ಮೈಸೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರಿಗೆ ಲಕ್ಷಾಂತರ ರೂ. ಹಣದ ಆಮಿಷ ಒಡ್ಡಲಾಗುತ್ತಿದೆ ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಮ್ಮ ಮನೆಗೆ ಐದು ಮಂದಿ ಗ್ರಾ.ಪಂ ಸದಸ್ಯರು ಬಂದಿದ್ದರು. ಹಾಸನ, ಕೊಡಗು ಜಿಲ್ಲೆಗಳಲ್ಲಿ ಸದಸ್ಯರಿಗೆ ಲಕ್ಷ ಲಕ್ಷ ಕೊಡುತ್ತಿದ್ದಾರೆ, ಇಲ್ಲಿ ಏನೂ ಇಲ್ವ ಎನ್ನುತ್ತಿದ್ದಾರೆ” ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಪ್ರಜಾಪ್ರತಿನಿಧಿಗಳು ಮತದಾರರಾಗಿದ್ದಾರೆ. ಚುನಾವಣೆಯನ್ನು ನಾವು ಹಾಳು ಮಾಡುತ್ತಿದ್ದೇವೆ. ಅಭ್ಯರ್ಥಿಗಳು 40 ಕೋಟಿ ರೂ.ಗಳಿಂದ 1700 ಕೋಟಿ ರೂ.ವರೆಗೆ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. 15 ಕೋಟಿ ರೂ. ಇದ್ದರೆ ಮಾತ್ರ ಟಿಕೆಟ್ ಕೇಳಿ ಅನ್ನುತ್ತಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವ ಸಂದೇಶ ರವಾನೆ ಮಾಡಲು ಹೊರಟಿವೆ? ದುಡ್ಡಿದ್ದರೆ ಮಾತ್ರ ಚುನಾವಣೆ ಎನ್ನುವುದು ಪಕ್ಷಗಳ ಸಂದೇಶವೇ? ಮತದಾರರು ಯಾವುದೇ ಮುಲಾಜಿಲ್ಲದೆ ಮತ ಹಾಕಬೇಕು ಎಂದು ಎಚ್.ವಿಶ್ವನಾಥ್ ಹೇಳಿದರು.
ಇದನ್ನೂ ಓದಿ:ಸಂಸದೆ ಸುಮಲತಾ ಸೋದರ ಸಂಬಂಧಿಗೆ ಜೀವ ಬೆದರಿಕೆ..!
ಮೋದಿ ಕುಟುಂಬ ರಾಜಕಾರಣದ ಬಗ್ಗೆ ಗೆದ್ದಲಿನ ರೀತಿ ಕಾಡುತ್ತಿದೆ ಎಂದು ಹೇಳಿದ್ದರು. ಹಾಲಿ ಪ್ರಧಾನಿ ಮತ್ತು ಮಾಜಿ ಪ್ರಧಾನಿಯವರದ್ದು ಸೌಜನ್ಯದ ಭೇಟಿ. ಅದನ್ನೇ ಕೆಲವರು ರಾಜಕಾರಣ ಮಾಡಿದರು. ಮಿಕ್ಕವರು ಮೋದಿಯಿಂದ ಸೌಜನ್ಯ ಕಲಿಯಬೇಕು. ಏಕವಚನದಲ್ಲಿ ಎಲ್ಲರ ಬಗ್ಗೆ ಮಾತನಾಡುವುದಲ್ಲ ಎಂದುಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಎಚ್ ವಿಶ್ವನಾಥ್ ಟಾಂಗ್ ನೀಡಿದರು.