ಮೈಸೂರು: ರಾಜಕಾರಣದಲ್ಲಿ ಇರುವವರು ಎಲ್ಲರನ್ನು ಏಕವಚನದಲ್ಲಿ ಮಾತನಾಡುವುದನ್ನು ಬಿಟ್ಟು, ಪ್ರಧಾನಿ ಮೋದಿ ಅವರಿಂದ ಸೌಜನ್ಯ ಕಲಿಯಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೆಸರೇಳದೆ ಛೇಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪಿಎಂ ಎಚ್.ಡಿ.ದೇವೇಗೌಡರು ಭೇಟಿ ಮಾಡಿದ ವಿಚಾರವನ್ನು ರಾಜಕೀಯ ದೃಷ್ಟಿಯಿಂದ ನೋಡುವ ಅಗತ್ಯವಿಲ್ಲ. ಅವರಿಬ್ಬರ ಭೇಟಿ ಸೌಜನ್ಯದ ಭೇಟಿಯಾಗಿದೆ. ಸಂವಿಧಾನದ ದಿನದಂದು ಮೋದಿ ಕುಟುಂಬದ ರಾಜಕಾರಣದ ಬಗ್ಗೆ ಮಾತನಾಡಿ, ಅದು ಗೆದ್ದಲಿನ ರೀತಿ ಕಾಡುತ್ತಿದೆ ಅಂದರು. ಅದನ್ನೇ ಕೆಲವರು ರಾಜಕಾರಣ ಮಾಡಿದರು. ಆದರೆ, ಇದೊಂದು ಸೌಜನ್ಯದ ಭೇಟಿ ಎಂಬುದಷ್ಟೇ ಮುಖ್ಯ ಎಂದರು.
ವೈಯಕ್ತಿಕ ಆಪಾದನೆ ಸಲ್ಲದು: ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವ್ಯಕ್ತಿಗಳ ಬಗ್ಗೆ ವೈಯಕ್ತಿಕ ಆಪಾದನೆ ಸಲ್ಲದು. ಜಾ.ದಳ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಕಿಡ್ನಿ ಕಳ್ಳ ಹಾಗೂ ಬೆಂಗಳೂರಿನ ಅಭ್ಯರ್ಥಿಯನ್ನು ಅತ್ಯಾಚಾರಿ ಆರೋಪಿ ಎಂದು ಒಬ್ಬ ಜವಾಬ್ದಾರಿಯುತ ಸಚಿವರಾಗಿ ಎಸ್.ಟಿ.ಸೋಮಶೇಖರ್ ಆಪಾದನೆ ಮಾಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ವೈಯಕ್ತಿಕ ವಿಚಾರ ಪ್ರಸ್ತಾಪಿಸಿ ಅಧೀರರನ್ನಾಗಿ ಮಾಡಬಾರದು ಎಂದು ಹೇಳಿದರು.
ಬೊಮ್ಮಾಯಿ ಬದಲಿಸುವ ಪ್ರಶ್ನೆಯೇ ಇಲ್ಲ: ಶಾಸಕ ರಮೇಶ್ ಜಾರಕಿಹೊಳಿ ಅಥವಾ ಬಸನಗೌಡ ಪಾಟೀಲ್ ಯತ್ನಾಳ್ ಯಾವ ಮಾತುಗಳನ್ನಾಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಿಸುವ ಪ್ರಶ್ನೆಯೇ ಇಲ್ಲ. ಅವರ ನೇತೃತ್ವದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ವಿಶ್ವನಾಥ್ ತಿಳಿಸಿದರು.
“ಬಿಡಿಎ ಅಧ್ಯಕ್ಷ, ಶಾಸಕ ಎಸ್.ಆರ್. ವಿಶ್ವನಾಥ್ ಹಾಗೂ ಗೋಪಾಲಕೃಷ್ಣ ರಿಯಲ್ ಎಸ್ಟೇಟ್ ಗಿರಾಕಿಗಳು. ಅವರಿಬ್ಬರ ನಡುವೆ ಏನೇನು ವ್ಯವಹಾರ ನಡೆದಿದೆಯೋ ಗೊತ್ತಿಲ್ಲ. ದ್ವೇಷದ ರಾಜಕಾರಣಕ್ಕೂ ಅದಕ್ಕೂ ಸಂಬಂಧವಿಲ್ಲ.”
– ಎಚ್. ವಿಶ್ವನಾಥ್, ಎಂಎಲ್‌ಸಿ.