Advertisement

ಇನ್ನಷ್ಟು ಬಲಿಷ್ಠವಾದೀತೇ ಪಕ್ಷ? ರಾಜ್ಯ ಜೆಡಿಎಸ್‌ಗೆ ಹೊಸ ಸಾರಥಿ

04:05 PM Aug 06, 2018 | Sharanya Alva |

ಕೊನೆಗೂ ಜಾತ್ಯತೀತ ಜನತಾದಳ ರಾಜ್ಯ ಘಟಕಕ್ಕೆ ಹೊಸ ಸಾರಥಿ ನೇಮಕವಾಗಿದೆ. ಪ್ರಸಕ್ತ ರಾಜಕೀಯ ವಿದ್ಯಮಾನ ಹಾಗೂ ಭವಿಷ್ಯದ ರಾಜಕಾರಣ ಎರಡೂ ಲೆಕ್ಕಾಚಾರ ಹಾಕಿಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ  ಎಚ್‌.ಡಿ.ದೇವೇಗೌಡರು ಹಿರಿಯ ರಾಜಕಾರಣಿ ಹಾಗೂ ಕುರುಬ ಸಮುದಾಯದ ಹಿರಿಯ ನಾಯಕ ಎಚ್‌.ವಿಶ್ವನಾಥ್‌ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದ್ದಾರೆ. ವಿಶ್ವನಾಥ್‌ ಅವರು ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಲಿದ್ದಾರೆ ಎಂಬ ಮಾತುಗಳು ಇದ್ದವಾದರೂ ಕೊನೆಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ. ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿದ್ದ ಎಚ್‌.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದ ನಂತರ ಕೆಲಸದ ಒತ್ತಡ ಹೆಚ್ಚಾಗಿರುವುದರಿಂದ ಪಕ್ಷದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಹೊಸ ಅಧ್ಯಕ್ಷರ ನೇಮಕ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಜತೆಗೆ ಎಲ್ಲ ಅಧಿಕಾರ ದೇವೇಗೌಡರ ಕುಟುಂಬದಲ್ಲೇ ಇರುತ್ತದೆ ಎಂಬ ಅಪವಾದದಿಂದ ತಪ್ಪಿಸಿಕೊಳ್ಳುವ ದೃಷ್ಟಿಯಿಂದ ಹೊಸ ರಾಜ್ಯಾಧ್ಯಕ್ಷರಿಗೆ ಹುಡುಕಾಟ ನಡೆಸಿದ್ದ ದೇವೇಗೌಡರು ಕೊನೆಗೆ ಅಳೆದೂ ತೂಗಿ ಎಚ್‌. ವಿಶ್ವನಾಥ್‌ ಅವರಿಗೆ ಪಟ್ಟ ಕಟ್ಟಿದ್ದಾರೆ. ತಮ್ಮ ಜತೆ ಪಕ್ಷ ಕಟ್ಟಲು ಹಿರಿಯ ಅನುಭವಿ ಒಬ್ಬರನ್ನು ಸೇರಿಸಿಕೊಂಡಿದ್ದಾರೆ.

Advertisement

ವಿಶ್ವನಾಥ್‌ ಅವರ ನೇಮಕಾತಿ ಹಿಂದೆ ಸಹಜವಾಗಿ ರಾಜಕೀಯ ಲೆಕ್ಕಾಚಾರಗಳು ಇಲ್ಲದಿಲ್ಲ. ಮೂಲತಃ ಕಾಂಗ್ರೆಸ್‌ನಿಂದ ಬಂದಿರುವ ವಿಶ್ವನಾಥ್‌ ಕುರುಬ ಸಮುದಾಯದ ನಾಯಕರು. ಸಿದ್ದರಾಮಯ್ಯ, ಕೆ.ಎಸ್‌. ಈಶ್ವರಪ್ಪ, ಎಚ್‌.ಎಂ.ರೇವಣ್ಣ ಹಾಗೂ ಎಚ್‌.ವಿಶ್ವನಾಥ್‌ ಆ ಸಮುದಾಯದ ನಾಯಕರಾಗಿದ್ದವರು. ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಗೆ ಸೇರ್ಪಡೆಯಾಗಲು ಹಾಗೂ ಮುಖ್ಯಮಂತ್ರಿಯಾಗಲು ಆಗ ಕಾಂಗ್ರೆಸ್‌
ನಲ್ಲಿದ್ದ ವಿಶ್ವನಾಥ್‌ ಸಹಕಾರವೂ ಇತ್ತು. ಸಿದ್ದರಾಮಯ್ಯ ಅವರೊಂದಿಗೆ ಭಿನ್ನಾಭಿಪ್ರಾಯ ದಿಂದ ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ ಸೇರಿದರು. ಜೆಡಿಎಸ್‌ ನಿಂದ ವಿಧಾನಸಭೆ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಸಿದ್ದರಾಮಯ್ಯ ಅವರು ಜೆಡಿಎಸ್‌ ಬಿಟ್ಟ ನಂತರ ಕುರುಬ ಸಮುದಾಯ ಜೆಡಿಎಸ್‌ ಬಗ್ಗೆ ಮುನಿಸಿಕೊಂಡಿದೆ ಎಂಬ ಮಾತುಗಳೂ ಇವೆ. ಇದನ್ನು ಸರಿಪಡಿಸಲು ಸೂಕ್ತ ನಾಯಕರ ಹುಡುಕಾಟದಲ್ಲಿದ್ದ ಜೆಡಿಎಸ್‌ಗೆ ಬಹಳ ವರ್ಷಗಳ ನಂತರ ಎಚ್‌.ವಿಶ್ವನಾಥ್‌ ಸಿಕ್ಕರು. ಸಿದ್ದರಾಮಯ್ಯ ಅವರಿಂದ ಉಂಟಾಗಿದ್ದ ನಷ್ಟ ವಿಶ್ವನಾಥ್‌ ಮೂಲಕ ತುಂಬಿಕೊಳ್ಳುವ ಪ್ರಯತ್ನ ಇದು ಎಂದೇ ಹೇಳಬಹುದು.

ಜತೆಗೆ ಕಾಂಗ್ರೆಸ್‌ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿರುವುದರಿಂದ ಮೂಲತಃ ಕಾಂಗ್ರೆಸ್‌ನವರಾದ ವಿಶ್ವನಾಥ್‌ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿ 
ದ್ದರೆ ನಿರ್ವಹಣೆ ಸುಲಭ. ಈಗಾಗಲೇ ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್‌ ಗುಂಡೂರಾವ್‌ ನೇಮಕಗೊಂಡಿದ್ದು ಈಗ ವಿಶ್ವನಾಥ್‌ ಜೆಡಿಎಸ್‌ ಅಧ್ಯಕ್ಷರಾಗಿರುವುದರಿಂದ ಸಹಜವಾಗಿ ಇಬ್ಬರೂ ಸಮನ್ವಯ ಸಮಿತಿಗೆ ಸೇರ್ಪಡೆಯಾಗಬಹುದು. ಕಾಂಗ್ರೆಸ್‌ನ ಹೈಕಮಾಂಡ್‌ ಜತೆಗೂ ವಿಶ್ವನಾಥ್‌ ಗೆ ಸಂಪರ್ಕ ಇದ್ದ ಕಾರಣ ಏನಾದರೂ ಸಮಸ್ಯೆ ಎದುರಾದರೆ ನಿಭಾಯಿಸಬಲ್ಲರು. ವಿಶ್ವನಾಥ್‌ಗೆ ಕಾಂಗ್ರೆಸ್‌ನ ನಾಡಿಮಿಡಿತ 
ಗೊತ್ತಿರುವುದರಿಂದ, ದಿನೇಶ್‌ಗುಂಡೂರಾವ್‌ ಹಾಗೂ ವಿಶ್ವನಾಥ್‌ ಜತೆ ಉತ್ತಮ ಬಾಂಧವ್ಯ ಇರುವುದರಿಂದ ಎಲ್ಲವೂ ಸುಸೂತ್ರವಾಗಲಿದೆ ಎಂಬ ದೂರದೃಷ್ಟಿ ದೇವೇಗೌಡರದು.

ಆದರೆ, ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಅವರು ವಿಶ್ವನಾಥ್‌ ನೇಮಕ ಯಾವ ರೀತಿ ಸ್ವೀಕರಿಸುತ್ತಾರೆ ಎಂಬ ಪ್ರಶ್ನೆಯೂ ಇದೆ. ಏಕೆಂದರೆ ಸಮನ್ವಯ ಸಮಿತಿಗೆ ವಿಶ್ವನಾಥ್‌ ಅವರು ಸದಸ್ಯರಾಗಲಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಜತೆ ಮುನಿಸಿಕೊಂಡೇ ಹೊರ ನಡೆದ ವಿಶ್ವನಾಥ್‌ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿ ದೊಡ್ಡ ಹುದ್ದೆಯೊಂದಿಗೆ ಸಮನ್ವಯ ಸಮಿತಿ ಸೇರ್ಪಡೆಯಾಗಲಿದ್ದಾರೆ.

ಹೀಗಾಗಿ, ಸಿದ್ದರಾಮಯ್ಯ ಅವರು ಈ ಬೆಳವಣಿಗೆ ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವಂತೂ ಇದೆ. ಇನ್ನು, ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿರುವ ಎಚ್‌.ವಿಶ್ವನಾಥ್‌ ಅವರಿಗೂ ಒಂದಷ್ಟು ಸವಾಲುಗಳು ಇದ್ದೇ ಇವೆ. ಮೊದಲಿಗೆ 105 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಅವರ ಪಾಲಿಗೆ ಅಗ್ನಿ ಪರೀಕ್ಷೆ. ನಂತರ ಲೋಕಸಭೆ ಚುನಾವಣೆ, ಆ ನಂತರ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ.
ಹೀಗಾಗಿ, ಇನ್ನೆರಡು ವರ್ಷ ಅವರು ಪಕ್ಷ ಸಂಘಟನೆ ಹಾಗೂ ಚುನಾವಣೆ ನಿಭಾಯಿಸುವುದರಲ್ಲೇ ಹೆಚ್ಚು ಸಮಯ ಮೀಸಲಿಡಬೇಕು. ಆರೋಗ್ಯ ಸಮಸ್ಯೆಯ ಕಾರಣದಿಂದ ಮೊದಲಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನ ಒಪ್ಪಿಕೊಳ್ಳಲು ವಿಶ್ವನಾಥ್‌ ಹಿಂದೇಟು ಹಾಕಿದರಾದರೂ, ಖುದ್ದು
ದೇವೇಗೌಡರು ಹೇಳಿದ ನಂತರ ನನಗೆ ದೊರೆತ ಅತಿ ದೊಡ್ಡ ಗೌರವ ಎಂದು ಒಪ್ಪಿಕೊಂಡಿದ್ದಾರೆ. ವಿಶ್ವನಾಥ್‌ ಅವರ ನೇತೃತ್ವದಲ್ಲಿ ಜೆಡಿಎಸ್‌ ಎಷ್ಟರ ಮಟ್ಟಿಗೆ ಬಲಿಷ್ಠವಾಗುತ್ತದೆ ಎಂಬುದು ಕಾದು ನೋಡಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next