಮಾರ್ಗದರ್ಶನ ಮತ್ತು ಶಿಕ್ಷಣ ನೀಡಬೇಕಿದೆ ಎಂದರು. ಕುಡಿಯುವ ನೀರು ಪೂರೈಕೆ ಮಾಡುವ ಘಟಕಗಳಲ್ಲಿ ಸ್ವಚ್ಛತೆ ಕಾಪಾಡ ಬೇಕು. ಗ್ರಾ.ಪಂ.ಸೇರಿದಂತೆ ಶಾಲಾ-ಕಾಲೇಜುಗಳಲ್ಲಿ ನೀರಿನ ಟ್ಯಾಂಕ್‌ಗಳನ್ನು ಎರಡು ತಿಂಗಳಿಗೊಮ್ಮೆಯಾದರೂ ಸ್ವತ್ಛಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. ಜಿಲ್ಲಾ ಸರ್ಜನ್ ಡಾ.ಜಗದೀಶ್ ಅವರು ಎಚ್1ಎನ್1 ಸೇರಿದಂತೆ ಹಲವು ರೋಗಗಳ ಔಷಧ ಲಭ್ಯವಿದೆ ಎಂದು ಅವರು ಮಾಹಿತಿ ನೀಡಿದರು.
ಪೌರಾಯುಕ್ತರಾದ ಎಂ.ಎಲ್.ರಮೇಶ್ ಅವರು ಸೊಳ್ಳೆ ರಹಿತ ಓವರ್ ಹೆಡ್ ಟ್ಯಾಂಕ್ ಹಾಗೂ ಅಂಡರ್ ಗ್ರೌಂಡ್ ಟ್ಯಾಂಕ್‌ಗಳನ್ನು ನಿರ್ಮಿಸಲು ಕ್ರಮವಹಿಸಲಾಗುವುದು. ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ರಾಜು, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ತಮ್ಮಯ್ಯ, ಸಿಡಿಪಿಒ ಅರುಂಧತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ಇತರರು ಉಪಸ್ಥಿತರಿದ್ದರು.